ಕಾಡಾದಿಂದ ಬೆಸ್ಕಾಂಗೆ 42 ಕೋಟಿ ವಿದ್ಯುತ್ ಬಿಲ್ ಬಾಕಿ
ರಾಜೇಶ್ ಕೊಂಡಾಪುರ
ರಾಮನಗರ: ಸಾಮಾನ್ಯ ಗ್ರಾಹಕರು ಕೇವಲ ಸಾವಿರ ರುಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದರೂ ಮುಲಾಜಿಲ್ಲದೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ಬೆಸ್ಕಾಂ, ಇದೀಗ ಕೋಟ್ಯಂತರ ರುಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವ ನಾನಾ ಘಟಕಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ವಿದ್ಯುತ್ ಪೂರೈಸುವ ಘಟಕದ ವಿದ್ಯುತ್ ಬಿಲ್ ಬಾಕಿಯೇ ಬರೋಬ್ಬರಿ 42 ಕೋಟಿ ರುಪಾಯಿ ಇದ್ದು, ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ)ಗೆ ನುಂಗಲಾರದ ತುತ್ತಾಗಿದೆ.
ಸಂಪರ್ಕ ಕಡಿತಗೊಳಿಸಿದರೆ ಕೆರೆಗಳಿಗೆ ನೀರಿಲ್ಲ. ಹಾಗೇ ಬಿಟ್ಟರೆ ಬಿಲ್ ಹಣ ಬರಲ್ಲ. ಏನೂ ಮಾಡಲಾಗದ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿರುವ ಬೆಸ್ಕಾಂ, ಬಾಕಿ ವಸೂಲಿಗಾಗಿ ಪರದಾಡುವಂತಾಗಿದೆ.
ಕಡಿತ ಮಾಡಿದರೆ ಸಂಕಷ್ಟ :
ಕಾವೇರಿ ನೀರಾವರಿ ನಿಗಮ (ಕಾಡಾ) ಮಂಚನಬೆಲೆ ಯೋಜನಾ ವಿಭಾಗಕ್ಕೆ ರಾಮನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ನೀರೆತ್ತುವ ಘಟಕಕ್ಕೆ ಬೆಸ್ಕಾಂ ವಿದ್ಯುತ್ ಪೂರೈಕೆ ಮಾಡಿದೆ. ಆದರೆ, ಈವರೆಗೂ ಬಳಸಿಕೊಂಡಿರುವ ವಿದ್ಯುತ್ಗೆ ಕಾಡಾ ಬಿಲ್ ಪಾವತಿ ಮಾಡಿಲ್ಲ. ಆ ಬಿಲ್ ಬಾಕಿ ಮೊತ್ತ ಬೃಹತ್ ಆಕಾರವಾಗಿ ಬೆಳೆದು ನಿಂತಿದೆ.
ಈ ಬಾಕಿ ಬಿಲ್ ಹಣವನ್ನು ಪಾವತಿಸುವಂತೆ ಬೆಸ್ಕಾಂ ಹಲವಾರು ಬಾರಿ ಕಾಡಾಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಒಮ್ಮೆ ವಿದ್ಯುತ್ ಸಂಪರ್ಕ ಕಡಿತ ಮಾಡಿದಾಗ, ಕೆರೆಗಳಿಗೆ ನೀರು ನಿಂತು ಸಮಸ್ಯೆಯಾಗಿತ್ತು. ರೈತರ ಪ್ರತಿಭಟನೆಯಿಂದಾಗಿ ಬೆಸ್ಕಾಂ ನೀರೆತ್ತುವ ಘಟಕಕ್ಕೆ ಮರು ಸಂಪರ್ಕ ನೀಡಬೇಕಾಯಿತು.
ಆ ಸಂದರ್ಭದಲ್ಲಿ ಬಿಲ್ ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಕಾಡಾ ಈವರೆಗೂ ಬಿಲ್ ಪಾವತಿ ಮಾಡಿಲ್ಲ. ಹೀಗಾಗಿ ಬೆಸ್ಕಾಂ ಅಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕೆರೆ – ಕೃಷಿ ಚಟುವಟಿಕೆಗೆ ನೀರು ಹರಿಸುವ ಯೋಜನೆ:
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ೧೧ ಏತ ನೀರಾವರಿ ಯೋಜನೆಗಳಿದ್ದು, ಇದರಲ್ಲಿ ಮೂರು ಯೋಜನೆಗಳಿಂದ ಸುಮಾರು 147 ಕೆರೆಗಳಿಗೆ ನೀರು ತುಂಬಿಸಿದರೆ, ಉಳಿದ 8 ಯೋಜನೆಗಳಿಂದ ಕೃಷಿ ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ.
ಚನ್ನಪಟ್ಟಣ ತಾಲೂಕಿನ ಗರಕಹಳ್ಳಿ ಏತ ನೀರಾವರಿ ಯೋಜನೆ 14 ಕೆರೆ, ಕಣ್ವ ಯೋಜನೆಯಿಂದ 100 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ. ಸಿ -2 ಯೋಜನೆಯಿಂದ 1 ಸಾವಿರ ಎಕರೆ ಹಾಗೂ ಡಿ – ಯೋಜನೆಯಲ್ಲಿ ಸಾಮಂದಿಪುರ, ನಿಡಗೋಡಿ ಭಾಗದಲ್ಲಿ ಕೃಷಿ ಚಟುವಟಿಕೆಗೆ ನೀರು ಪೂರೈಸಲಾಗುತ್ತಿದೆ.
ಸಾತನೂರು – ಕೈಲಾಂಚ ಯೋಜನೆ ಕನಕಪುರ ತಾಲೂಕಿನ 24 ಮತ್ತು ರಾಮನಗರ ತಾಲೂಕಿನ 3 ಕೆರೆಗಳು ಸೇರಿ ಒಟ್ಟು 27 ಕೆರೆಗಳಿಗೆ ಮೂರು ಹಂತಗಳಲ್ಲಿ ನೀರು ತುಂಬಿಸುವುದಾಗಿದೆ. ಇದರಲ್ಲಿ ಮೊದಲನೇ ಮತ್ತು ಎರಡನೇ ಹಂತ ಪ್ರಾಯೋಗಿಕವಾಗಿ ಚಾಲನೆಗೊಳಿಸಿ ಕೆರೆಗಳನ್ನು ತುಂಬಿಸಲಾಗಿದೆ. ಅರ್ಕಾವತಿ ನದಿಯಲ್ಲಿ ಎರಡು ಲ್ಟಿ ಚನಲ್ ನಿಂದಲೂ ಕೃಷಿಗೆ ನೀರು ಹರಿಸಲಾಗುತ್ತಿದೆ.
ಈಗ ಕನಕಪುರ ತಾಲೂಕಿನ ನಾರಾಯಣಪುರ ಹಾಗೂ ಇನ್ನಿತರೆ 11 ಕೆರೆಗಳಿಗೆ ಟಿ.ಬೇಕುಪ್ಪೆ ಬಳಿ ಅರ್ಕಾವತಿ ನದಿಯಿಂದ ನೀರು ತುಂಬಿಸುವ ಯೋಜನೆ, ಗರಳಾಪುರ ಮತ್ತು ಇತರೆ 12 ಕೆರೆಗಳಿಗೆ ಅರ್ಕಾವತಿ ಜಲಾಶಯದಿಂದ ಹಿನ್ನೀರಿನಿಂದ ನೀರನ್ನು ಎರಡು ಹಂತಗಳಲ್ಲಿ ತುಂಬಿಸುವ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇದರ ವಿದ್ಯುತ್ ಬಿಲ್ ಕೂಡ ಬೆಸ್ಕಾಂಗೆ ಮತ್ತಷ್ಟು ಹೊರೆಯಾಗಲಿದೆ.
ಬಾಕಿಯಲ್ಲಿ 17 ಕೋಟಿ ಮಾತ್ರ ಪಾವತಿ:
ಈ ಏತ ನೀರಾವರಿ ಯೋಜನೆಗಳು ಆರಂಭವಾದ ದಿನದಿಂದಲೂ ವಿದ್ಯುತ್ ಸಂಪರ್ಕ ಮುಂದುವರೆಸಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡು ಬರಲಾಗಿದೆ. ಕಳೆದ ವರ್ಷ ಕಾಡಾ 17 ಕೋಟಿ ರುಪಾಯಿ ವಿದ್ಯುತ್ ಬಿಲ್ ಪಾವತಿ ಮಾಡಿತ್ತು.
ಈ ವರ್ಷದವರೆಗೆ ವಿದ್ಯುತ್ ಬಿಲ್ ಮೊತ್ತ 42 ಕೋಟಿ ರುಪಾಯಿ ಆಗಿದ್ದು, ಇದಕ್ಕೆ ಬಡ್ಡಿಯೂ ಸೇರಿಕೊಂಡಿದೆ. ಇದರಲ್ಲಿ 3 ರಿಂದ 4 ಕೋಟಿ ರುಪಾಯಿ ಮನ್ನಾ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ.