ನಕಲಿ ನೇಮಕಾತಿ ಆದೇಶ : ಲಕ್ಷ ಲಕ್ಷ ಹಣ ಲೂಟಿ : ಕೊಡಗು DCIB ಬಲೆಗೆ ಬಿದ್ದ ಖದೀಮರು
ಕೊಡಗು : ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೊಡಗು ಮತ್ತು ಹೊರ ಜಿಲ್ಲೆಯ ವ್ಯಕ್ತಿಗಳಿಗೆ ನಕಲಿ ನೇಮಕಾತಿ ಆದೇಶ ನೀಡಿ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊಡಗು ಜಿಲ್ಲೆಯ ಡಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪುತ್ತೂರು ತಾಲ್ಲೂಕಿನ ಕಾಣಿಯೂರು ಗ್ರಾಮದ ಪುನಿತ್ ಕುಮಾರ್ (32) ಹಾಗೂ ಮೈಸೂರಿನ ಜ್ಯೋತಿ ನಗರದ ಅರುಣ್ ಕುಮಾರ್ (30) ಬಂಧಿತ ಆರೋಪಿಗಳು.
ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ನಕಲಿ ನೇಮಕಾತಿ ಆದೇಶ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಮಡಿಕೇರಿ ನಗರದ ನಿವಾಸಿಯೊಬ್ಬರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ನಂತರ ಸಿಐಡಿ ಘಟಕ ತನಿಖೆ ಕೈಗೊಂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೊಡಗು ಡಿಸಿಐಬಿ ಘಟಕದ ಪೊಲೀಸರು ವಶಕ್ಕೆ ಪಡೆದು ಸಿಐಡಿ ಗೆ ನೀಡಿದ್ದಾರೆ. ಸಿಐಡಿ ಡಿವೈಎಸ್ಪಿ ಅಬ್ದುಲ್ ಕರೀಂ ರಾವುತರ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಬಂಧಿತ ಆರೋಪಿ ಪುನಿತ್ ಕುಮಾರ್ ನಿಂದ 5.50 ಲಕ್ಷ ರೂ.ನಗದು ಮತ್ತು ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ
ಮಾರ್ಗದರ್ಶನದಲ್ಲಿ ಸಿಐಡಿ ಡಿವೈಎಸ್ಪಿ ಅಬ್ದುಲ್ ಕರೀಂ ರಾವ್ ತರ್, ಗುಪ್ತದಳದ ಇಸ್ಪೆಕ್ಟರ್ ಐ.ಪಿ ಮೇದಪ್ಪ, ಡಿಸಿಐಬಿ ಘಟಕದ ಎಎಸ್ಐ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ, ವೆಂಕಟೇಶ್ ಶರತ್ ರೈ ಸುರೇಶ್, ಅನಿಲ್ ಕುಮಾರ್, ಸಿಡಿಆರ್ ಘಟಕದ ರಾಜೇಶ್ ಹಾಗೂ ಗಿರೀಶ್ ಕಾರ್ಯಾಚರಣಿಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮ ಲೆಕ್ಕಿಗರ ಹುದ್ದೆ ಕೊಡಿಸುವುದಾಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ಹಿಂದೆ ಸ್ಥಳೀಯ ಆರೋಪಿಗಳಾದ ಶಭರೀಶ್, ರಾಜಮಣಿ ಹಾಗೂ ಚಂದ್ರಶೇಖರ್ ಅವರುಗಳನ್ನು ಡಿಸಿಐಬಿ ಬಂಧಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.