Uncategorized

ಕೊಡಗಿನಲ್ಲಿ ಗಾಂಜಾ ನಶೆ ಬಲು ಜೋರು : ಪೋಷಕರಿಗೆ ಸಂಕಟ – ಪೊಲೀಸರ ಪರೋಕ್ಷ ಬೆಂಬಲದ ಶಂಕೆ

ಕೊಡಗು: ಪೊಲೀಸರು ಚಾಪೆಯ ಒಳಗೆ ತೋರಿದರೆ ಕಳ್ಳರು ರಂಗೋಲಿ ಒಳಗೆ ತೂರಿ ತಮ್ಮ ಸಾಮರ್ಥ್ಯ ತೋರಿಸ್ತಿದ್ದಾರೆ. ಇದಕ್ಕೆ ಇಲಾಖೆಯಲ್ಲಿರುವ ಕೆಲವು ಹಣದಾಹಿ ಪೊಲೀಸರೂ ಕೂಡ ಕಾರಣ. ಸರ್ಕಾರಿ ಕೆಲಸ ಎಲ್ಲಾ ಸವಲತ್ತು ಇದ್ದರೂ ಹಣದಾಸೆಗೆ ಬಿದ್ದ ಕೆಲವು ಪುಂಡ ಪೊಲೀಸರ ತೆರೆಮೆರೆಯ ಸಹಾಯದಿಂದ ಅಪರಾಧಿಗಳು ಯಾವುದೇ ಭಯವಿಲ್ಲದೇ ಆತ್ಮ ವಿಶ್ವಾಸದಿಂದ ತಮ್ಮ ಕುಕೃತ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಕೊಡಗಿನಲ್ಲಿ ಗಾಂಜಾ ದಂಧೆಯನ್ನು ಬೇರು ಸಹಿತ ಕಿತ್ತು ಹಾಕಬೇಕೆಂದು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಮತ್ತೆ ಮತ್ತೆ ಅಕ್ರಮ ಚಿಗುರೊಡೆಯುತ್ತಿದ್ದು, ಯುವ ಸಮೂಹ ನಶೆಯಲ್ಲಿ ತೇಲಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಗಾಂಜಾ ದಂಧೆಕೋರರು ಆಟೋರಿಕ್ಷಾ ಅಥವಾ ಬೈಕ್‌ಗಳಲ್ಲಿ ಬಂದು ಗಾಂಜಾ ಮಾರುತ್ತಾರೆ. ನಿರ್ದಿಷ್ಟ ಪ್ರದೇಶ, ಜನನಿಬಿಡ ಪ್ರದೇಶಗಳಲ್ಲಿ ಈ ವ್ಯವಹಾರ ಕುದುರುತ್ತದೆ. ಮೊದಲಿಗೆ ಗಾಂಜಾ ಮಾರುವ ವ್ಯಕ್ತಿ ಖರೀಧಿದಾರನಿಗೆ ಗ್ರಾಹಕನ ಸೋಗನಲ್ಲಿ ಬಂದು ತನ್ನ ಆಟೋ ಅಥವಾ ಬೈಕ್ ಏರುವಂತೆ ತಿಳಿಸುತ್ತಾನೆ. ಮೊದಲೇ ನಿಗಧಿಪಡಿಸಿದಂತೆ ಗ್ರಾಹಕ ಬಂದು ಗಾಂಜಾ ದಂಧೆಕೋರನ ಆಟೋ ಏರಿ ತನಗೆ ಬೇಕಾದಷ್ಟು ಮಾಲು ತೆಗೆದುಕೊಂಡು ಹಣ ನೀಡುತ್ತಾನೆ. ಎಲ್ಲವೂ ಆಟೂ ಒಳಗೆ ನಡೆಯುವುದರಿಂದ ಹೊರಗಿನ ಜನರಿಗೆ ಸಣ್ಣ ಗುಮಾನಿಯು ಸಹ ಬರುವುದಿಲ್ಲ.

ಹಣ ಪಡೆದು ಗಾಂಜಾ ನೀಡುವ ಮೂಲಕ ದಂಧೆಕೋರ ಯುವಕರ ಪಾಲಿನ ಹೀರೋ ಆಗುತ್ತಾನೆ. ಗಾಂಜಾ ವ್ಯಸನಿಗಳಾಗಿರುವ ಯುವಕರು ಕೆಲಸಕ್ಕೂ ಹೋಗದೆ ಮನೆಯಲ್ಲೂ ಇರದೆ ಹೊಳೆ, ಕೆರೆ, ಮೋರಿ, ತಡೆಗೋಡೆ ಇನ್ನಿತರ ಪ್ರದೇಶಗಳಲ್ಲಿ ಹೊಗೆಯಾಡುತ್ತಾ ಕಾಲ ಕಳೆಯುತ್ತಾ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಅಪ್ಪ, ಅಮ್ಮನಿಗೆ ಭಾರವಾಗಿರುವ ಮಕ್ಕಳು ಗಾಂಜಾ ನಸೆಯಲ್ಲಿ ವರ್ತಿಸುವ ರೀತಿ ಸುತ್ತ-ಮುತ್ತಲಿನವರಿಗೆ ಭಯವನ್ನೂ ಮೂಡಿಸುತ್ತದೆ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುತ್ತೇವೆ ಎಂದು ಮೊದಲು ಹೊರಡುವ ಯುವಕರು ಪೋಷಕರು ಕೆಲಸಕ್ಕೆ ಹೋಗುವುದನ್ನೇ ಕಾದು ಗೊತ್ತಿಲ್ಲದಂತೆ ಮತ್ತೆ ಮನೆಗೆ ಬಂದು ಸೇರುತ್ತಾರೆ. ದಂಧೆಕೋರರು ಸಮಯ ನೋಡಿಕೊಂಡು ಯುವಕರಿರುವ ಮನೆ ಬಾಗಲು ಬಡಿದು ಗಾಂಜಾ ನೀಡಿ ಹೋಗುತ್ತಾರೆ.

ಸರಿಯಾದ ಕೆಲಸವೂ ಇಲ್ಲ, ಕೈಯಲ್ಲಿ ಹಣವೂ ಇಲ್ಲದ ಕಾರಣ ಗಾಂಜಾ ಚಟಕ್ಕಾಗಿ ಅಪ್ಪ, ಅಮ್ಮನ ಬಳಿ ಹಣಕ್ಕಾಗಿ ಅತಿರೇಕದ ವರ್ತನೆ ತೋರಿ ಪೀಡಿಸುತ್ತಿದ್ದಾರೆ. ಇದರಿಂದ ಅಸಹಾಯಕರಾಗಿರುವ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಗಾಂಜಾ ದಂಧೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಕೊಡಗಿನಲ್ಲಿ ಗಾಂಜಾ ನಶೆಗೆ ಬಿದ್ದ ಯುವಕರು ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಾಂಜಾ ಅಕ್ರಮದ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸರಿಗೆ ವಿಷಯ ತಿಳಿಸಿದರೆ ದಾಳಿ ಮಾಡದೆ ಮೌನಕ್ಕೆ ಶರಣಾಗುತ್ತಿದ್ದಾರೆ. ಇದರ ಹಿಂದಿನ ಮರ್ಮವೇನು ಎನ್ನುವುದು ಇನ್ನೂ ಚಿದಂಬರ ರಹಸ್ಯವಾಗಿದೆ.

ಅಮಾಯಕರು, ದ್ವಿಚಕ್ರ ವಾಹನದಾರಿಗಳು, ರಸ್ತೆ ಬದಿಯ ವ್ಯಪಾರಿಗಳ ಮೇಲೆ ತಮ್ಮ ಪೌರುಷ ತೋರಿಸಿ ಹಣ ಪೀಕುವ ಪೊಲೀಸರು ಸಮಾಜದ ಸ್ವಾಸ್ಥ್ಯ ಕೆಡಿಸುವವರ ಮೇಲೆ ಪ್ರೀತಿ ತೋರಿಸುತ್ತಾರೆ. ಗಾಂಜಾ ಹಾಗೂ ಇನ್ನಿತರ ಮಾದಕ ದ್ರವ್ಯಗಳನ್ನು ಸೇವಿಸಿ ಉಂಟಾಗುವ ಅನಾಹುತಗಳಿಗೆ ಕಣ್ಣಿದ್ದರೂ ನೋಡದೇ, ಕಿವಿ ಇದ್ದರೂ ಕೇಳದೇ ಕೇವಲ ಎಂಜಲು ಹಣದ ವ್ಯಾಮೂಹಕ್ಕೆ ಬಿದ್ದು ಇಂತಹ ಕುಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪೊಲೀಸರೇ ಹೊಣೆ ಎಂದು ಸಾರ್ವಜನಿಕರು ಅಸಮದಾನ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published.

Back to top button