Houses Collapse: ರಾಮನಗರ ಜಿಲ್ಲೆಯಲ್ಲಿ ಮಳೆಯಿಂದ ಮನೆಗಳ ಕುಸಿತ
ರಾಮನಗರ: ಮಾಗಡಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಕೆಲ ಕೆರೆ, ಕಟ್ಟೆಗಳು ತುಂಬಿದರೆ ಹಳೆಯ ಮನೆಗಳು ನೆಲ್ಲಕುರುಳಿರುವ ಘಟನೆ ನಡೆದಿದೆ. ತಾಲೂಕಿನ ನಾಗಬೋವಿ ದೊಡ್ಡಿ ಗ್ರಾಮದ ಸೊಲ್ಲಾಪುರದಮ್ಮ ಎಂಬುವರ ಮನೆ ಸಂಪೂರ್ಣವಾಗಿ ಬಿದಿದ್ದು ಗೃಹಪ್ರವೇಶಕ್ಕೆ ಹೊರಟಿದ್ದ ಕಾರಣ ನಡೆಯಬೇಕಾದ ಅನಾಹುತ ತಪ್ಪಿದಂತಾಗಿದೆ.
ಚಿಕ್ಕಮ್ಮ, ಸುರೇಶ್, ಚಂದ್ರಯ್ಯ, ಪೆದ್ದಣ್ಣ, ಗುರುಮೂರ್ತಿ ಎಂಬುವವರ ಮನೆ ಬಿರುಕುಬಿಟ್ಟಿದ್ದು ಇಂದು, ನಾಳೆ ಮಳೆ ಬಿದ್ದರೆ ಈ ಮನೆಗಳು ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈಜಿಗುಡ್ಡ ಜಲಾಶ ಮುಳುಗಡೆ ವೇಳೆ ಇವರುಗಳು ಮನೆಗಳನ್ನು ಕಳೆದುಕೊಂಡಿದ್ದು, ಇಂಥಹವರಿಗೆ ನೀಡಲು ಸೋಣೆನಹಳ್ಳಿ ಬಳಿ ಸರಕಾರ ಲೇಔಟ್ ಮಾಡಿ ಕೈಚೆಲ್ಲಿ ಕುಳಿತಿದ್ದು ಇಂಥಹವರಿಗೆ ಕೂಡಲೇ ನಿವೇಶನದ ಹಕ್ಕುಪತ್ರ ನೀಡಿದರೆ ಗುಡಿಸಲು ಹಾಕಿ ಜೀವನಸಾಗಿಸಲು ಅನುಕೂಲ ಕಲ್ಪಿಸುವಂತಾಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲೂಕಿನ ಬರ್ಗಾವತಿ ಕೆರೆ ತುಂಬಿದ್ದು, ಇನ್ನೊಂದು ದಿನ ಮಳೆ ಸುರಿದರೆ ಕೋಡಿ ಬೀಳಲಿದ್ದು ಉಳಿದ ಗುಡೇಮಾರನಹಳ್ಳಿ ಕೆರೆ, ಗೌರಮ್ಮನ ಕೆರೆಗಳಿಗೆ ಮಳೆಯ ನೀರು ಶೇಖರಣೆಯಾಗಿ ಚಕ್ಕು ಡ್ಯಾಂಗಳು ತುಂಬಿ ಹರಿಯುತ್ತಿವೆ. ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ರಸ್ತೆಗಳಲ್ಲಿ ನಿಲ್ಲಿಸಿದ ಲಾರಿ, ಕ್ಯಾಂಟರ್ಗಳಿಗೆ ದ್ವಿಚಕ್ರಗಳು ಡಿಕ್ಕಿಒಡೆದು ಸವಾರರಿಗೆ ಗಾಯಗಳಾಗಿವೆ, ಮಳೆಯಿಂದ ಬೆಸ್ಕಾಂ ಇಲಾಖೆ ಸುಮಾರು ಒಂದು ಗಟೆಗಳಕಾಲ ವಿದ್ಯುತ್ ಕಡಿತಗೊಳಿಸಿದ ಕಾರಣ ನಾಗರೀಕರಿಗೆ ತೊಂದರೆ ಉಂಟಾಯಿತು, ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡ ಕಾರಣ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನೀರನ್ನು ಹೊರಹಾಕುವ ಮೂಲಕ ಶಿವರಾತ್ರಿ ಜಾಗರಣೆಯಂತಾಗಿ ನಾಗರೀಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಬೀಳುತ್ತಿದ್ದ ಮಳೆಯ ಜತೆ ಶನಿವಾರ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ, ತಾಲೂಕಿನಾಧ್ಯಂತ ರಾಗಿ ಬೆಳೆ ಉತ್ತಮವಾಗಿದ್ದು ಅವಶ್ಯಕತೆಗೆ ಸರಿಯಾಗಿ ರಸಗೊಬ್ಬರ ಇಲ್ಲದೆ ಇರುವುದು ರೈತರಲ್ಲಿ ಬೇಸರ ಮೂಡಿಸಿದೆ.
ಚನ್ನಪಟ್ಟಣದಲ್ಲು ಮನೆ ಕುಸಿತ:
ಸೋಮವಾರ ತಾಲೂಕಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ ಎರಡು ಮನೆಗಳು ಕುಸಿದು ಬಿದ್ದಿರುವ ಘಟನೆ ತಾಲೂಕಿನ ಎಚ್.ಮೊಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕತಾಯಮ್ಮ ಮತ್ತು ಪಾರ್ವತಮ್ಮ ಎಂಬುವರಿಗೆ ಸೇರಿದಎರಡು ಮನೆಗಳು ಮಳೆಯಿಂದಾಗಿ ಕುಸಿದು ಬಿದಿದ್ದು, ಮನೆ ಬಿದ್ದ ಕಾರಣ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಈ ಎರಡೂ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ.
ಗ್ರಾಮದಲ್ಲಿ ಬೆಳಿಗ್ಗೆ 11 ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತಿದ್ದು, ಮಳೆಯ ತೀವ್ರತೆಯಿಂದಾಗಿ ಗ್ರಾಮದ ಜನತೆ ಕಂಗಾಲಾಗಿದ್ದಾರೆ. ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದ ಪರಿಣಾಮ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಮಣೆ ಕಳೆದು ಕೊಂಡು ಸಂತ್ರಸ್ಥರಾಗಿರುವ ಈ ಎರಡೂ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.