ಈದ್ ಮಿಲಾದ್ ಮೈಸೂರು ಜಿಲ್ಲಾಡಳಿತ ಹೊಸ ಮಾರ್ಗಸೂಚಿ ಬಿಡುಗಡೆ
ಮೈಸೂರು: ನಾಳೆ ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದ್ದು, ಕೋವಿಡ್ ಕಾರಣದಿಂದಾಗಿ ಸರಳವಾಗಿ ಹಬ್ಬ ಆಚರಿಸುವಂತೆ ಸೂಚನೆ ನೀಡಿದೆ. ಕೊರೊನಾ ಕಾರಣದಿಂದಾಗಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಸರಳವಾಗಿ ಈದ್ ಮಿಲಾದ್ ಆಚರಣೆಗೆ ಸೂಚನೆ ನೀಡಿದ್ದಾರೆ.
ಸಾಮೂಹಿಕ ಪ್ರಾರ್ಥನೆ, ಮೆರವಣಿಗೆಗೆ ನಿಷೇಧ ಹೇರಲಾಗಿದ್ದು, ಪರಸ್ಪರ ಹಸ್ತಲಾಘವ ಮತ್ತು ಆಲಿಂಗನಕ್ಕೆ ಅವಕಾಶ ಇಲ್ಲ. ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗರಿಷ್ಠ 100 ಮಂದಿ ಸೇರಲು ಮಾತ್ರ ಅವಕಾಶ ನೀಡಲಾಗಿದೆ. ಮಸೀದಿ, ದರ್ಗಾಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲು ಸೂಚಿಸಲಾಗಿದೆ.
60 ಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಡಿಸಿ ಬಗಾದಿ ಗೌತಮ್ ಸಲಹೆ ನೀಡಿದ್ದಾರೆ. ಹಾಗೆಯೇ ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಈದ್ ಮಿಲಾದ್ ಹಬ್ಬ ಆಚರಣೆಯನ್ನ ಸರಳವಾಗಿಯೇ ಆಚರಿಸುವಂತೆ ಜಿಲ್ಲಾಡಳಿತ ಹೊಸ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಿದೆ.