ಆರ್ಐ ಲಂಚ ಸ್ವೀಕಾರ ವಿಡಿಯೋ ವೈರಲ್; ಕ್ರಮ ಜರುಗಿಸದ ಬಗ್ಗೆ ರೈತ ಸಂಘ ಖಂಡನೆ
ರಾಮನಗರ: ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿಪುರ ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ತಹಸೀಲ್ದಾರ್ ಹಾಗೂ ಕೆಲ ನೌಕರವರ್ಗ ಲಂಚ ಪಡೆಯುತ್ತಿರುವುದರ ವಿಚಾರವಾಗಿ ಈಗಾಗಲೇ ದೂರು ನೀಡಲಾಗಿದ್ದು, ಕ್ರಮ ತೆಗೆದುಕೊಳ್ಳಲು ವಿಳಂಭ ಮಾಡುತ್ತಿರುವುದನ್ನು ಖಂಡಿಸಿ ತಹಸೀಲ್ದಾರ್ ಅವರಿಗೆ ರೈತ ಸಂಘ ಮನವಿ ಮಾಡಿತು.
.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಅಣ್ಣಿಗೆರೆ ಮಲ್ಲಯ್ಯ, ವಿರುಪಾಕ್ಷಿಪುರ ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪತಹಸೀಲ್ದಾರ್ ದಿವಾಕರ್ ಹಾಗೂ ಕೆಲ ನೌಕರರು ಸಾರ್ವಜನಿಕರಿಂದ ಲಂಚ ಪಡೆಯುತ್ತಿರುವುದರ ಬಗ್ಗೆ ವಿಡಿಯೋ ವೈರಲ್ ಆಗಿದ್ದು, ಅದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ತಾಲ್ಲೂಕು ದಂಡಾಧಿಕಾರಿ ಕೆ.ಎನ್.ರಮೇಶ್, ಸಂಬಂಧಿಸಿದ ಅಧಿಕಾರಿಗಳ ಮೇಲೆ ದೂರು ಬಂದಿದ್ದು ಈಗಾಗಲೇ ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ, ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು, ಸಮಗ್ರವಾದ ತನಿಖೆ ನಡೆದು, ತಪಿತಸ್ತರ ವಿರುದ್ದ ನಿರ್ದಾಕ್ಷಣ್ಯವಾಗಿ ಜಿಲ್ಲಾಧಿಕಾರಿಗಳು ಕ್ರಮ ತಗೆದುಕೊಳ್ಳುತ್ತಾರೆಂದು ತಿಳಿಸಿದರು.
ರೈತಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ರಾಜು ಮಾತನಾಡಿ, ವಿರುಪಾಕ್ಷಿಪುರ ನಾಡಕಚೇರಿಯಲ್ಲಿ ಮಾತ್ರ ಲಂಚಗುಳಿತನವಲ್ಲದೆ ತಾಲ್ಲೂಕಿನ ಎಲ್ಲಾ ನಾಡಕಚೇರಿಗಳಲ್ಲಿಯೂ ಲಂಚ ಎಂಬುದು ಬೇರುಬಿಟ್ಟಿದೆ, ಅಲ್ಲದೆ ತಾಲ್ಲೂಕು ಕಚೇರಿಯಲ್ಲಿಯೂ ರೈತರ ಯಾವುದೇ ಕೆಲಸಗಳು ಅಗುತ್ತಿಲ್ಲ, ಹಣ ಕೊಟ್ಟರೆ ಮಾತ್ರ ಕೆಲಸವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಸಿಬ್ಬಂದಿ ವರ್ಗಕ್ಕೆ ಅವರ ಹುದ್ದೆಯ ಗುರುತಿನ ಪತ್ರ ಇಲ್ಲದಿರುವುದರಿಂದ ಯಾವ ಅಧಿಕಾರಿಗಳೆಂದು ಗುರುತಿಸುವುದೇ ಸಮಸ್ಯೆಯಾಗಿದೆ ಎಂದರು.
ತಾಲೂಕು ಕಚೇರಿಯ ಅಧಿಕಾರಿಗಳಿಂದ ಪ್ರಾರಂಭವಾಗಿ ಡಿ ಗ್ರೂಪ್ ನೌಕರರವರೆಗೂ ಗುರುತಿನ ಪತ್ರ ನೀಡಲಾಗಿದೆ, ಗುರುತಿನ ಪತ್ರವನ್ನು ಹಾಕಿಕೊಂಡೇ ಕರ್ತವ್ಯ ನಿರ್ವಹಿಸುವಂತೆ ಅದೇಶ ನೀಡಲಾಗಿದೆ ಎಂದು ದಂಡಾಧಿಕಾರಿಗಳು ತಿಳಿಸಿದರು.
ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮಲೆಕ್ಕಿಗರು ತಮ್ಮ ಕೇಂದ್ರ ಸ್ಥಾನದಲ್ಲಿರದೆ ಎಲ್ಲೆಂದರಲ್ಲಿ ರೈತರನ್ನು ಬರಮಾಡಿಕೊಂಡು ಕೆಲಸ ಮಾಡಿಕೊಡಲು ಸತಾಯಿಸುತ್ತಾರೆ, ಇದು ಸರಿಯೇ ಕೆಲವೊಮ್ಮೆ ಮಿಲಟರಿ ಹೋಟೆಲ್ಗಳಿಗೂ ಕರೆಯಿಸಿಕೊಳ್ಳುವ ಇವರು ತಮ್ಮ ಕೆಲಸಗಳಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಂಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಸರಕಾರಿ ಕೆಲಸದಲ್ಲಿ ಉಡಾಫೆ ಮಾಡುವವರ ಬಗ್ಗೆ ನನ್ನ ಗಮನಕ್ಕೆ ತಂದರೆ, ಅವರಿಗೆ ಕಾನೂನಿನಡಿ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಹಾಗೂ ನಿಮ್ಮ ದೂರುದುಮ್ಮಾನಗಳನ್ನು ಆಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ದಂಡಾಧಿಕಾರಿಗಳ ಜೊತೆ ರೈತನಾಯಕರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಗೌರವಾದ್ಯಕ್ಷ ತಿಮ್ಮೇಗೌಡ, ತಾಲ್ಲೂಕು ಅಧ್ಯಕ್ಷ ರಾಮೇಗೌಡ, ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ, ರೈತ ಸಂಘದ ಮುಖಂಡರುಗಳಾದ ಗುರುಲಿಂಗಯ್ಯ, ರವಿ, ಮೊಹನ್, ಜೈಕೃಷ್ಣ, ವಿಜಯ್ಕುಮಾರ್ ಹಾಜರಿದ್ದರು.