Uncategorized

ಗೋಕರ್ಣ : ಮಹಾಬಲೇಶ್ವರ ದೇಗುಲದ ತಟ್ಟೆಕಾಸಿನ ಜಗಳಕ್ಕೆ ಬಿತ್ತು ಬ್ರೇಕ್

ಕಾರವಾರ : ದಕ್ಷಿಣ ಕಾಶಿ ಎಂದು ಖ್ಯಾತವಾದ ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಪೂಜಾ ಹಕ್ಕು ಮತ್ತು ತಟ್ಟೆ ಕಾಸಿಗಾಗಿ ಎರಡು ಗುಂಪುಗಳ ಅರ್ಚಕರ ನಡುವೆ ನಡೆಯುತ್ತಿದ್ದ ಮುಷ್ಠಿ ಕಾಳಗಕ್ಕೆ ಇದೀಗ ಬ್ರೇಕ್ ಬಿದ್ದಿದೆ.

ಆಸ್ತಿಕ ಭಕ್ತರಿಗೆ ಇದೀಗ ದೇಗುಲ ಆಡಳಿತ ಉಸ್ತುವಾರಿ ಸಮಿತಿ ಮಹಾಬಲೇಶ್ವರನ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ವಿವಾದವನ್ನು ಹುಟ್ಟು ಹಾಕಿದ್ದ ಅರ್ಚಕರಿಗೆ ಕಡಿವಾಣ ಹಾಕಿದೆ.

ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇಗುಲವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಮಚಂದ್ರಾಪುರ ಮಠದ ಆಡಳಿತದಿಂದ ತಪ್ಪಿಸಿ ಹೊಸ ಆಡಳಿತ ಉಸ್ತುವಾರಿ ಸಮಿತಿಯನ್ನು ರಚಿಸಿತ್ತು.ಈ ಸಮಿತಿ ಇದೀಗ ದೇಗುಲದ ಆಡಳಿತ ನಿರ್ವಹಣೆ ಮಾಡುತ್ತಿದೆ.ಆದಾಗ್ಯೂ ಎರಡು ಅರ್ಚಕ ಗುಂಪುಗಳ ಜಗಳ ಬೀದಿಗೆ ಬಂದು ತಟ್ಟೆ ಕಾಸಿಗಾಗಿ ಕಿತ್ತಾಡಿಕೊಂಡಿದ್ದರು.

ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಕುಳಿತು ಪೂಜೆ ಮಾಡುವ ಮತ್ತು ನಂದಿಗೃಹದಲ್ಲಿ ಪ್ರಸಾದ ವಿತರಿಸಿ,ಕಾಸು ಕೀಳುವ ಹಕ್ಕಿಗಾಗಿ ಸಂಘರ್ಷ ಏರ್ಪಟ್ಟಿತ್ತು.

ಈ ಕಾರಣಕ್ಕೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಭಕ್ತರಿಗೆ ದೇವರ ಪೂಜೆ ಹಾಗೂ ಆತ್ಮಲಿಂಗ ಸ್ಪರ್ಶ ಪೂಜೆಗೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಉಸ್ತುವಾರಿ ಆಡಳಿತ ಸಮಿತಿ ನಿರ್ಧಾರ ಪ್ರಕಟಿಸಿ ಭಕ್ತರಿಗೆ ಆತ್ಮಲಿಂಗ ಸ್ಪರ್ಶ ಪೂಜೆಗೆ ಅವಕಾಶ ಮಾಡಿಕೊಟ್ಟಿದೆ.

ತಮ್ಮ ಹಕ್ಕಿಗಾಗಿ ಗದ್ದಲ ಎಬ್ಬಿಸಿದ್ದ ಉಪಾಧಿವಂತ ಹಾಗೂ ಅನುವಂಶೀಯ ಅರ್ಚಕರಿಗೆ ಭಕ್ತರನ್ನು ಕರೆತಂದು ಪೂಜೆ ಮಾಡಲು ನಿರ್ಬಂಧ ವಿಧಿಸುವ ಜೊತೆಗೆ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ, ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ.ಎನ್.ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿರುವ ಉಸ್ತುವಾರಿ ಸಮಿತಿಯು ಅರ್ಚಕರ ಹಕ್ಕಿನ ಬಗ್ಗೆ ತೀರ್ಮಾನ ಮಾಡುವ ಸಮಿತಿ ಅಲ್ಲ.ದಿನ ನಿತ್ಯದ ಕಾರ್ಯಗಳಿಗೆ ಆಡಳಿತ ಮಾಡುವ ನಿರ್ವಹಣಾ ಸಮಿತಿ.ಅನುವಂಶೀಯ ಹಾಗೂ ಉಪಾಧಿವಂತ ಅರ್ಚಕರು ಕೋರ್ಟ್ ಆದೇಶ ತಂದರೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುವುದು. ಯಾರಿಗೂ ವೈಯಕ್ತಿಕವಾಗಿ ಪೂಜೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎರಡೂ ಕಡೆಯ ಗುಂಪಿನ ಅರ್ಚಕರಿಗೆ ಈ ಕುರಿತು ಸಮಿತಿಯ ಸದಸ್ಯರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕಳೆದ ತಿಂಗಳು ದೇಗುಲ ನಿರ್ವಹಣಾ ಸಮಿತಿಯು ಉಪಾಧಿವಂತ ಹಾಗೂ ಅನುವಂಶೀಯ ಅರ್ಚಕರ ಎರಡು ಪ್ರತ್ಯೇಕ ಸಭೆಯನ್ನು ಮಾಡಿ ಅಹವಾಲನ್ನು ಸ್ವೀಕರಿಸಿತ್ತು.ಆದರೆ ಯಾವುದೇ ನಿರ್ಧಾರಕ್ಕೆ ಸಮಿತಿ ಬಂದಿರಲಿಲ್ಲ.ಆದರೆ ಇದೀಗ ಸಮಿತಿಯ ಸದಸ್ಯರಾಗಿರುವ ಜಿಲ್ಲಾಧಿಕಾರಿಗೆ ಆಡಳಿತದ ಕುರಿತು ತೀರ್ಮಾನ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಭಕ್ತರಿಗೆ ಇದೀಗ ಮಹಾಬಲೇಶ್ವರನ ಸ್ಪರ್ಶ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಸಮಿತಿಯಿಂದ ನೇಮಕವಾದ ಅರ್ಚಕರು ದಿನನಿತ್ಯದ ಪೂಜಾ ಕಾರ್ಯ ಮಾಡಬಹುದಾಗಿದೆ.ಈ ಮೂಲಕ ಜಿಲ್ಲಾಧಿಕಾರಿ ಅವರು ಎರಡೂ ಬಣದ ಅರ್ಚಕರಿಗೆ ಬಿಸಿ ಮುಟ್ಟಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button