Uncategorized

ಗಾಂಧಿ ಸ್ಮಾರಕ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆ: ಟಿ.ಪಿ.ರಮೇಶ್

ಮಡಿಕೇರಿ : ನಗರದ ಗಾಂಧಿ ಮಂಟದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.

ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್, ಇತರರು ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಗಾಂಧೀಜಿ ಅವರು ಜೀವನದುದ್ದಕ್ಕೂ ಶಾಂತಿ ಮತ್ತು ಅಹಿಂಸೆಯ ಮೂಲಕ ಜಯ ಸಾಧಿಸಬಹುದು ಎಂಬುದನ್ನು ಸಾರಿದರು ಎಂದರು.

ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ಅಹಿಂಸಾ ಮಾರ್ಗಕ್ಕೆ ಇಡೀ ವಿಶ್ವವೇ ಅವರನ್ನು ಶಾಂತಿದೂತ ಎಂದು ಗುರುತಿಸಿದೆ ಎಂದು ಜಿಲ್ಲಾಧಿಕಾರಿ ಅವರು ನುಡಿದರು.

ಮಹಾತ್ಮ ಗಾಂಧಿಯವರ ಸರಳ ಮತ್ತು ಶಾಂತಿಯುತ ಜೀವನವನ್ನು ನಾವೆಲ್ಲರೂ ಅನುಸರಿಸುವಂತಾಗಬೇಕು. ಮಹಾತ್ಮ ಗಾಂಧೀಜಿ ಅವರು ನಡೆದು ಬಂದ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.

ಸತ್ಯ ಮತ್ತು ಅಹಿಂಸೆಯ ಮೂಲಕ ಜೀವಿಸಿದ ವ್ಯಕ್ತಿ ಗಾಂಧೀಜಿ ಅವರಾಗಿದ್ದಾರೆ. ಜೀವನದ ಪ್ರತಿಯೊಂದು ಸಮಸ್ಯೆಗೂ ಶಾಂತಿ ಅಹಿಂಸೆಯ ಮೂಲಕ ಮುಕ್ತ ಮಾರ್ಗ ಪಡೆಯಬಹುದಾಗಿದೆ ಎಂದು ತೋರಿಸಿಕೊಟ್ಟವರು. ನಮ್ಮ ಜೀವನದಲ್ಲಿಯೂ ಬರಬಹುದಾದ ಸಮಸ್ಯೆಗಳಿಗೆ ನಾವು ಗಾಂಧಿ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ನುಡಿದರು.

ಸರ್ವೋದಯ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ನಗರದ ಗಾಂಧಿ ಮಂಟಪದಲ್ಲಿ ಗಾಂಧಿ ಸ್ಮಾರಕ ನಿರ್ಮಿಸಲು ಸರ್ಕಾರ 50 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸರ್ವೋದಯ ಸಮಿತಿಯು ಪ್ರತಿ ವರ್ಷವೂ ಗಾಂಧೀಜಿ ಅವರ ಜನ್ಮ ದಿನಾಚರಣೆ ಆಚರಿಸಿಕೊಂಡು ಬರುತ್ತಿದೆ. ಗಾಂಧಿ ಮಂಟಪದ ಆವರಣದಲ್ಲಿ ಸ್ಮಾರಕ ನಿರ್ಮಾಣ ಸಂಬಂಧ ಜಾಗದ ಮರು ಸರ್ವೇ ನಡೆದಿದೆ ಎಂದರು. ಗಾಂಧೀಜಿ ಅವರು ಮಡಿಕೇರಿಗೆ ಆಗಮಿಸಿ ಭಾಷಣ ಮಾಡಿದ ಜಾಗಕ್ಕೆ ಗಾಂಧಿ ಮೈದಾನ ಎಂದು ಹೆಸರಿಡಲಾಗಿದೆ.

ಗಾಂಧೀಜಿಯವರ ಜೀವನ ಮತ್ತು ಕಾರ್ಯವೈಖರಿಯನ್ನು ಅರ್ಥೈಸುವ ನಿಟ್ಟಿನಲ್ಲಿ ಮತ್ತು ಅವರ ಜೀವನದ ತತ್ವ ಪಾಲನೆಯನ್ನು ಅವರು ದೇಶಕ್ಕಾಗಿ ಮಾಡಿದ ತ್ಯಾಗ ಅವರ ಸರಳ ಜೀವನ ಮುಂತಾದವುಗಳನ್ನು ಜನಮನದಲ್ಲಿ ಬಿತ್ತುವ ಕೆಲಸ ಸರ್ವೋದಯ ಸಮಿತಿಯಿಂದ ನಡೆಯುತ್ತಿದೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button