ವಿಪರೀತ ಮಳೆಗೆ ನೆಲಕ್ಕಚ್ಚುತ್ತಿದೆ ಕಾಫಿ: ತೀವ್ರ ಸಂಕಷ್ಟದಲ್ಲಿ ಬೆಳೆಗಾರರು
ಕಿರುಗುಂದ ರಫೀಕ್
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಕಾಫಿ ತೋಟಗಳಲ್ಲಿ ನೆಲದ ಶೀಥ ಹೆಚ್ಚಾಗಿದೆ. ಈಗಾಗಲೇ ಗಿಡಗಳಲ್ಲಿ ಕಾಫಿ ಹಣ್ಣಾಗಿದ್ದು, ಮಳೆ ವೈಪರೀತ್ಯಕ್ಕೆ ನೆಲಕ್ಕಚ್ಚುತ್ತಿವೆ. ಬೆಳೆಗಾರರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 1ಲಕ್ಷ ಹೆಕ್ಟೇರ್ ನಲ್ಲಿ ಅರೇಬಿಕ ಹಾಗೂ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಮಲೆನಾಡಿನ ಬೆಳೆಗಾರರ ಜೀವಾಳವಾಗಿರುವ ಕಾಫಿ ಈ ವರ್ಷವೂ ಮಣ್ಣು ಪಾಲಾಗುತ್ತದೆಯೇ ಎಂಬ ಅನುಮಾನ ದಟ್ಟವಾಗಿದೆ.
ಗಿಡಗಳಲ್ಲಿ ಹಣ್ಣಾಗಿರುವ ಕಾಫಿಯನ್ನು ಬೆಳೆಗಾರರು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊಯ್ದಿರುವ ಕಾಫಿಯನ್ನುಒಣಗಿಸಲೂ ಸಾಧ್ಯವಿಲ್ಲ. ಕಳೆದೊಂದು ವಾರದಿಂದ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲ ಭಾಗದಲ್ಲಿ ಅವಧಿಗೆ ಮುನ್ನವೇ ಕಾಫಿ ಹಣ್ಣಾಗಿ ನೆಲಕ್ಕಚ್ಚಿಯಾಗಿದೆ. ಗಿಡದಲ್ಲಿರುವ ಕಾಫಿಹಣ್ಣು ಕೊಯ್ಲಿಗೆ ಬರುತ್ತಿದ್ದಂತೆ ವರುಣನ ಅಬ್ಬರ ಜೋರಾಗಿದೆ.
ಸುರಿಯೋ ಮಳೆಯಲ್ಲೇ ಕಾಫಿ ಕೊಯ್ಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಕಾಫಿ ಬೆಳೆಗಾರರು ಈಗಾಗಲೇ ಮಳೆಯಲ್ಲೇ ಕಾಫಿ ಹಣ್ಣು ಕೊಯ್ಯಲು ಮುಂದಾಗುತ್ತಿದ್ದಾರೆ. ಕೆಲ ತೋಟದಲ್ಲಿ ಮಳೆಯಿಂದ ಕಾಫಿಹಣ್ಣನ್ನು ಕೊಯ್ಲು ಮಾಡಲಾಗದೆ ಕೈಚೆಲ್ಲಿದ್ದಾರೆ. ಹೀಗೆ ಬಿಟ್ಟ ಕಾಫಿ ನೆಲಕಚ್ಚಿ ಮಣ್ಣು ಸೇರಿ ಇಡೀ ತೋಟದಾದ್ಯಂತ ಹರಡಿಕೊಂಡಿವೆ. ಕಳೆದ ಮೂರ್ನಾಲ್ಕು ವರ್ಷದಿಂದಲೂ ಕಾಫಿ ಬೆಳೆಗಾರರ ಗೋಡಾನ್ ಸೇರಿದ್ದಕ್ಕಿಂತ ಮಣ್ಣು ಸೇರಿ ಅದೇ ತೋಟಕ್ಕೆ ಗೊಬ್ಬರವಾಗಿದ್ದೇ ಹೆಚ್ಚು!
ಮಳೆಯಲ್ಲಿ ಕೊಯ್ದ ಕಾಫಿಯನ್ನು ಸಕಾಲದಲ್ಲಿ ಒಣಗಿಸದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಶೀಥದಲ್ಲಿ ಇಟ್ಟ ಜಾಗದಲ್ಲೇ ಕೊಳೆಯುತ್ತದೆ. ಕೊಯ್ಲಿಗೆ ಕೊಟ್ಟ ಕೂಲಿಯೂ ವ್ಯರ್ಥವಾಗುವಂತಹ ದುಸ್ಥಿತಿ ಉಂಟಾಗುತ್ತದೆ. ಇದು ಕಾಫಿನಾಡಿನ ಬಹುತೇಕ ರೈತರ ಅಳಲು.
ಒಂದೆಡೆ ಕೂಲಿಕಾರರ ಸಮಸ್ಯೆ. ಇನ್ನೊಂದೆಡೆ ಕೊಯ್ದಿರುವ ಕಾಫಿಹಣ್ಣನ್ನುಒಣಗಿಸಲು ಬಿಸಿಲು ಇಲ್ಲದೆ ಬೆಳೆಗಾರರ ಪಡಿಪಾಟಲು. ಹೀಗಾಗಿ ರೈತರು ಸಂಕಷ್ಟದಲ್ಲೇ ಸಿಲುಕಿದ್ದಾರೆ. ಸಾಲದ ಹೊರೆ ಹೆಚ್ಚಾಗುತ್ತಿದೆ. ಈ ವರ್ಷ ಬಹುತೇಕ ಭಾಗದಲ್ಲಿ ಮುಂಗಾರು ಆಶಾದಾಯಕವಾಗಿತ್ತು. ಕಾಫಿಗೆ ಸಕಾಲಕ್ಕೆ ಮಳೆಯಾಗಿ ಉತ್ತಮ ಫಸಲಿನ ನಿರೀಕ್ಷೆಯಿತ್ತು. ಆದರೆ ಕೆಲ ತಿಂಗಳಲ್ಲಿ ವಾತಾವರಣ ಸಂಪೂರ್ಣ ಹದೆಗೆಟ್ಟಿದೆ. ಮಳೆಯ ಮೇಲಾಟಕ್ಕೆ ಬೆಳೆಗಾರರು ಬಸವಳಿದಿದ್ದಾರೆ. ಪ್ರಕೃತಿ ಮುಂದೆ ಸೋತು ಕೈಚೆಲ್ಲಿ ಕುಳಿತಿದ್ದಾರೆ.
ಸರ್ಕಾರ ಕೂಡಲೇ ಸಣ್ಣ ಹಾಗೂ ಮಧ್ಯಮ ವರ್ಗದ ಕಾಫಿ ಬೆಳೆಗಾರರ ನೆರವಿಗೆ ಬಾರದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಅಪಾಯವಿದೆ.