Uncategorized
ಭಾರೀ ಮಳೆಗೆ ಕಾಫಿನಾಡು ತತ್ತರ: ಅಲ್ಲಲ್ಲಿ ನಿರಂತರ ಅವಘಡ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಲವೆಡೆ ಮತ್ತೆ ಭಾರೀ ಮಳೆ ಸುರಿಯತೊಡಗಿದ್ದು, ಹಾನಿ, ಅವಘಡಗಳು ಸಂಭವಿಸುತ್ತಿವೆ. ಜನಜೀವನ ತತ್ತರಗೊಂಡಿದೆ.
ತರೀಕೆರೆ ತಾಲೂಕಿನಲ್ಲಿ ಸುರಿದ ಮಳೆಗೆ ರಸ್ತೆ ಬದಿ ನಿಂತಿದ್ದ ವಾಹನಗಳು ಭಾಗಶಃ ಮುಳುಗಡೆಯಾದ ದೃಶ್ಯಗಳು ಕಂಡು ಬಂದಿದೆ. ಅಡಕೆ ತೋಟದಲ್ಲಿ ಹಳ್ಳದಂತೆ ನೀರು ಆವರಿಸಿದೆ. ಸುಣ್ಣದಹಳ್ಳಿ ಕೆರೆ ಕೋಡಿ ಬಿದ್ದಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದೆ. ಮೇಗೂರು ಗ್ರಾಮದಲ್ಲಿ ನಿರ್ಮಾಣ ಹಂತದ ಮನೆಯೊಂದರ ಕಾಂಪೌಂಡ್ ಕುಸಿದಿದೆ. 2019ರ ಮಹಾಮಳೆಗೆ ಮೇಗೂರಲ್ಲಿ ಹಲವು ಮನೆ ಕುಸಿದಿದ್ದವು. ಮೇಗೂರು, ಜಾವಳಿ, ಮಲೆಮನೆ ಸುತ್ತಮುತ್ತ ಕೃಷಿ ಭೂಮಿ ಕೊಚ್ಚಿ ಹೋಗಿತ್ತು.
ಈಗ ಮತ್ತೆ ಅಂತಹದೇ ಘಟನೆಗಳು ಅಲ್ಲಲ್ಲಿ ಕಾಣಿಸಿಕೊಳ್ಳತೊಡಗಿದ್ದು, ಜನ ಭಯಭೀತರಾಗಿದ್ದಾರೆ. ಸಬ್ಬೇನಹಳ್ಳಿಯಲ್ಲಿ ಆಟೋವೊಂದರ ಮೇಲೆ ವಿದ್ಯುತ್ ಕಂಬ ಬಿದ್ದು ಆಟೋ ಜಖಂ ಆಗಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳ ಭೇಟಿ, ರಸ್ತೆಗೆ ಬಿದ್ದಿರುವ ವಿದ್ಯುತ್ ಕಂಬವನ್ನ ತೆರವುಗೊಳಿಸಿದ್ದಾರೆ.