ಸಾಲದ ವಿಚಾರವಾಗಿ ದಂಪತಿಗಳ ನಡುವೆ ಗಲಾಟೆ: ವಿಷ ಸೇವಿಸಿ ಗಂಡ ಸಾವು, ಹೆಂಡತಿ ಆಸ್ಪತ್ರೆ ದಾಖಲು
ಕಲಬುರಗಿ: ಸಾಲದ ವಿಚಾರವಾಗಿ ಗಂಡ ಹೆಂಡತಿಯ ಮಧ್ಯೆ ಗಲಾಟೆಯಾಗಿ ಇಬ್ಬರು ವಿಷ ಸೇವಿಸಿದ ಘಟನೆ ಕಲಬುರಗಿ ತಾಲೂಕಿನ ಸಿರನೂರ ಗ್ರಾಮದಲ್ಲಿ ನಡೆದಿದ್ದು, ಪತಿ ಸಾವನ್ನಪ್ಪಿದ್ರೆ ಪತ್ನಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮದ್ಯೆ ಸೇಣಸಾಟ ನಡೆಸಿದ್ದಾಳೆ.
ಬಸವರಾಜ್ ಅಚ್ಚಕೇರಿ (32) ವಿಷ ಸೇವಿಸಿ ಮೃತಪಟ್ಟ ಗಂಡ, ಗೀತಾ (29) ವಿಷ ಸೇವಿಸಿ ಆಸ್ಪತ್ರೆ ಸೇರಿದ ಮಹಿಳೆ. ಗೀತಾಳನ್ನ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲಬುರಗಿ ತಾಲ್ಲೂಕಿನ ಸಿರನೂರ ಗ್ರಾಮದ ನಿವಾಸಿ ಬಸವರಾಜ್ ಕೃಷಿಗಾಗಿ ಐದು ಲಕ್ಷದಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಅತಿಯಾದ ಮಳೆಯಿಂದ ಬೆಳೆ ಹಾನಿಯಾಗಿ ಸಾಲ ಮರು ಪಾವತಿಸಲು ಆಗಿರಲಿಲ್ಲ, ಸಾಲದ ಹಿನ್ನಲೆ ಗಂಡ ಹೆಂಡತಿಯ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತೆರಳಿದಾಗ ಹೆಂಡತಿ ಗೀತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಹೆಂಡತಿ ವಿಷ ಸೇವಿಸಿದ್ದಾಳೆ ಅಂತಾ ಗಂಡನು ವಿಷ ಸೇವನೆ ಮಾಡಿದ್ದಾನೆ. ಹೆಂಡತಿಗೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮನೆಯಲ್ಲೆ ವಿಷ ಸೇವಿಸಿದ ಬಸವರಾಜ ಮೃತಪಟ್ಟಿದ್ದಾನೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.