Uncategorized

ಅಂಕೋಲಾದ ಬಾಸಗೋಡಿನಲ್ಲಿದೆ ಗಾಂಧೀಜಿ ಮಂದಿರ

ತೇಜಸ್ವಿ ಬಿ.ನಾಯ್ಕ

ಕಾರವಾರ : ಭಾರತದ ಸ್ವಾತಂತ್ರ್ಯ ಸಂಗ್ರಾಮ ಅಪೂರ್ವ ತ್ಯಾಗ,ಬಲಿದಾನಗಳ ರೋಚಕ ಕಥೆ.ಸತ್ಯಾಗ್ರಹ ಮತ್ತು ಸಂಘರ್ಷಗಳ ಸಂಭ್ರಮದ ಅಧ್ಯಾಯ. ಧೀರ್ಘಕಾಲದ ಸ್ವಾತಂತ್ರ್ಯ ಹೋರಾಟದ ಓಟದಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಧನ್ಯರಾಗಿದ್ದಾರೆ.ಉತ್ತರ ಕನ್ನಡ ಜಿಲ್ಲೆ ಸ್ವಾತಂತ್ರ್ಯ ಚಳವಳಿಯಲ್ಲಿ ಅಪೂರ್ವ ಸಾಹಸ ಮತ್ತು ತ್ಯಾಗ ಪರಂಪರೆ ಕರ್ನಾಟಕಕ್ಕೆ ಕೀರ್ತಿಯನ್ನು ತಂದುಕೊಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ಸ್ವಾತಂತ್ರ್ಯ ಚಳವಳಿಯ ಕೇಂದ್ರಸ್ಥಾನ.ಇಲ್ಲಿ ಕರಬಂಧಿ ಸತ್ಯಾಗ್ರಹ,ಉಪ್ಪಿನ ಸತ್ಯಾಗ್ರಹ ಹೆಸರು ಮಾಡಿದ ಚಳವಳಿ.ಅಂಕೋಲೆಯ ಸ್ವಾತಂತ್ರ್ಯ ಹೋರಾಟಗಾರರ ದೇಶ ಪ್ರೇಮವನ್ನು ಕಂಡು ಮಹಾತ್ಮಾ ಗಾಂಧೀಜಿಯವರು ಅಂಕೋಲೆಗೆ ಭೇಟಿ ಕೂಡ ನೀಡಿದ್ದರು.ಅವರ ಕಟ್ಟಾಭಿಮಾನಿಯೋರ್ವರು ತಾಲೂಕಿನ ಬಾಸಗೋಡ ಗ್ರಾಮದಲ್ಲಿ ಗಾಂಧೀಜಿಯವರ ದೇಗುಲವನ್ನು ನಿರ್ಮಾಣ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗಂಗಾವಳಿ ನದಿ ತೀರದ 40 ಹಳ್ಳಿಗಳು ಕರಬಂಧಿ ಹಳ್ಳಿಗಳೆಂದು ಪ್ರಸಿದ್ಧವಾಗಿತ್ತು.ಈ ಕರ ನಿರಾಕರಣೆಯ ಕರ್ಮಭೂಮಿಯ ಮನೆ – ಮನೆಗಳಲ್ಲಿ ಕರಬಂಧಿ ವೀರರು ಹುಟ್ಟಿಕೊಂಡು ದೇಶಾಭಿಮಾನದಿಂದ ಕೆಚ್ಚೆದೆಯ ಹೋರಾಟವನ್ನು ನಡೆಸಿದ್ದಾರೆ.ಈ ಸ್ವಾತಂತ್ರ್ಯ ಸಂಗ್ರಾಮದ ವೀರ ಯೋಧರಲ್ಲಿ ಎಲ್ಲರ ಗಮನ ಸೆಳೆದು ಮನೆಮಾತಾದವರು ಅಂಕೋಲಾ ತಾಲೂಕಿನ ಬಾಸಗೋಡ ಗ್ರಾಮದ ರಾಮಾ ನಾಯಕ ಅವರು.

ಅಂಕೋಲಾ ತಾಲೂಕು ಕರ್ನಾಟಕದ ಬಾರ್ಡೋಲಿ ಎಂದು ಸ್ವಾತಂತ್ರ್ಯ ಚಳವಳಿಯಲ್ಲಿ ಹೆಸರಾಗಿತ್ತು.ಉಪ್ಪಿನ ಸತ್ಯಾಗ್ರಹದಲ್ಲಿ ಅಂಕೋಲಾ ತಾಲೂಕು ಕರ್ನಾಟಕದ ಸಮರ ಭೂಮಿಯಾಗಿ ಪ್ರಸಿದ್ಧಿ ಪಡೆದಿತ್ತು.ಬಾಸಗೋಡ ಗ್ರಾಮ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ತನ್ನದೇ ಆದ ಹೆಸರನ್ನು ಮಾಡಿದೆ.ಈ ಊರಿನಲ್ಲಿ ಜನಿಸಿದ ಕರಬಂಧಿ ಡಿಕ್ಟೇಟರನಾಗಿ ಅಪ್ರತಿಮ ಸಾಹಸಗೈದ ಹಿರಿಯ ಸ್ವಾತಂತ್ರ್ಯಯೋಧ ದಿವಂಗತ ರಾಮಾ ನಾಯಕರು ಬಾಸಗೋಡ ಗ್ರಾಮಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ.ಬಾಸಗೋಡ ರಾಮಾ ನಾಯಕರು ಅಪ್ಪಟ ಗಾಂಧಿವಾದಿ.ಇವರ ದೇಶಪ್ರೇಮಕ್ಕೆ ಮನಸೋತು ಗಾಂಧೀಜಿಯವರೇ 1934 ರಲ್ಲಿ ಅಂಕೋಲೆಗೆ ಧಾವಿಸಿ ಬಂದಿದ್ದರು.ಕರಬಂಧಿ ಮತ್ತು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದರ ಮೂಲಕ ಇಡೀ ಅಂಕೋಲೆಯ ಸ್ವಾತಂತ್ರ್ಯಯೋಧರನ್ನು ಹುರಿದುಂಬಿಸಿದ್ದರು.

ಬಾಸಗೋಡ ರಾಮಾ ನಾಯಕರು ಎಲ್ಲರೊಂದಿಗೆ ಮಾತನಾಡುವಾಗ ಗಾಂಧಿ, ಜವಾಹರಲಾಲ್ ನೆಹರು,ಸರದಾರವಲ್ಲಭಬಾಯಿ ಪಟೇಲ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಉದಾಹರಣೆಯನ್ನು ನೀಡುತ್ತಿದ್ದರು.ಗಾಂಧೀಜಿಯ ಆದರ್ಶ,ಉಪದೇಶ,ಸಂದೇಶಗಳನ್ನು ತಪ್ಪದೇ ಪಾಲಿಸುತ್ತಿದ್ದರು “ಗಾಂಧಿ, ಗಾಂಧಿ,ಸರ್ವತ್ರ ಗಾಂಧಿ” ಹೀಗೆ ಗಾಂಧಿಯನ್ನು ಎಲ್ಲೆಲ್ಲೂ ಕಾಣುತ್ತಿದ್ದರು.ರಾಮಾ ನಾಯಕರಿಗಂತೂ ಗಾಂಧೀಜಿ ಅವರ ಬಗ್ಗೆ ಪುರಾಣದ ಹನುಮಂತನ ನಿಷ್ಠೆಯಾಗಿತ್ತು.ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗುವುದಕ್ಕೆ ನಿಷ್ಠೆಯಿಂದ ದುಡಿದರು.ಆದರೆ ಆಕಸ್ಮಿಕವಾಗಿ ಗಾಂಧೀಜಿಯವರ ಹತ್ಯೆ ರಾಮ ನಾಯಕರಿಗೆ ಆಘಾತವನ್ನು ಉಂಟು ಮಾಡಿತ್ತು.

ಬಾಸಗೋಡ ಊರಿನ ಜನರು ಗಾಂಧೀಜಿಯವರ ಹತ್ಯೆಯನ್ನು ಕೇಳಿ ನಂಬದೇ ಚಡಪಡಿಸಿದರು.ಒಂದು ಕ್ಷಣವೂ ಗಾಂಧೀಜಿಯವರನ್ನು ಮರೆಯುವುದು ಅವರಿಗೆ ಸಾಧ್ಯವಾಗಲಿಲ್ಲ.ಗಾಂಧೀಜಿಯವರ ಪರಮ ಭಕ್ತರಾದ ಅವರು ತಮ್ಮ ತನುಮನಗಳಲ್ಲಿ ಗಾಂಧೀಜಿಯನ್ನು ತುಂಬಿಕೊಂಡಿದ್ದರು.ಬಾಸಗೋಡ ರಾಮಾ ನಾಯಕರ ಹಾಗೂ ಸ್ವಾತಂತ್ರ್ಯ ಯೋಧರ ಪ್ರೇರಣೆಯಿಂದ ಗಾಂಧೀಜಿಯ ಮಂದಿರವನ್ನು ಸ್ಥಾಪಿಸಲು ಒಮ್ಮತದಿಂದ ನಿರ್ದಾರವನ್ನು ಕೈಗೊಳ್ಳಲಾಯಿತು. ರಾಮಾ ನಾಯಕರು ಬಾಸಗೋಡಿನಲ್ಲಿರುವ ತಮ್ಮ ಎರಡು ಗುಂಟೆ ಸ್ಥಳವನ್ನು ಗಾಂಧೀ ದೇಗುಲ ಸ್ಥಾಪಿಸಲು ದಾನವಾಗಿ ನೀಡಿದರು.ಬೇರೆ ಕಡೆಯಿಂಧ ದೇಣಿಗೆ ರೂಪದಲ್ಲಿ ಹಣವನ್ನು ಸಂಗ್ರಹಿಸಿದರು.ಗಾಂಧಿ ಮಂದಿರ ಕಟ್ಟಲು ಅರಣ್ಯ ಇಲಾಖೆಯಿಂದ ಮಾಫಿ ಕಟ್ಟಿಗೆ ಮಂಜೂರಿ ಮಾಡಿಸಿಕೊಂಡರು.ಹೊನ್ನಾವರದ ಎಮ್.ಎಮ್. ಜಾಲಿಸತ್ಗಿಯವರ ಮೂಲಕ ಅಲ್ಲಿನ ಶಿಲ್ಪಿಯೊಬ್ಬರಿಂದ 500 ರೂ. ವೆಚ್ಚದಲ್ಲಿ ಗಾಂಧಿ ಪ್ರತಿಮೆಯನ್ನು ಸಿದ್ದಪಡಿಸಿಕೊಂಡು ತಂದರು.ಬಾಸಗೋಡ ಊರಿನ ಸ್ವಾತಂತ್ರ್ಯಯೋಧರ,ಊರ ನಾಗರಿಕರ ಅಪಾರ ಪರಿಶ್ರಮದಿಂದ ಇಲ್ಲಿ 1951ರಲ್ಲಿ ಗಾಂಧಿ ಮಂದಿರ ನಿರ್ಮಾಣವಾಯಿತು.ಇಡೀ ಊರಿಗೆ ಊರೇ ಅಂದು ಸಂಭ್ರಮಿಸಿತು.

ಜೀರ್ಣಾವಸ್ಥೆಯಲ್ಲಿದ್ದ ಗಾಂಧಿ ಮಂದಿರವನ್ನು ಇತ್ತೀಚೆಗೆ ರಾಮಾ ನಾಯಕರ ಮೊಮ್ಮಕ್ಕಳು ಅಚ್ಚುಕಟ್ಟಾಗಿ ದುರಸ್ತಿ ಮಾಡಿದ್ದಾರೆ.ಗಾಂಧಿ ಜಯಂತಿ, ಸ್ವಾತಂತ್ರ್ಯೋತ್ಸವ ಮತ್ತು ಪ್ರಜಾರಾಜ್ಯೋತ್ಸವ ದಿನಗಳಂದು ಇಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.ಶಾಲಾ ಮಕ್ಕಳು ಮತ್ತು ಊರ ನಾಗರಿಕರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.ಇಂದು ನಾವು ಗಾಂಧೀಜಿಯವರನ್ನು ಮರೆತರೂ ಈ ಗಾಂಧಿ ದೇಗುಲ ಮಾತ್ರ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ.ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಗಾಂಧಿ ಮಂದಿರ ಅಂಕೋಲಾ ತಾಲೂಕಿನ ಬಾಸಗೋಡಿನಲ್ಲಿದೆ ಎಂಬುದೇ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

Related Articles

Leave a Reply

Your email address will not be published.

Back to top button