Uncategorized

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎ, ಬಿಎಸ್ಸಿ ಆನರ್ಸ್ ದೇಶದಲ್ಲೇ ಮೊದಲು: ಪ್ರೊ. ವೇಣುಗೋಪಾಲ್ ಕೆ. ಆರ್

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮದಡಿ ಭಾರತದಲ್ಲೇ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷಗಳ ಬಿಎ ಹಾಗೂ ಬಿಎಸ್ಸಿ ಆನರ್ಸ್ ಪದವಿ ಕೋರ್ಸ್‍ಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್. ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿ.ಎ. ಹಾಗೂ ಬಿಎಸ್ಸಿ ಆನರ್ಸ್‍ನಲ್ಲಿ ಬಹು ಪ್ರವೇಶ ಹಾಗೂ ಬಹು ನಿರ್ಗಮನವಿರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ವಿದ್ಯಾರ್ಥಿಗಳು ಯಾವುದೇ ಪ್ರಧಾನ ವಿಷಯದ ಜೊತೆಗೆ ಬೇರೆ ವಿಷಯಗಳನ್ನು ಅಧ್ಯಯನ ಮಾಡಲು ಸಾಧ್ಯವಾಗುವಂತೆ ಅಂತರ್​ ಶಿಸ್ತೀಯ, ಬಹು ಶಿಸ್ತೀಯ, ಅಡ್ಡ ಶಿಸ್ತೀಯ ಪ್ರವೇಶ ಹಾಗೂ ನಿರ್ಗಮನದ ವ್ಯವಸ್ಥೆ ಮಾಡಲಾಗಿದೆ. ಈ ಕೋರ್ಸ್‍ಗಳು ಕೌಶಲ್ಯಾಧಾರಿತ ಹಾಗೂ ಆಯ್ಕೆ ಆಧಾರಿತ ಆಗಿದ್ದು, ಅದರಂತೆ ಪದವಿಯ ಮೊದಲ ವರ್ಷದ ನಂತರ ನಿರ್ಗಮಿಸುವವರಿಗೆ ಕಲಾ ಅಥವಾ ವಿಜ್ಞಾನ ವಿಭಾಗದಲ್ಲಿ ಪ್ರಮಾಣಪತ್ರ, ಎರಡನೇ ವರ್ಷ ನಿರ್ಗಮಿಸುವವರಿಗೆ ಕಲಾ ಅಥವಾ ವಿಜ್ಞಾನ ಡಿಪ್ಲೊಮಾ, ಮೂರನೇ ವರ್ಷ ನಿರ್ಗಮಿಸುವವರಿಗೆ ಬಿಎ ಅಥವಾ ಬಿಎಸ್ಸಿ ಪದವಿ, ನಾಲ್ಕನೇ ವರ್ಷ ನಿರ್ಗಮಿಸುವವರಿಗೆ ನಿಗದಿತ ವಿಷಯದಲ್ಲಿ ಬಿಎ/ಬಿಎಸ್ಸಿ ಆನರ್ಸ್ ನೀಡಲಾಗುವುದು. ಪ್ರಸ್ತುತ ವರ್ಷ ಸಮಾಜಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ರಾಜ್ಯಶಾಸ್ತ್ರ ವಿಷಯಗಳಲ್ಲಿ ಬಿಎ ಆನರ್ಸ್ ನೀಡಲಾಗುವುದು ಎಂದು ಹೇಳಿದ್ದಾರೆ. ಈ ನಾಲ್ಕು ಪ್ರಧಾನ ವಿಷಯಗಳ ಜೊತೆಗೆ ವಿದ್ಯಾರ್ಥಿಗಳು ದೃಶ್ಯ ಕಲೆ, ಪ್ರದರ್ಶನ ಕಲೆ, ಕಾಮರ್ಸ್, ನಿರ್ವಹಣೆ ಹಾಗೂ ವಿಜ್ಞಾನವನ್ನು ಲಘು ವಿಷಯಗಳನ್ನಾಗಿ ಬಿಎ ಆನರ್ಸ್‍ನಲ್ಲಿ ಕಲಿಯಲಿದ್ದಾರೆ.

ಅದೇ ರೀತಿ ಬಿಎಸ್ಸಿ ಕೋರ್ಸ್‍ನಡಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ಸಂಖ್ಯಾಶಾಸ್ತ್ರ, ಗಣಕ ವಿಜ್ಞಾನಗಳನ್ನು ಪ್ರಧಾನ ವಿಷಯಗಳನ್ನಾಗಿ ಮತ್ತು ಲಘು ವಿಷಯಗಳನ್ನಾಗಿ ಸಮಾಜಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ದೃಶ್ಯ ಕಲೆ, ಪ್ರದರ್ಶನ ಕಲೆ, ಕಾಮರ್ಸ್ ಹಾಗೂ ನಿರ್ವಹಣೆ ಕಲಿಯಲಿದ್ದಾರೆ. ವಿಜ್ಞಾನ ಪದವಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು 10+2 (ಪಿಯುಸಿ) ಯಲ್ಲಿ ಗಣಿತವನ್ನು ಕಡ್ಡಾಯವಾಗಿ ಕಲಿತಿರಬೇಕು.

ಒಂದು ವೇಳೆ ವಿದ್ಯಾರ್ಥಿಗಳೇನಾದರೂ ಬೇರೊಂದು ವಿಷಯದಲ್ಲಿ ಎರಡನೇ ಆನರ್ಸ್ ಪದವಿ ಬೇಕೆಂದರೆ ಮತ್ತೊಂದು ವರ್ಷ ಆ ನಿಗದಿತ ವಿಷಯವನ್ನು ಕಲಿಯಬೇಕಾಗುತ್ತದೆ. ಉದಾಹರಣೆಗೆ ವಿದ್ಯಾರ್ಥಿ ರಸಾಯನಶಾಸ್ತ್ರದಲ್ಲಿ ಬಿಎಸ್ಸಿ ಆನರ್ಸ್ ಪಡೆದು ಗಣಿತದಲ್ಲೂ ಆನರ್ಸ್ ಪದವಿ ಬೇಕೆಂದರೆ ಮತ್ತೊಂದು ವರ್ಷ ಗಣಿತದ ವಿಷಯವನ್ನು ಕಲಿಯಬೇಕಾಗುತ್ತದೆ.

ವಿಜ್ಞಾನ ಅಥವಾ ಕಲಾ ವಿಭಾಗದಲ್ಲಿ ಪದವಿ ಪಡೆದ ನಂತರ ವಿದ್ಯಾರ್ಥಿ ಎರಡು ವರ್ಷದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು ಅಥವಾ ನಿಗಧಿತ ವಿಷಯದಲ್ಲಿ ಆನರ್ಸ್ ಪದವಿ ಪಡೆದು ಒಂದು ವರ್ಷದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು. ನಾಲ್ಕನೇ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಎರಡು ಆಯ್ಕೆಗಳಿದ್ದು, ಒಂದು ಆನರ್ಸ್ ಪದವಿ ಮತ್ತೊಂದು ಸಂಶೋಧನಾ ಪದವಿ. ವಿದ್ಯಾರ್ಥಿ ಆನರ್ಸ್ ಪದವಿ ಪಡೆದು ಒಂದು ವರ್ಷದ ಸ್ನಾತಕೋತ್ತರ ಪದವಿಗೆ ಸೇರಬಹುದು ಅಥವಾ ಸಂಶೋಧನಾ ಪದವಿ ಪಡೆದು ನೇರವಾಗಿ ಪಿಎಚ್‍ಡಿಗೆ ಪ್ರವೇಶ ಪಡೆಯಬಹುದು.
ಈ ಕೋರ್ಸ್‍ಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿ ನಿಲಯಗಳ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಜೊತೆಗೆ ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದ ವರ್ಗಗಳು ಹಾಗೂ ವಿಕಲಚೇತನರಿಗೆ ಪ್ರವೇಶ ಶುಲ್ಕದಲ್ಲಿ ವಿನಾಯಿತಿಯನ್ನು ಸರ್ಕಾರದ ನಿಯಮಾವಳಿಯಂತೆ ನೀಡಲಾಗುವುದು. ಈ ಅವಕಾಶವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನೀಡಲು ಸಂಬಂಧಪಟ್ಟವರಿಂದ ಅನುಮತಿ ಪಡೆಯಲಾಗಿದೆ ಎಂದು ಪ್ರೊ. ವೇಣುಗೋಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ ಜಾಲತಾಣ www.bangaloreuniversity.ac.in ನಲ್ಲಿ ಲಭ್ಯವಿರುವ ಅರ್ಜಿಯನ್ನು ಆನ್ ಲೈನ್ ಮುಖಾಂತರ ಭರ್ತಿ ಮಾಡಿ ಅಕ್ಟೋಬರ್​ 28 ರ ಒಳಗಾಗಿ ಸಲ್ಲಿಸಬಹುದು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ 5 ವರ್ಷಗಳ ಜೈವಿಕ ವಿಜ್ಞಾನ ಇಂಟಿಗ್ರೇಟೆಡ್ ಬಿ.ಎಸ್ಸಿ/ಎಂ.ಎಸ್ಸಿ ಪದವಿ ಇದೀಗ ರಾಷ್ಟ್ರೀಯ ಶಿಕ್ಷಣ ನಿಯಮಾವಳಿ ಅನ್ವಯ ಲಭ್ಯವಿದ್ದು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button