Uncategorized

ಸುಳ್ಳು ದಾಖಲೆ ಸೃಷ್ಟಿಸಿ ಅನರ್ಹರಿಗೆ ಆಶ್ರಯ ನಿವೇಶನ ಮಂಜೂರು ಆರೋಪ

ರಾಮನಗರ : ಸುಳ್ಳು ದಾಖಲೆ ಸೃಷ್ಟಿಸಿ ಆಶ್ರಯ ನಿವೇಶನಗಳನ್ನು ಅನರ್ಹರಿಗೆ ಮಂಜೂರು ಮಾಡಿರುವ ಇ-ಖಾತೆ ಮಾಡಿಕೊಡಲು ಸಾವಿರಾರು ಲಂಚಕ್ಕೆ ಪೀಡಿಸುತ್ತಿರುವ ಹರೀಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೆಂಪೇಗೌಡನದೊಡ್ಡಿ ಗ್ರಾಮಸ್ಥರು ಆಗ್ರಹಿಸಿದರು.

ನಗರದ ಹೊರ ವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟ ಪಿಡಿಒ ಶ್ರೀನಿವಾಸನ ಲಂಚಬಾಕತನವನ್ನು ಈಗಾಗಲೇ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರ ಗಮನಕ್ಕೂ ತರಲಾಗಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಹರೀಸಂದ್ರ ಗ್ರಾಪಂ ವ್ಯಾಪ್ತಿಯ ಜೀಗೇನಹಳ್ಳಿ ಸರ್ವೆ ನಂ.೯೨ರಲ್ಲಿ ಒಟ್ಟು ೭ ಎಕರೆ ಜಮೀನಿದ್ದು, ಈ ಪೈಕಿ ಮೂರು ಎಕರೆ ಜಮೀನನ್ನು ೨೦೦೪-೨೦೦೫ರಲ್ಲಿ ೧೨೧ ಫಲಾನುಭವಿಗಳಿಗೆ ೨೫೩೦ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಹಕ್ಕುಪತ್ರಗಳನ್ನೂ ವಿತರಿಸಲಾಗಿದೆ. ಇನ್ನುಳಿದ ೪ ಎಕರೆ ಜಮೀನಿನಲ್ಲಿ ಪಿಡಿಒ ಶ್ರೀನಿವಾಸ್ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರಿಂದ ಲಕ್ಷಾಂತರ ಹಣವನ್ನು ಪಡೆದು ೩೮ ಮಂದಿಗೆ ೪೦೩೦ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಗ್ರಾಪಂನಲ್ಲಿ ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಎಂದು ಲಂಚ ನಿಗದಿಗೊಳಿಸಲಾಗಿದೆ. ಲಂಚ ನೀಡದೆ ಯಾವುದೇ ಕಡತ ಮುಂದಕ್ಕೆ ಹೋಗುವುದಿಲ್ಲ ಹಾಗೂ ವಿಲೇವಾರಿ ಆಗುವುದಿಲ್ಲ. ಖಾಲಿ ನಿವೇಶನ ಹಾಗೂ ನನ್ನ ಮನೆಗೆ ಇ-ಖಾತಾ ಮಾಡಿಸಿಕೊಳ್ಳಲು ೮೦ ಸಾವಿರ ರೂಪಾಯಿ ಲಂಚ ನೀಡಿರುವುದಾಗಿ ಗ್ರಾಮಸ್ಥರಾದ ಚಿಕ್ಕಮಾದಯ್ಯ ಆರೋಪಿಸಿದರು.

ಈ ಹಿಂದೆ ತಾಲೂಕು ಕಚೇರಿಯಲ್ಲಿ ದಾಖಲಾತಿ ಕೊಠಡಿಗೆ ಬೆಂಕಿ ಬಿದ್ದ ಪರಿಣಾಮ ಜೀಗೇನಹಳ್ಳಿ ಗ್ರಾಮಕ್ಕೆ ಸೇರಿದ ಕಡತಗಳು ಸುಟ್ಟುಹೋಗಿದ್ದು, ಕೆಂಪೇಗೌಡನದೊಡ್ಡಿ ಗ್ರಾಮದ ಬಹುತೇಕ ರೈತರಿಗೆ ಯಾವುದೇ ಮೂಲ ದಾಖಲೆಗಳು ಲಭ್ಯವಿರುವುದಿಲ್ಲ. ಇದನ್ನು ತಿಳಿದಿರುವ ಪಿಡಿಒ ಶ್ರೀನಿವಾಸ್ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಪಟ್ಟು ಹಿಡಿಯುತ್ತಾರೆ. ನಂತರ ಹಣ ಕೊಟ್ಟರಷ್ಟೇ ಖಾತೆ ಮಾಡಿಕೊಡುತ್ತಾರೆ. ಇಲ್ಲದಿದ್ದರೆ ವರ್ಷಾನುಗಟ್ಟಲೆ ಕಡತಗಳು ಧೂಳು ಹಿಡಿಯುತ್ತಿರುತ್ತವೆ ಎಂದರು.

ಮತ್ತೊಬ್ಬ ಗ್ರಾಮಸ್ಥ ಮಲ್ಲಣ್ಣ ಮಾತನಾಡಿ, ಪಿಡಿಒ ಶ್ರೀನಿವಾಸ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿನ ತಮ್ಮ ಕೊಠಡಿಯಲ್ಲೇ ಧೂಮಪಾನ ಮಾಡುತ್ತಾರೆ. ದೂರು ಹೊತ್ತು ಬಂದ ರೈತರನ್ನು ಸಿಗರೇಟು ಸೇದುತ್ತಾ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತು ನಿರ್ಲಕ್ಷ್ಯದಿಂದ ಮಾತನಾಡುವ ಮೂಲಕ ದುರ್ವರ್ತನೆ ತೋರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸ್ ಅವರು ಹರೀಸಂದ್ರ ಗ್ರಾಮ ಪಂಚಾಯಿತಿಗೆ ವರ್ಗವಾಗಿ ಬಂದಾಗ ಅವರ ಬಳಿ ಇದ್ದ ಆಸ್ತಿಗೂ ಈಗಿರುವ ಆಸ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ರೈತರನ್ನು ಲೂಟಿ ಮಾಡಿ ಹಾಗೂ ಸರ್ಕಾರದ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ನಡೆಸಿ ಕೋಟ್ಯಂತರ ರುಪಾಯಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕೆಇಬಿ ರಾಜಣ್ಣ, ರಾಮು, ಸುರೇಶ್, ರಮೇಶ್, ಕುಮಾರ, ಮಹದೇವ, ಅರುಣ್‌ಕುಮಾರ್, ನಂದೀಶ್, ಮನು, ಯಶವಂತ, ಭರತ್, ಕೃಷ್ಣಪ್ಪ, ರಾಜು, ಮಾದಪ್ಪ, ಪ್ರಾರೇಸಾಬ್, ಶಂಕರ್, ಕಾಂತರಾಜು, ರಾಜಣ್ಣ, ಈರಯ್ಯ, ರಾಮಣ್ಣ, ವೀರಭದ್ರಯ್ಯ ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು.

ಆಶ್ರಯ ಯೋಜನೆ ದುರ್ಬಳಕೆ

೨೦೦೪-೨೦೦೫ರಲ್ಲಿ ಸೂರಿಲ್ಲದ ಕಡುಬಡವರಿಗೆ ೧೨೧ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ವೇಳೆಯೂ ನಿಯಮಗಳನ್ನು ಗಾಳಿಗೆ ತೂರಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಅನುಮಾನ ಕಾಡುತ್ತಿದೆ. ಬಡವರ ಹೆಸರಿನಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು ಹಾಗೂ ಶ್ರೀಮಂತರು ಆಶ್ರಯ ಯೋಜನೆಯ ಫಲಾನುಭವಿಗಳಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.ಕಡುಬಡವರಿಗೆ ಸೂರು ನಿರ್ಮಿಸಿಕೊಳ್ಳುವ ಉದ್ದೇಶದಿಂದಲೇ ಸರ್ಕಾರ ನಿವೇಶನಗಳನ್ನು ನೀಡುತ್ತದೆ. ಹಕ್ಕುಪತ್ರ ಹಂಚಿಕೆಯಾಗಿ ಸುಮಾರು ೧೫ ವರ್ಷಗಳೇ ಕಳೆದರೂ ಯಾರೊಬ್ಬರೂ ಅಲ್ಲಿ ಮನೆ ನಿರ್ಮಾಣ ಮಾಡದಿರುವುದೇ ಅನರ್ಹರೂ ಕೂಡ ಆಶ್ರಯ ಯೋಜನೆಯ ಫಲಾನುಭವಿಗಳಾಗಿರುವುದಕ್ಕೆ ಸಾಕ್ಷಿಯಾಗಿದೆ.ಇದರ ಜತೆಗೆ ಲಂಚಬಾಕ ಅಧಿಕಾರಿಗಳು ಕೆಲ ರಾಜಕಾರಣಿಗಳ ಜತೆ ಸೇರಿ ಸರ್ಕಾರ ಮಂಜೂರು ಮಾಡದ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ ಆರೋಪವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕಿದೆ. ೨೦೦೪-೨೦೦೫ರಲ್ಲಿ ಮಂಜೂರಾಗಿರುವ ೧೨೧ ನಿವೇಶನಗಳೂ ಸೇರಿದಂತೆ ನಂತರ ಪರಭಾರೆ ಮಾಡಿರುವ ೩೮ ನಿವೇಶನಗಳ ಫಲಾನುಭವಿಗಳು ಹಾಗೂ ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ, ಅನರ್ಹ ಫಲಾನುಭವಿಗಳು ಹಾಗೂ ಲಂಚಬಾಕ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಾಗ ಮಾತ್ರ ಆಶ್ರಯ ಯೋಜನೆಯ ಆಶಯ ಫಲಪ್ರದವಾಗಲಿದೆ.

Related Articles

Leave a Reply

Your email address will not be published.

Back to top button