ಉತ್ತರ ಕನ್ನಡ: ಅಂಕೋಲಾ ವಿಠ್ಠಲ ಶೆಟ್ಟರ ಕಾಗೆ ಪ್ರೀತಿ
ಕಾರವಾರ : ಕಾಗೆ ಎಂದರೆ ಸಾಕು ಎಲ್ಲರೂ ಮೂಗು ಮುರಿಯುವವರೇ ಜಾಸ್ತಿ. ಕಾಗೆ ಕಾ…ಕಾ…ಅಂದಾಕ್ಷಣ ಅದನ್ನು ಓಡಿಸುವುದರಲ್ಲೇ ಕಾಲಹರಣ ಮಾಡುತ್ತಾರೆ. ಕಾಗೆ ಮನೆ ಬಳಿ ಬಂದು ಕೂಗಿದರೆ ನೆಂಟರು ಬರುತ್ತಾರೆ ಎಂಬ ನಂಬಿಕೆ ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿದೆ. ಜೊತೆಯಲ್ಲಿ ಶಕುನ ಮತ್ತು ಅಪಶಕುನದ ಮಾತು ಅಲ್ಲಿ ಕೇಳಿ ಬರುತ್ತದೆ. ಪಿತೃ ಪಕ್ಷದ ಅಮಾವಾಸ್ಯೆ ದಿನ ನಮ್ಮ ಹಿರಿಯರನ್ನು ಸ್ಮರಿಸಿ ಕಾಗೆಗೆ ಎಡೆ ನೀಡುವ ಸಂಪ್ರದಾಯ ಕೂಡ ನಮ್ಮಲ್ಲಿದೆ.
ಮನುಷ್ಯ ಸಂಬಂಧಗಳು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಕಾಗೆಯೊಂದು ಮನುಷ್ಯನ ಸ್ನೇಹ ಬೆಳೆಸಿ ಅನ್ಯೋನ್ಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಮಾಧವ ನಗರದಲ್ಲಿ ನಡೆದಿದೆ.
ನಿವೃತ್ತ ಸರಕಾರಿ ನೌಕರ ವಿಠ್ಠಲ ಶೆಟ್ಟಿ ಎಂಬುವವರು ಕಳೆದ ಹತ್ತು ವರ್ಷಗಳಿಂದ ಕಾಗೆಯೊಂದಿಗೆ ಸ್ನೇಹ ಬೆಳೆಸಿ ಅನ್ಯೋನ್ಯವಾಗಿದ್ದಾರೆ. ಇದೀಗ ಈ ಕಾಗೆ ವಿಠ್ಠಲ ಶೆಟ್ಟಿ ಅವರ ಮನೆಯ ಸದಸ್ಯನಾಗಿದ್ದು, ಪ್ರತಿ ದಿನ ಇವರ ಮನೆಯಲ್ಲಿ ಆಹಾರ ಸೇವಿಸಲು ಬರುತ್ತಿದೆ.
ಕಳೆದ ಹತ್ತು ವರ್ಷದ ಹಿಂದೆ ಒಂದು ಕಾಲು ತುಂಡಾದ ಕಾಗೆ ತನ್ನ ಮರಿಗಳೊಂದಿಗೆ ಇವರ ಮನೆಯ ಬಳಿ ಹಾರಾಡುತಿತ್ತು. ಈ ವೇಳೆ ಅದರೊಂದಿಗಿದ್ದ ಮರಿ ಕಾಗೆ ಅಸ್ವಸ್ಥವಾಗಿ ಇವರ ಮನೆಯ ಬಳಿ ಕುಳಿತಿದೆ. ಇದನ್ನು ಗಮನಿಸಿದ ವಿಠ್ಠಲ ಶೆಟ್ಟಿ ಅವರು ಅದಕ್ಕೆ ಉಪಚರಿಸಿದ್ದಾರೆ. ಉಪಚಾರದಿಂದ ಚೇತರಿಸಿಕೊಂಡಿದ್ದ ಕಾಗೆ ಮರಿ ಪ್ರತಿ ದಿನ ಇವರ ಮನೆಗೆ ಬರುತ್ತಿತ್ತು.
ಹೀಗಾಗಿ ಮನೆಯಲ್ಲಿ ಇವರು ತಾವು ತಿನ್ನುವ ಆಹಾರವನ್ನು ಈ ಕಾಗೆಗೆ ನೀಡುತ್ತಿದ್ದರು.ಹೀಗೆ ಕಾಗೆಯೊಂದಿಗೆ ಸ್ನೇಹ ಬೆಳೆಸಿಕೊಂಡ ಅವರು ಪ್ರತಿ ದಿನ ಮನೆಯ ಜನರೊಂದಿಗೆ ಇದಕ್ಕೂ ಸಹ ಉಪಹಾರ ನೀಡುವುದನ್ನು ಬೆಳೆಸಿಕೊಂಡಿದ್ದಾರೆ. ಇದೀಗ ವಿಠ್ಠಲ ಶೆಟ್ಟಿ ಹಾಗೂ ಕಾಗೆ ಗೆಳೆತನ ಆಪ್ತವಾಗಿದೆ. ಒಂದು ದಿನ ಕಾಗೆ ಕಾಣದಿದ್ದರೆ ವಿಠ್ಠಲ ಶೆಟ್ಟಿ ಚಡಪಡಿಸುತ್ತಾರೆ. ಸಲುಗೆ ಬೆಳೆಸಿಕೊಂಡಿರುವ ಕಾಗೆ ವಿಠ್ಠಲ ಅವರ ಕೈ ಮೇಲೆ ಕುಳಿತು ದಿನನಿತ್ಯ ಆಹಾರ ಸೇವಿಸಿ ತೆರಳಿ ಮತ್ತೆ ಆಹಾರ ಸೇವಿಸಲು ಶೆಟ್ಟರ ಮನೆಗೆ ಬರುವುದು ಅತೀ ಸೋಜಿಗದ ಸಂಗತಿಯಾಗಿದೆ.