Uncategorized

ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಪ್ರಯತ್ನ: ಡಾ. ರಾಕೇಶ್ ಕುಮಾರ್

ರಾಮನಗರ: ಕಾಡನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಸ್ವೀಕೃತಿಯಾಗುವ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಪಯತ್ನಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ತಿಳಿಸಿದರು.

ಕನಕಪುರ ತಾಲೂಕಿನ ಕಾಡನಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ತಮಗೆ ಇರುವ ಸಮಸ್ಯೆಗಳ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ಲಿಖಿತ ರೂಪದಲ್ಲಿ ಅಹವಾಲು ಸಲ್ಲಿಸಿ. ಸೂಕ್ತ ದಾಖಲಾತಿ ನೀಡಿದರೆ ಸ್ಥಳದಲ್ಲೇ ಶೇ ೭೦ ರಿಂದ ೮೦ ರಷ್ಟು ಸಮಸ್ಯೆ ಪರಿಹರಿಸಬಹುದು. ತಮಗೆ ಅರ್ಜಿ ಬರೆಯಲು ತಿಳಿಯದಿದ್ದಲ್ಲಿ ಅದಕ್ಕೂ ಸಹ ನಮೂನೆ ರೂಪದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ತಾವು ತಮ್ಮ ಸಮಸ್ಯೆ ತಿಳಿಸಿದರೆ ಬರೆದುಕೊಡಲಾಗುವುದು. ತಾವು ಸಹಿ ಮಾಡಿ ಅರ್ಜಿ ಸಲ್ಲಿಸಿ ತಪ್ಪದೇ ಸ್ವೀಕೃತಿ ಪಡೆದುಕೊಳ್ಳಬೇಂದರು.

ಕೋವಿಡ್ ಹಿನ್ನಲೆಯಲ್ಲಿ ಕೆಲವು ತಿಂಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿರಲಿಲ್ಲ. ಕೋವಿಡ್ ಬಗ್ಗೆ ಎಚ್ಚರಿಕೆ ವಹಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮಾಸ್ಕ್ ಧರಿಸಿ. ಗ್ರಾಮದಲ್ಲಿ ಕೋವಿಡ್ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮೊದಲನೇ ಹಾಗೂ ಅವಧಿ ಪೂರೈಸಿರುವವರು ಎರಡನೇ ಡೋಸ್ ಪಡೆದುಕೊಳ್ಳಿ ಎಂದರು.

ವಿವಿಧ ಸಾಮಾಜಿಕ ಪಿಂಚಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಮಾತನಾಡಿ ಪಿಂಚಣಿಯನ್ನು ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲಾಗುವುದು. ಬ್ಯಾಂಕ್ ಖಾತೆಯನ್ನು ೩ ತಿಂಗಳು ನಿರಂತರವಾಗಿ ಉಪಯೋಗಿಸದಿದ್ದಲಿ ಅದನ್ನು ಸ್ಥಗಿತ ಮಾಡಿರುತ್ತಾರೆ. ಇಂತಹ ಸಮಸ್ಯೆ ಇರುವವರು ಸ್ಥಳದಲ್ಲೇ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದರು.

೬೫ ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಸಂಧ್ಯ ಸುರಕ್ಷ ಯೋಜನೆಯಡಿ ೧೨೦೦ ಪಿಂಚಣಿ ನೀಡಲಾಗುತ್ತಿದೆ. ವಯಸ್ಸಿನ ಬಗ್ಗೆ ಸರಿಯಾದ ದಾಖಲಾತಿ ಇಲ್ಲ ಎಂದು ಕೆಲವರು ೬೫ ಮೇಲ್ಪಟ್ಟಿದ್ದರು ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ೬೫ ವರ್ಷ ಮೇಲ್ಪಟ್ಟಿರುವ ವಿಧವಾ ವೇತನ ಪಡೆಯುತ್ತಿರುವವರು ವಯಸ್ಸಿನ ಬಗ್ಗೆ ಸರಿಯಾದ ದಾಖಲಾತಿ ಇಲ್ಲದೆ ಸಂಧ್ಯ ಸುರಕ್ಷಾ ಯೋಜನೆ ವ್ಯಾಪ್ತಿಗೆ ಬರಲು ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಆರೋಗ್ಯ ಇಲಾಖೆ ಅವರಿಗೆ ಸೂಚನೆ ನೀಡಿ ೬೫ ವಯೋಮಿತಿ ಮೇಲ್ಪಟ್ಟವರನ್ನು ಪರೀಕ್ಷಿಸಿ ಅರ್ಹರಿಗೆ ವಯೋಮಿತಿ ದೃಢೀಕರಣ ಪತ್ರ ನೀಡುವಂತೆ ತಿಳಿಸಿದರು.

ಬಿ.ಪಿ.ಎಲ್ ಕಾರ್ಡ್ಗಳನ್ನು ಮಕ್ಕಳು ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ಎ.ಪಿ.ಎಲ್ ಕಾರ್ಡ್ ಆಗಿ ಪರಿವರ್ತಿಸಿದ್ದಾರೆ. ಕೆಲವು ಭಾಗದ ಜನರು ಪಡಿತರ ಪಡೆಯಲು ತುಂಬ ದೂರ ತೆರಳಬೇಕಾಗುತ್ತದೆ ಎಂದು ತಿಳಿಸಿದಾಗ, ಜಿಲ್ಲಾಧಿಕಾರಿಗಳು ಆಹಾರ ಇಲಾಖೆ ಅವರಿಗೆ ಮಕ್ಕಳು ಉನ್ನತ ಹುದ್ದೆಯಲ್ಲಿದ್ದು, ತಂದೆ ತಾಯಿ ಅರ್ಜಿ ಸಲ್ಲಿಸಿದರೆ ಮಕ್ಕಳನ್ನು ಬಿಟ್ಟು ಅವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಅವರಿಗೆ ಬಿ.ಪಿ.ಎಲ್ ಪಡಿತರ ಚೀಟಿ ನೀಡಿ ಎಂದರು.

ಸಿದ್ದಮ್ಮ ಹಾಗೂ ಇತರ ಗ್ರಾಮಸ್ಥರು ತಮ್ಮ ಜಮೀನಿಗೆ ಓಡಾಡಲು ದಾರಿ ಇಲ್ಲ ಎಂದು ಅರ್ಜಿ ಸಲ್ಲಿಸಿದಾಗ ಈ ಬಗ್ಗೆ ಸರ್ವೆ ಮಾಡಿ ಓಡಾಡಲು ಯಾವ ರೀತಿ ವ್ಯವಸ್ಥೆ ಮಾಡಬಹುದು ಎಂದು ವರದಿ ನೀಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್, ತಹಶೀಲ್ದಾರ್ ವಿಶ್ವನಾಥ್, ಡಿ.ಡಿ.ಎಲ್. ಆರ್ ಸಂತೋಷ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button