Uncategorized

ವರುಣನ ಕೃಪೆಯಿಂದ ಮೈದುಂಬಿದ ಜಲಾಶಯ ಕೆರೆ-ಕಟ್ಟೆಗಳು; ಚೆಕ್ ಡ್ಯಾಂಗಳಲ್ಲೂ ಬರಪೂರ ನೀರಿನಿಂದ ಅಂತರ್ಜಲ ವೃದ್ಧಿ

ರಾಜೇಶ್ ಕೊಂಡಾಪುರ

ರಾಮನಗರ: ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು, ಕೆರೆ ಕಟ್ಟೆಗಳು ಭರ್ತಿಯಾಗಿ ಜೀವ ಕಳೆ ಪಡೆದುಕೊಂಡಿವೆ. ಮಾಗಡಿ ತಾಲೂಕಿನ ಮಂಚನಬೆಲೆ, ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಜಲಾಶಯ, ಕಣ್ವ ಜಲಾಶಯಗಳು ತುಂಬಿದ್ದು, ಬಹುತೇಕ ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿದೆ. ಅಷ್ಟೇ ಅಲ್ಲ ಇಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದ ನದಿಗಳಲ್ಲೂ ನೀರು ಹರಿಯುತ್ತಿದೆ. ಇದು ರೈತಾಪಿ ವರ್ಗದಲ್ಲಿ ಹರ್ಷದ ಹೊನಲನ್ನು ತರಿಸಿದೆ.

ಅಕ್ಟೋಬರ್ 1 ರಿಂದ 16 ರವರೆಗೆ ಜಿಲ್ಲೆಯಲ್ಲಿ 156.8 ಮೀಟರ್ ಮಳೆಯಾಗಿದೆ. ಇದು ವಾಡಿಕೆಗಿಂದ ಶೇ 66 ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಹೀಗಾಗಿಯೇ ಜಿಲ್ಲಾದ್ಯಂತ ಕೆರೆಕಟ್ಟೆಗಳು ತುಂಬಲಾರAಭಿಸಿದ್ದು, ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳಲ್ಲೂ ನೀರು ಶೇಖರಣೆಯಾಗಿದೆ.

ರಾಮನಗರ ಪಟ್ಟಣದ ಒಳಗೇ ಇರುವ ರಂಗರಾಯರದೊಡ್ಡಿ ಹಾಗೂ ಬೋಳಪ್ಪನಹಳ್ಳಿ ಕೆರೆಗಳಲ್ಲಿ ಹೆಚ್ಚು ನೀರಿನ ಸಂಗ್ರಹವಿದೆ. ಬಿಡದಿ ಪಟ್ಟಣದ ಜನರ ಜೀವನಾಡಿ ನಲ್ಲಿಗುಡ್ಡ ಕೆರೆ ನಾಲ್ಕು ವರ್ಷಗಳ ನಂತರ ತುಂಬಿದ್ದು, ಇನ್ನೇನು ಕೋಡಿ ಬೀಳಲಿದೆ. ಬಿಡದಿ ಹೋಬಳಿಯ ತಮ್ಮನಾಯಕನ ಹಳ್ಳಿಯ ಕೆರೆಯು ಬರಗಾಲದಿಂದಾಗಿ ಸಂಪೂರ್ಣ ಬರಿದಾಗಿ ಹೋಗಿತ್ತು. ಆದರೆ ಸದ್ಯ ಅಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ನೀರಿನ ಸಂಗ್ರಹವಿದೆ. ಇದರಿಂದಾಗಿ ಕೊಕ್ಕರೆಗಳ ಹಿಂಡು ಬೀಡು ಬಿಟ್ಟಿವೆ. ಈಗಲೂ ಕೆರೆಯಲ್ಲಿ ಜೀವಜಲ ಸಮೃದ್ಧಿಯಾಗಿದೆ.

ಹತ್ತಾರು ಎಕರೆ ವಿಸ್ತೀರ್ಣದಲ್ಲಿ ಇರುವ ಕೇತೋಹಳ್ಳಿ ಗ್ರಾಮದ ಕೆರೆಯು ಸಹ ಕಳೆದ ಬೇಸಿಗೆಯ ವೇಳೆಗೆ ಸಂಪೂರ್ಣ ಬರಿದಾಗಿ ಆಟದ ಮೈದಾನವಾಗಿತ್ತು. ನಂತರದಲ್ಲಿ ಇಲ್ಲಿನ ಹೂಳನ್ನು ಎತ್ತಿ ಕಾಯಕಲ್ಪ ನೀಡಲಾಗಿತ್ತು. ಅದರಲ್ಲೂ ಎಂಬAತೆ ಈಗ ಕೆರೆಯ ಅಂಗಳ ಸರೋವರದಂತೆ ಕಂಗೊಳಿಸತೊಡಗಿದೆ. ಮೀನುಗಾರಿಕೆಗೂ ಅನುಕೂಲ ಆಗಿದೆ.

ಚನ್ನಪಟ್ಟಣ ತಾಲೂಕಿನಲ್ಲಿ ಕೂಡ್ಲೂರು ಕೆರೆ ಸಹ ಕೋಡಿ ಬಿದ್ದಿದೆ. ಮತ್ತಿಕೆರೆ ಕೆರೆ ಸಹ ಸಧ್ಯದಲ್ಲೇ ಕೋಡಿ ಬೀಳಬಹುದು ಎಂದು ಹೇಳಲಾಗತ್ತಿದೆ. ಕನಕಪುರ ತಾಲೂಕಿನ ನಾರಾಯಣಪ್ಪನ ಕೆರೆ, ಹನುಮನಹಳ್ಳಿ ಕೆರೆ, ಹಾರೋಹಳ್ಳಿ ದೊಡ್ಡಕೆರೆಗಳು, ಎಡಮಾರನಹಳ್ಳಿಕೆರೆ ಅರ್ಧ ತುಂಬಿದ್ದು, ಮಾವತ್ತೂರುಕೆರೆ, ಕಗ್ಗಲಹಳ್ಳಿ ಕೆರೆ ಕೋಡಿ ಬೀಳುವ ಹಂತದಲ್ಲಿದೆ.

ಈ ಬಾರಿಯ ಹಿಂಗಾರು ಮಳೆ ಕೆರೆಕಟ್ಟೆ ಹಾಗೂ ನದಿಗಳಿಗೆ ಜೀವಕಳೆ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಕೆರೆಗಳೂ ಸಮೃದ್ಧವಾಗಿವೆ. ಹೀಗೆಯೇ ಇನ್ನೂ ಹತ್ತು ಹಲವು ಕೆರೆಗಳು ಜೀವಕಳೆ ಉಳಿಸಿಕೊಂಡು ಗ್ರಾಮೀಣ ಭಾಗದ ಜನರ ಜೀವ ಉಳಿಸುತ್ತಿವೆ. ಬತ್ತಿ ಹೋಗಿದ್ದ ನದಿಗಳಲ್ಲಿ ನೀರು ಕಾಣಿಸತೊಡಗಿದೆ.

ಮೈದುಂಬಿಕೊಂಡ ಜಲಾಶಯಗಳು:

ಮಾಗಡಿ ತಾಲೂಕಿನಲ್ಲಿರುವ ಮಂಚನಬೆಲೆ ಮತ್ತು ಚನ್ನಪಟ್ಟಣದಲ್ಲಿರುವ ಇಗ್ಗಲೂರು ಜಲಾಶಯ ತುಂಬಿದ್ದು, ನೀರು ಹೊರ ಬಿಡಲಾಗುತ್ತಿದೆ. ಚನ್ನಪಟ್ಟಣದ ಕಣ್ವ ಜಲಾಶಯದಲ್ಲಿ ಇನ್ನು ೪-೫ ಅಡಿ ನೀರು ಬಂದರೆ ಜಲಾಶಯದಿಂದ ನೀರು ಹೊರ ಬಿಡಲಾಗುತ್ತದೆ ಎನ್ನಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ಜಲಾನಯನ ಪ್ರದೇಶ ತುಂಬಿ ಹರಿಯುತ್ತಿದ್ದು, ಹೆಚ್.ಡಿ. ದೇವೇಗೌಡ ಬ್ಯಾರೇಜ್ ಸಂಪೂರ್ಣ ತುಂಬಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗಡಿಭಾಗದಲ್ಲಿನ ಇಗ್ಗಲೂರು ಗ್ರಾಮದಲ್ಲಿರುವ ಬ್ಯಾರೇಜ್ ತುಂಬಿರುವ ಹಿನ್ನೆಲೆ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇಗ್ಗಲೂರು ಜಲಾಶಯಕ್ಕೆ ನೇರ ಸಂಪರ್ಕವಿರುವ ಶಿಂಷಾ ನದಿಯೂ ತುಂಬಿರುವ ಹಿನ್ನೆಲೆಯಲ್ಲಿ ಅಡ್ಡಲಾಗಿ ಕಟ್ಟಿರುವ ಮಾರ್ಕೋನಳ್ಳಿ ಡ್ಯಾಂ ಸಹ ತುಂಬಿದೆ. ಹೆಚ್ಚುವರಿ ಹರಿಯುವ ನೀರು ಇದೇ ಬ್ಯಾರೇಜ್ ಸೇರುವ ಮೂಲಕ ಸಂಪೂರ್ಣ ಭರ್ತಿಯಾಗಿದೆ. ಇದರಿಂದಾಗಿ ಚನ್ನಪಟ್ಟಣ ತಾಲೂಕಿನ ರೈತರು ಸಂತಸವಾಗಿದ್ದಾರೆ. ಇಗ್ಗಲೂರು ಜಲಾಶಯ ಸಂಪೂರ್ಣ ತುಂಬಿದ್ದು, ಹೆಚ್ಚುವರಿ ನೀರನ್ನು ಇದೇ ತಾಲೂಕಿನ ಮತ್ತೊಂದು ಜಲಾಶಯ ಕಣ್ವ-ಶಿಂಷಾ ಏತನೀರಾವರಿ ಯೋಜನೆ ಹಾಗೂ ಗರಕಹಳ್ಳಿ ಏತ ನೀರಾವರಿ ಯೋಜನೆಯಡಿ ಹೆಚ್ಚುವರಿ ನೀರನ್ನು ನೂರಾರು ಕೆರೆಗಳಿಗೆ ಲಿಪ್ಟ್ ಮಾಡಲಾಗುತ್ತಿದೆ.
ಮಂಚನಬೆಲೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಎರಡು ಗೇಟ್ ಗಳ ಮೂಲಕ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದಾಗಿ ಅರ್ಕಾವತಿ ನದಿಗೆ ಜೀವ ಕಳೆ ಬಂದಿದೆ. ಒಟ್ಟಾರೆ ಈ ಬಾರಿಯ ವರುಣನ ಕೃಪೆಯಿಂದಾಗಿ ರೇಷ್ಮೆನಾಡಿನ ರೈತರು ಸಂತುಷ್ಟರಾಗಿದ್ದಾರೆ. ಹಾಗೇ ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳು ತುಂಬಲಿದ್ದು ಉತ್ತಮ ಬೇಸಾಯಕ್ಕೆ ಸಾಕ್ಷಿಯಾಗಲಿದೆ.

ರಾಮನಗರ ಜಿಲ್ಲಾದ್ಯಂತ ಹಳ್ಳಗಳಿಗೆ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳು ಸಹ ತುಂಬಿವೆ. ಮಳೆನೀರನ್ನು ವ್ಯವಸ್ಥಿತವಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆ, ಕುಂಟೆಗಳ ಮೂಲಕ ಶೇಖರಿಸಿ ಅಂತರ್ಜಲ ವೃದ್ದಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ಸುಮಾರು 2 ಸಾವಿರಕ್ಕೂ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 1 ಸಾವಿರಕ್ಕೂ ಹೆಚ್ಚು ಚೆಕ್ ಡ್ಯಾಂಗಳಲ್ಲಿ ನೀರು ಶೇಖರಣೆಯಾಗಿದೆ.

ಕನಕಪುರ ತಾಲೂಕು ಉಯ್ಯಂಬಳ್ಳಿಯಲ್ಲಿ ಚೆಕ್ ಡ್ಯಾಂ ತುಂಬಿ ಹಳ್ಳದಲ್ಲಿ ನೀರು ಹರಿದಿದ್ದು ಆ ಭಾಗದ ಗ್ರಾಮಸ್ಥರ ಮೊಗದಲ್ಲಿ ಸಂತಸ ತರಿಸಿದೆ. ರಾಮನಗರ ತಾಲೂಕು ಕೈಲಾಂಚ ಗ್ರಾಮಪಂಚಾಯ್ತಿ ವ್ಯಾಪ್ತಿಯ ಅಂಕನಹಳ್ಳಿ ಕೆರೆಯಲ್ಲಿ ಸಂಜೀವಿನ ಸ್ವಸಹಾಯ ಗುಂಪಿನ ಮಹಿಳೆಯರು ನರೇಗಾ ಯೋಜನೆಯಡಿ ಹೂಳು ತೆಗೆದಿದ್ದರು. ಈ ಕೆರೆಯಲ್ಲಿಯೂ ನೀರು ತಂಬಿದೆ. ಚನ್ನಪಟ್ಟಣ ತಾಲೂಕಿನ ಎಲೆತೋಟದಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಅಂಚಿಪುರ ಗ್ರಾಮದಲ್ಲಿ ಇಬ್ಬರು ಖಾಸಗಿ ಜಮೀನುಗಳ ನಡುವಿನ ಹಳ್ಳಗಳನ್ನು ಸಹ ಅಭಿವೃದ್ದಿ ಮಾಡಲಾಗಿತ್ತು. ಈ ಹಳ್ಳಗಳಲ್ಲಿಯೂ ಮಳೆ ನೀರು ಹರಿಯುತ್ತಿದ್ದು, ನರೇಗಾ ಕಾಮಗಾರಿಯಡಿ ಕೈಗೊಂಡ ಕೆಲಸಗಳು ಸಾರ್ಥಕವಾಗಿವೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

Related Articles

Leave a Reply

Your email address will not be published.

Back to top button