ಉತ್ತರ ಕನ್ನಡ : ಮೀನು ಹಿಡಿಯಲು ಹೋಗಿ ಮೊಸಳೆ ಪಾಲಾದ ಬಾಲಕ !
ಕಾರವಾರ : ದಾಂಡೇಲಿ ನಗರದ ಹಳಿಯಾಳ ರಸ್ತೆಯ ಕಾಳಿ ನದಿ ದಂಡೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಹಿಡಿದು ಎಳೆದೊಯ್ದಿರುವ ಘಟನೆ ರವಿವಾರ ನಡೆದಿದೆ.
ವಿನಾಯಕ ನಗರದ ನಿವಾಸಿ ಮೊಯೀನ್ ಮೆಹಬೂಬ (15) ಮೊಸಳೆ ದಾಳಿಗೆ ಒಳಗಾದವನು.ಆ ಭಾಗದ ಜನರು ಬಟ್ಟೆ ತೊಳೆಯಲು ಹೋಗುವ ಜಾಗದಲ್ಲಿ ಬಾಲಕ ಮೀನು ಹಿಡಿಯಲು ಗಾಳ ಹಾಕಿ ಕುಳಿತುಕೊಂಡಾಗ ಕಾಳಿ ನದಿಯಿಂದ ಹೊರಬಂದ ಮೊಸಳೆಯೊಂದು ಬಾಲಕನನ್ನು ಎಳೆದುಕೊಂಡು ಹೋಗಿದೆ ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಸಿಪಿಐ ಪ್ರಭು ಗಂಗನಹಳ್ಳಿ,ನಗರದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಯುನೀಸ್ ಗಡ್ಡಕರ ಹಾಗೂ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕಾಗಮಿಸಿ ಬಾಲಕನ ಹುಡುಕಾಟ ಆರಂಭಿಸಿದ್ದಾರೆ.ಆರ್.ಎಫ್.ಓ ವಿನಯ್ ಭಟ್ಟ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ,ಬಾಲಕನ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.ರಾಫ್ಟಿಂಗ್ ಬೋಟುಗಳು,ರವಿ ನಾಯ್ಕ ಅವರ ರಾಫ್ಟಿಂಗ್ ತಂಡವು ಬಾಲಕನ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.ತಹಶೀಲ್ದಾರ್ ಶೈಲೇಶ ಪರಮಾನಂದ,ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ,ರುಕ್ಕಿಣಿ ಬಾಗಡೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನೀರು ನಿಲ್ಲಿಸಿದ ಜಲಾಶಯ
ಸೂಪಾ ಜಲಾಶಯದಿಂದ ಹೊರ ಹರಿವು ಇದ್ದ ಕಾರಣ ಕಾಳಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು.ಘಟನೆ ನಡೆದ ತಕ್ಷಣ ಅಧಿಕಾರಿಗಳು ಕರ್ನಾಟಕ ವಿದ್ಯುತ್ ನಿಗಮದವರಲ್ಲಿ ಮನವಿ ಮಾಡಿಕೊಂಡ ಕಾರಣ ಜಲಾಶಯದ ಹೊರ ಹರಿವನ್ನು ಸ್ಥಗಿತಗೊಳಿಸಿದ್ದಾರೆ.ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು,ಶೋಧ ಕಾರ್ಯಕ್ಕೆ ಅನುಕೂಲವಾಗಿದೆ.
ಬಾಲಕನ ಮನೆಯಲ್ಲಿ ಆಕ್ರಂದನ
ಮೊಸಳೆ ಎಳೆದುಕೊಂಡು ಹೋದ ಬಾಲಕನ ಕುಟುಂಬ ತೀರಾ ಬಡ ಕುಟುಂಬವಾಗಿದೆ.ತಂದೆ ಆಟೋರಿಕ್ಷಾ ಓಡಿಸಿಕೊಂಡು ಕುಟುಂಬ ನಿರ್ವಹಿಸುವವರಾಗಿದ್ದು,ಈ ಘಟನೆಯಿಂದ ಇಡೀ ಕುಟುಂಬ ಕಂಗಾಲಾಗಿದೆ.ತಾಯಿ ಹಾಗೂ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.