Uncategorized

ರೈತರ ಬೆಳೆಗೆ ಬೆಲೆಯಿಲ್ಲ, ಹೊಸ ಎಪಿಎಂಸಿ ಕಾಯ್ದೆಯಿಂದ ಲಾಭವೇನು?; ವೈಎಸ್​ವಿ ದತ್ತ ಪ್ರಶ್ನೆ

ಚಿಕ್ಕಮಗಳೂರು: ಹೊಸ ಎಪಿಎಂಸಿ ಕಾಯ್ದೆ ತಂದಮೇಲೆ ರೈತರಿಗೆ ಆಗಿರುವ ಲಾಭವಾದರೂ ಏನು? ರೈತರ ಉದ್ಧಾರ ಏಕೆ ಆಗುತ್ತಿಲ್ಲ? ಎಂಬುದನ್ನು ಬಿಜೆಪಿಯವರು ಹೇಳಬೇಕು ಎಂದು ಮಾಜಿ ಶಾಸಕ ವೈಎಸ್ವಿ ದತ್ತ ಪ್ರಶ್ನಿಸಿದ್ದಾರೆ.

ಈರುಳ್ಳಿ, ಆಲೂಗೆಡ್ಡೆ, ರಾಗಿ ಬೆಳೆದು ಮಾರಾಟ ಮಾಡಲಾಗದೆ ಸಂಕಷ್ಟದಲ್ಲಿರುವ ಕಡೂರು ತಾಲೂಕಿನ ಹಿರೇನಲ್ಲೂರು ಮತ್ತು ಗಿರಿಯಾಪುರ ಗ್ರಾಮಗಳಿಗೆ ಭೇಟಿ ನೀಡಿದ್ದ ಅವರು ರೈತರ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ನೋಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಲವೆಡೆ ಸಕಾಲಕ್ಕೆ ಮಳೆಯಾಗದ ಕಾರಣ ರೈತರು ನಿರೀಕ್ಷಿಸಿದಷ್ಟು ಇಳುವರಿ ಲಭಿಸಿಲ್ಲ. ಆದರೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿ ರೈತರು ಸುಭೀಕ್ಷವಾಗಿದ್ದಾರೆ ಎಂದು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸೂಕ್ತ ಪರಿಶೀಲನೆ ನಡೆಸಿ ವರದಿ ತಯಾರಿಸಿದ್ದರೆ ಕಡೂರು ತಾಲೂಕು ಬರಪೀಡಿತ ತಾಲೂಕು ಎಂದು ಘೋಷಣೆಯಾಗಿರುತ್ತಿತ್ತು. ಆಗ ಬೆಳೆ ನಷ್ಟವಾದ ರೈತರಿಗೆ ಕನಿಷ್ಠ ಪರಿಹಾರವಾದರೂ ಸಿಗುತ್ತಿತ್ತು. ಇಂದು ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಲು ಪರೋಕ್ಷವಾಗಿ ತಾಲೂಕು ಅಧಿಕಾರಿಗಳೇ ಕಾರಣ ಎಂದು ಅವರು ಆರೋಪಿಸಿದರು.

ಬೆಳೆದಿರುವ ಅಲ್ಪಸ್ವಲ್ಪ ಈರುಳ್ಳಿ, ಆಲೂಗೆಡ್ಡೆ, ರಾಗಿಯನ್ನು ಖರೀದಿಸಲು ವರ್ತಕರು ಬರುತ್ತಿಲ್ಲ. ಬಂದರೂ ಅತೀ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಹೀಗಾಗಿ ರೈತರಿಗೆ ಖರ್ಚಿನ ಶೇ.25 ಭಾಗವೂ ಸಿಗುತ್ತಿಲ್ಲ. ಮಾರಾಟ ವಿಳಂಬವಾದರೆ ಇರುವ ಈರುಳ್ಳಿ ಕೂಡ ಕೊಳೆತು ಹೋಗುತ್ತದೆ. ಆದರೆ ಪಟ್ಟಣದ ಮಾರುಕಟ್ಟೆಯಲ್ಲಿ ಇವುಗಳ ಬೆಲೆಯೇನೂ ಕಡಿಮೆಯಾಗಿಲ್ಲ. ಸರ್ಕಾರ ಜಾರಿಮಾಡುತ್ತಿರುವ ನೂತನ ಎಪಿಎಂಸಿ ಕಾಯ್ದೆಯಿಂದ ರೈತರಿಗಾದ ಅನುಕೂಲವಾದರೂ ಏನು ಎಂಬುದನ್ನು ಬಿಜೆಪಿಯವರು ಹೇಳಲಿ ಎಂದರು.

ʼಬಯಲು ಭಾಗವನ್ನು ಮರೆತ ಶೋಭಾ ಕರಂದ್ಲಾಜೆʼ

ಕೇಂದ್ರ ಕೇಷಿ ಸಚಿವೆ ಶೋಭಾ ಕರಂದ್ಲಾಜೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾತ್ರವೇ ಸಂಚಾರ ಮಾಡಿ, ಬಯಲುಭಾಗಗಳನ್ನು ಮರೆತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಮತ್ತು ಆಲೂಗೆಡ್ಡೆ ಬೆಳೆಗಳಿಂದ ರೈತರಿಗೆ ಆಗುತ್ತಿರುವ ನಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವ ಜವಾಬ್ದಾರಿಯನ್ನು ಅವರು ತೆಗೆದುಕೊಳ್ಳಲಿಲ್ಲ.

ನಮ್ಮ ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಸಲು ಮತ್ತು ರೈತರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ಶೀಘ್ರ ರೈತರೊಂದಿಗೆ ಧರಣಿ ನಡೆಸಲಾಗುವುದು. ಈ ವಿಷಯದಲ್ಲಿ ರಾಜಕೀಯ ಮಾಡುವ ಯಾವ ಉದ್ದೇಶವೂ ನನಗಿಲ್ಲ. ಧರಣಿಯಲ್ಲಿ ಪಕ್ಷಾತೀತವಾಗಿ ರೈತರು ಭಾಗವಹಿಸಲಿದ್ದಾರೆ ಎಂದರು.

Related Articles

Leave a Reply

Your email address will not be published.

Back to top button