ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತ ಜಾಗೃತಿ ಆಂದೋಲನ
ಮಡಿಕೇರಿ : ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲರೂ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬದಲ್ಲಿ ಶಬ್ದ ಮತ್ತು ವಾಯುಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಸಿಡಿತದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮೂಲಕ ಹಣತೆ ಬೆಳಗಿಸುವ ಮೂಲಕ ಪರಿಸರ ಸ್ನೇಹಿ ಹಾಗೂ ಸುರಕ್ಷಿತ ಹಸಿರು ದೀಪಾವಳಿ ಆಚರಿಸಬೇಕಿದೆ ಎಂದು ಮಡಿಕೇರಿ ನಗರ ಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮನವಿ ಮಾಡಿದರು.
ಕೊಡಗು ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಶನಿವಾರ(ಅ.30 ರಂದು) ಮಡಿಕೇರಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ “ಪರಿಸರ ಸ್ನೇಹಿ ಹಸಿರು ದೀಪಾವಳಿ” ಆಚರಣೆ ಕುರಿತು ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ ಪರಿಸರ ಜಾಗೃತಿ ಆಂದೋಲನದಲ್ಲಿ ಹಣತೆ ಬೆಳಗಿಸುವ( ಪ್ರಜ್ವಲಿಸುವ) ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.
ವಿದ್ಯಾರ್ಥಿಗಳು ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಹಬ್ಬದ ಆಚರಣೆ ಸಂದರ್ಭದಲ್ಲಿ ಜಾಗರೂಕತೆ ಹಾಗೂ ಸುರಕ್ಷತೆ ವಹಿಸಬೇಕು ಎಂದು ಮನವಿ ಮಾಡಿದರು. ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದರೊಂದಿಗೆ ಗಿಡ ನೆಟ್ಟು ಬೆಳೆಸಿ ಅದನ್ನು ಪೋಷಿಸುವ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಅನಿತಾ ಕರೆ ನೀಡಿದರು. ಜಿಲ್ಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಪರಿಸರ ಸಂಘಟಕ ಟಿ.ಜಿ.ಪ್ರೇಮ ಕುಮಾನ್ ಮತ್ತು ತಂಡದವರು ಪರಿಸರ ಪೂರಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದರು
ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಪೂರಕ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಮಾತನಾಡಿ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. 125 ಡೆಸಿಬಲ್ ಕ್ಕಿಂತ ಕಡಿಮೆ ಶಬ್ದ ಹೊಂದಿರುವ ಹಸಿರು ಪಟಾಕಿ ಸಿಡಿಸಬೇಕೇ ವಿನಾಃ ಯಾವುದೇ ರೀತಿಯಲ್ಲೂ ಪರಿಸರಕ್ಕೆ ಹಾನಿಯುಂಟು ಮಾಡುವ ಪಟಾಕಿಗಳನ್ನು ಸಿಡಿಸಬಾರದೆಂದು ಸುಪ್ರೀಂ ಕೋರ್ಟ್ ಕೂಡ ಆದೇಶಿಸಿದೆ ಎಂದು ಹೇಳಿದರು.
ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲ ಆರೋಗ್ಯ ಸಂಬಂಧಿತ ಕಾಯಿಲೆಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಪಟಾಕಿ ಸಿಡಿಸಿದ ನಂತರ ಉತ್ಪತ್ತಿಯಾಗುವ ಘನತ್ಯಾಜ್ಯದ ಹೆಚ್ಚಳದಿಂದ ಶುಚಿತ್ವದ ಸಮಸ್ಯೆ ಉಲ್ಬಣಗೊಳುತ್ತದೆ ಎಂದು ಎಚ್ಚರಿಸಲಾಗಿದೆ ಎಂದರು.
ಇದೇ ಸಂದರ್ಭ ಹಸಿರು ದೀಪಾವಳಿ ಆಚರಣೆ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.