ಅಘನಾಶಿನಿ ಅಳಿವೆಯಲ್ಲಿ ಅಕ್ರಮ ಚಿಪ್ಪಿ ಗಣಿಗಾರಿಕೆ ಸ್ಥಗಿತಗೊಳಿಸಲು ಮೀನುಗಾರರ ಆಗ್ರಹ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ನದಿಯಲ್ಲಿ ಅಕ್ರಮವಾಗಿ ಚಿಪ್ಪಿ ತೆಗೆಯುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಸ್ಥಳೀಯ ಮೀನುಗಾರರು ಶನಿವಾರ ಜಿಲ್ಲಾಧಿಕಾರಿ ಕಛೇರಿ ಎದುರು ಆಗಮಿಸಿ ಕೆಲ ಕಾಲ ಧರಣಿ ಕುಳಿತು ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನದಿಯಲ್ಲಿ ಚಿಪ್ಪಿ ತೆಗೆಯುವುದರಿಂದ ಸ್ಥಳೀಯ ಮೀನುಗಾರರಿಕೆಗೆ ತೊಂದರೆಯಾಗುತ್ತಿದ್ದು,ಈ ಕುರಿತು ವಿರೋಧ ವ್ಯಕ್ತಪಡಿಸಿದರೆ ಮೀನುಗಾರರ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ.ಅಕ್ರಮವಾಗಿ ಚಿಪ್ಪಿ ತೆಗೆಯುತ್ತಿರುವವರ ವಿರುದ್ದ ಇವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಘನಾಶಿನಿ ನದಿಯಲ್ಲಿ ಚಿಪ್ಪಿ ತೆಗೆಯುವವರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾಗಿರಿ ಮಾಡುತ್ತಿದ್ದಾರೆ.ಅಲ್ಲದೇ ಈ ಸಂಬಂಧ ಅನೇಕ ಸಲ ಜಗಳಗಳು ಉಂಟಾಗಿ ಪ್ರಕರಣಗಳು ಕೂಡ ದಾಖಲಾಗಿವೆ.
ಇದರಿಂದ ಊರಿನಲ್ಲಿ ಶಾಂತತಾ ಭಂಗ ಉಂಟಾಗಿದೆ.ಇಲ್ಲಿನ ವಾತಾವರಣ ಹಾಳಾಗಿದೆ.ಚಿಪ್ಪಿ ಗಣಿಗಾರಿಕೆಯಿಂದ ಜಲ ಜೀವಕ್ಕೆ ಹಾನಿಯಾಗುತ್ತಿದ್ದು,ಏಡಿ, ಚಿಪ್ಪು,ಕಲ್ಗಾ,ಸಿಗಡಿ ಹಾಗೂ ಇತರ ಸಣ್ಣ ಮೀನುಗಳು ನಶಿಸುತ್ತಿವೆ.ಹೀಗಾಗಿ ಈ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಮೀನುಗಾರರು ಕಂಗಾಲಾಗಿದ್ದಾರೆ. ಮುಖ್ಯವಾಗಿ ಚಿಪ್ಪಿ ತೆಗೆದು ನದಿಯಲ್ಲಿ ಹೊಂಡಗಳು ನಿರ್ಮಾಣವಾಗುವುದರಿಂದ ನದಿ ಇಕ್ಕೆಲಗಳ ಮಣ್ಣು ಸವೆಯುತ್ತದೆ.ಇದರಿಂದ ಕಾಂಡ್ಲಾ ಮರಗಳ ಬೇರುಗಳಿಗೆ ಮಣ್ಣಿನ ಆಧಾರವಿಲ್ಲದೇ ಮರಗಳು ಬೀಳುತ್ತಿವೆ.ಆದ್ದರಿಂದ ಚಿಪ್ಪಿ ಗಣಿಗಾರಿಕೆಯನ್ನ ಸ್ಥಗಿತಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.
ಕುಮಟಾ ತಾಲೂಕಿನ ಅಘನಾಶಿನಿ ನದಿ ತೀರದ ಹೊಸ್ಕಟ್ಟಾ,ಅಘನಾಶಿನಿ ಸೇರಿದಂತೆ ವಿವಿಧ ಹಳ್ಳಿಗಳಿಂದ ಆಗಮಿಸಿರುವ ಮೀನುಗಾರರು ಅಘನಾಶಿನಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಚಿಪ್ಪಿ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಶಾಂತಿ ನೆಲೆಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.