Uncategorized

ದಸರಾ, ಈದ್ ಮಿಲಾದ್ ಹಬ್ಬದ ವೇಳೆ ಸಾರ್ವಜನಿಕ ಮೆರವಣಿಗೆಗೆ ಅನುಮತಿಯಿಲ್ಲ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ: ಬೆಣ್ಣೆನಗರಿಯಲ್ಲಿ ಕೊರೊನಾ ಸೋಂಕು ತಡೆಯುವ ಸಲುವಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ದಸರಾ ಹಾಗೂ ಈದ್ ಮಿಲಾದ್ ಹಬ್ಬಗಳ ವೇಳೆ ಸಾರ್ವಜನಿಕ ಮೆರವಣಿಗೆ ನಡೆಸುವಂತಿಲ್ಲ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದೆ.

ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ದಸರಾ ಹಾಗೂ ಈದ್‍ ಮಿಲಾದ್ ಹಬ್ಬಗಳ ಆಚರಣೆಗಾಗಿ ಹೊರಡಿಸಿರುವಮಾರ್ಗಸೂಚಿಯನ್ನು ಪಾಲಿಸಲೇಬೇಕು. ಸೌಹಾರ್ದಯುತವಾಗಿ ದಸರಾ ಹಾಗೂ ಈದ್‍ಮಿಲಾದ್ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಸಾಮೂಹಿಕ ಮೆರವಣಿಗೆಗೆ ಅವಕಾಶವಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹೇಳಿದ್ದಾರೆ.

ಕೊರೊನಾ ವಿರುದ್ಧ ನಾವು ಸಾರಿದ ಯುದ್ಧ ಮುಗಿದಿಲ್ಲ. ಪ್ರಕರಣಗಳು ದಿನೇ ದಿನೇ ಬರುತ್ತಲೇ ಇದೆ. ಅಲ್ಲೊಂದು ಇಲ್ಲೊಂದು ಸಾವು ಆಗುತ್ತಿದೆ. ದಸರಾ ಹಬ್ಬದ ಜೊತೆ ಈದ್ ಮಿಲಾದ್ ಬಂದಿದೆ. ಪ್ರತ್ಯೇಕವಾಗಿ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಸಾರ್ವಜನಿಕ ಮೆರವಣಿಗೆಗೆ ಅವಕಾಶ ಇಲ್ಲ. ಮೈಸೂರು ದಸರಾ ನಾಡಹಬ್ಬ. ನಮ್ಮ ಸಂಸ್ಕೃತಿಯ ಸಂಕೇತ ಎಂಬ ದೃಷ್ಟಿಯಿಂದ ಅನೇಕ ನಿರ್ಬಂಧಗಳನ್ನು ಹೇರಿ ಸಾಂಕೇತಿಕ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಉಳಿದ ಎಲ್ಲಿಯೂ ಮೆರವಣಿಗೆ ನಡೆಸುವಂತಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಈಗಾಗಲೇ ವಿವಿಧ ಧರ್ಮದವರ ಮುಖಂಡರ ಸೌಹಾರ್ದ ಸಭೆ ನಡೆಸಿದ್ದೇವೆ. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಮುಖಂಡನೊಬ್ಬ ಆಡಿಯೋ ಹರಿಬಿಟ್ಟು ನಾವು ಜುಲುಸ್ ಮಾಡ್ತೇವೆ ಎಂಬುದಾಗಿ ಹೇಳಿರುವುದು. ಅದು ತಪ್ಪು. ಜುಲುಸ್ ಗೆ ಅವಕಾಶ ಇಲ್ಲ. ಇದನ್ನು ಮೀರಿ ಸಾರ್ವಜನಿಕ ಮೆರವಣಿಗೆ ನಡೆಸಿದರೆ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ. ವಾಯ್ಸ್ ಮೆಸೇಜ್ ಮಾಡಿ ಹರಿಬಿಟ್ಟಿದ್ದ ವ್ಯಕ್ತಿಯನ್ನು ಕರೆಯಿಸಿ ವಿಚಾರಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಯಾರೂ ಕಾನೂನು ಕೆೈಗೆತ್ತಿಕೊಳ್ಳಬಾರದು. ಕೊರೊನಾ ಯುದ್ದಕ್ಕೆ ಮೊದಲ ದಿನದಿಂದ ಕೈಜೋಡಿಸಿದ್ದೀರಾ.ಮುಂದೆಯೂ ಕೈಜೋಡಿಸುತ್ತೀರಾ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಕೊರೊನಾದಂತ ಮಾರಕ ಸೋಂಕು ರೋಗ ಇಲ್ಲದ ಸಂದರ್ಭಗಳಲ್ಲಿ ನಾವು ಎಲ್ಲ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ವಿಜೃಭಣೆಯ ಮೆರವಣಿಗೆ ಸಹಿತ ಆಚರಿಸಿದ್ದೇವೆ. ಆದರೆ ಕೋವಿಡ್ ಸೋಂಕು ಕಳೆದೆರಡು ವರ್ಷಗಳಿಂದ ಇಂತಹ ವಿಜೃಂಭಣೆಯ ಆಚರಣೆಗಳಿಗೆ ತಡೆಹಾಕಿದ್ದು, ಎಲ್ಲರ ಆರೋಗ್ಯ ದೃಷ್ಟಿಯಿಂದ, ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸುವುದು ಅನಿವಾರ್ಯವಾಗಿದೆ. ಈ ಹಿಂದೆಯೂ ಕೂಡ ಎಲ್ಲ ಸಮಾಜದವರೂ, ಸರ್ಕಾರದ ಆದೇಶಗಳಂತೆ ಹಬ್ಬಗಳನ್ನು ಸರಳವಾಗಿ ಆಚರಿಸಿ, ಸಹಕರಿಸಿದ್ದರ ಫಲವಾಗಿ ಇದೀಗ ಕೋವಿಡ್ ಸದ್ಯ ನಿಯಂತ್ರಣದಲ್ಲಿದೆ. ಆದಾಗ್ಯೂ ತಜ್ಞರ ಎಚ್ಚರಿಕೆ ಮೇರೆಗೆ ಮುಂಜಾಗ್ರತೆ ವಹಿಸುವುದು ಅನಿವಾರ್ಯ. ಈ ಬಾರಿಯ ದಸರಾ ಹಾಗೂ ಈದ್‍ಮಿಲಾದ್ ಹಬ್ಬದ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ಹಾಕಿದ್ದು, ನಿರ್ಬಂಧ ಸಡಿಲಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿಲ್ಲ, ಆದರೆ ಅಗತ್ಯಬಿದ್ದರೆ ಇನ್ನಷ್ಟು ನಿರ್ಬಂಧ ವಿಧಿಸಲು ಅವಕಾಶ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಅ. 15 ರವರೆಗಿನ ದಸರಾ ಹಾಗೂ ಅ. 20 ರಂದು ಈದ್‍ಮಿಲಾದ್ ಎರಡೂ ಹಬ್ಬಗಳ ಆಚರಣೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಿಸೋಣ, ಸರ್ಕಾರದ ಮಾರ್ಗಸೂಚಿಯಂತೆ ಎರಡೂ ಹಬ್ಬಗಳ ಸಂದರ್ಭದಲ್ಲಿ ಯಾವುದೇ ಬಗೆಯ ಸಾಮೂಹಿಕ ಮೆರವಣಿಗೆಗೆ ಅವಕಾಶ ಇರುವುದಿಲ್ಲ, ಈ ಆದೇಶವನ್ನು ಎಲ್ಲರೂ ಪಾಲಿಸಿ, ಸೌಹಾರ್ದಯುತವಾಗಿ ಹಬ್ಬ ಆಚರಿಸೋಣ, ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಮಾತನಾಡಿ, ದಸರಾ ಹಾಗೂ ಈದ್‍ಮಿಲಾದ್ ಹಬ್ಬಗಳ ಆಚರಣೆಯನ್ನು ಭಕ್ತಿಪೂರ್ವಕ ಹಾಗೂ ಸೌಹಾರ್ದಯುತವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಆಚರಿಸೋಣ. ಹಬ್ಬಗಳ ಆಚರಣೆ ನಮಗೂ ಸಹ ಖುಷಿ ತರುವ ವಿಷಯವೇ ಆಗಿದ್ದು, ವಿಜೃಂಭಣೆಯ ಮೆರವಣಿಗೆಗಳನ್ನು ನಿರ್ಬಂಧಿಸುವುದರಿಂದ ನಮಗೂ ಕೂಡ ಖುಷಿ ದೊರೆಯುವುದಿಲ್ಲ. ಆದರೆ ಅನಿವಾರ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಿದೆ. ಕಳೆದೆರಡು ವರ್ಷಗಳಿಂದ ಎಲ್ಲರೂ ಸಹಕರಿಸಿದ್ದಾರೆ. ಈ ಬಾರಿಯೂ ಎಲ್ಲರೂ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಮಾರಕ ರೋಗ ನಿಯಂತ್ರಣಗೊಂಡಲ್ಲಿ, ಎಲ್ಲರೂ ವಿಜೃಂಭಣೆಯಿಂದ ಮೆರವಣಿಗೆ ಸಹಿತ ಆಚರಿಸಬಹುದು ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button