Uncategorized

ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಬಿಎಸ್ಪಿ ಆಗ್ರಹ

ಚಿಕ್ಕಮಗಳೂರು: ಉತ್ತರ ಪ್ರದೇಶದ ಲಖೀಂಪುರದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಕೃತ್ಯವನ್ನು ಖಂಡಿಸಿ ಬಹುಜನ ಸಮಾಜ ಪಕ್ಷದಿಂದ ಮೂಡಿಗೆರೆಯಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ವಿಳಾಸಕ್ಕೆ ಮನವಿಪತ್ರ ರವಾನಿಸಿದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಕಾರು ಹತ್ತಿಸಿ ನಾಲ್ವರು ರೈತರನ್ನು ಅಮಾನುಷವಾಗಿ ಹತ್ಯೆಗೈದಿರುವುದಲ್ಲದೆ, ಘಟನೆಯ ವೇಳೆ ಸಚಿವರ ಪುತ್ರ ಗುಂಡು ಹಾರಿಸಿರುವ ಆರೋಪವೂ ಇದ್ದು ಇದು ಪ್ರಜಾಪ್ರಭುತ್ವದ ಅಣಕವಾಗಿದೆ. ದೇಶದಲ್ಲಿ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯ ಆಡಳಿತ ನಡೆಸುತ್ತಿದೆ. ಸಚಿವರ ಪುತ್ರನನ್ನು ಇದುವರೆಗೂ ಬಂಧಿಸದೆ, ಸಚಿವರಿಂದ ರಾಜೀನಾಮೆ ಪಡೆಯದೆ, ಅಪರಾಧಿಗಳ ಬೆನ್ನಿಗೆ ನಿಂತಿರುವುದು ಖಂಡನೀಯ. ಕೂಡಲೇ ಕೇಂದ್ರ ಸಚಿವರು ರಾಜೀನಾಮೆ ನೀಡಿ ನ್ಯಾಯಯುತ ತನಿಖೆಗೆ ಸಹಕರಿಸಬೇಕು. ಹಾಗೂ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ, ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಮೇಲೆ ಮೇಲೆ ನಿರಂತರ ಶೋಷಣೆ ನಡೆಸುತ್ತಿದ್ದು, ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು, ರೈತರ ಹತ್ಯೆ ಪ್ರಕರಣದಲ್ಲಿ ನ್ಯಾಯಸಮ್ಮತ ತನಿಖೆಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಉನ್ನತ ತನಿಖೆ ಕೈಗೊಳ್ಳಬೇಕು. ರೈತವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ, ರೈತರ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ಯು ಬಿ ಮಂಜಯ್ಯ, ಬಿ ಎಂ ಶಂಕರ್, ಬಕ್ಕಿ ಮಂಜುನಾಥ್, ಶ್ರೀಕಾಂತ್, ವಸಂತಕುಮಾರ್, ಬಾಬಣ್ಣ, ಮಹೇಶ್, ಹೊನ್ನೇಶ್, ಮಲ್ಲೇಶ್, ರವಿ, ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button