ರನ್ನ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹಿಸಿ 98 ದಿನಗಳಿಂದ ರೈತರ ಧರಣಿ: ನಾಳೆ ಉಪವಾಸ ಸತ್ಯಾಗ್ರಹ
ಬಾಗಲಕೋಟೆ: ಮುಧೋಳ ರನ್ನ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕಾಗಿ ಆಗ್ರಹಿಸಿ ಕಳೆದ 98 ದಿನಗಳಿಂದ ಧರಣ ಸತ್ಯಾಗ್ರಹ ನಡೆಯುತ್ತಿದ್ದು. ಕ್ಷೇತ್ರದ ಶಾಸಕ ಸಚಿವ ಗೋವಿಂದ ಕಾರಜೋಳ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿಲ್ಲ. ನಾಳೆ ಕನ್ನಡ ರಾಜ್ಯೋತ್ಸವದಂದು ರೈತರು ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ ಎಂದು ಮುಧೋಳದಲ್ಲಿ ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ ಹೇಳಿದರು.
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಖಾನೆ ಆರಂಭಿಸುವಂತೆ ಹಾಗೂ ಅಧ್ಯಕ್ಷ ರಾಮಣ್ಣ ತಳೇವಾಡ ಭ್ರಷ್ಟಾಚಾರ ಖಂಡಿಸಿ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಆದರೆ ಉತ್ತರ ಕರ್ನಾಟಕದವರೇ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭದ ಬಗ್ಗೆ ಕ್ರಮಕೈಗೊಂಡಿಲ್ಲ. ಅದೇ ಮಂಡ್ಯ ಮೈ ಶುಗರ್ ಕಾರ್ಖಾನೆ ಸರಕಾರಿ ಸ್ವಾಮ್ಯದಲ್ಲೇ ಮುಂದುವರೆಯಲು ನಿರ್ಧರಿಸಿದ್ದಾರೆ.
ಇನ್ನು ಬೈ ಎಲೆಕ್ಷನ್ ನಲ್ಲಿ ಸಚಿವ ಗೋವಿಂದ ಕಾರಜೋಳ ರೈತಪರ, ಕಾರ್ಮಿಕರ ಪರ ಬಗ್ಗೆ ಮಾತನಾಡಿದ್ದಾರೆ. ಆದರೆ ಇವರಿಗೆ ಮುಧೋಳ ಕ್ಷೇತ್ರದ ರನ್ನ ಕಾರ್ಖಾನೆ ಕಾರ್ಮಿಕರು, ರೈತರ ಬಗ್ಗೆ ಕಾಳಜಿ ಇಲ್ಲ ಎಂದರು. ಇನ್ನು ನಾಳೆ ನವೆಂಬರ್ 1 ಕನ್ನಡ ರಾಜ್ಯೋತ್ಸವ ಕನ್ನಡಿಗರ ಹಬ್ಬ. ಆದರೆ ನಮಗೆ ನ್ಯಾಯ ಸಿಗುವವರೆಗೂ ನಾಳೆಯೂ ಆಮರಣ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದು ಕಾರ್ಮಿಕ ಪ್ರಕಾಶ್ ಕಬ್ಬೂರ ಹೇಳಿದರು.
ಇನ್ನು ರನ್ನ ಸಹಕಾರ ಸಕ್ಕರೆ ಕಾರ್ಖಾನೆಯ ಯುನಿಯನ್ ಅಧ್ಯಕ್ಷ ಈರನಗೌಡ ಪಾಟೀಲರು ಮತ್ತು ಕಿಶೋರ ಜಗದಾಳೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಲಿದ್ದಾರೆ. ಈ ಸಂದರ್ಭದಲ್ಲಿ ಈರನಗೌಡ ಪಾಟೀಲ, ಪ್ರಕಾಶ ಕಬ್ಬೂರ, ನಾಗಪ್ಪ ಕೆಳಗಡೆ, ಕಾಳಪ್ಪ ಕಂಬಾರ, ತಿಪ್ಪಣ್ಣ ಯಡಹಳ್ಳಿ ಇದ್ದರು.