ಧಾರವಾಡದಲ್ಲಿ ‘ಯುವರತ್ನ’ ಚಿತ್ರೀಕರಣಗೊಂಡ ಸ್ಥಳದಲ್ಲಿ ಶ್ರದ್ಧಾಂಜಲಿ; ಅಪ್ಪು ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ನಮನ
ಧಾರವಾಡ: ದಿವಂಗತ ಡಾ. ರಾಜಕುಮಾರ್ ಕಿರಿಯ ಪುತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಕಳೆದ ದಿನ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಅಪ್ಪು ಕೊನೆಯ ಚಿತ್ರ ಯುವರತ್ನ ಚಿತ್ರೀಕರಣಗೊಂಡ ಧಾರವಾಡದ ಕೆಸಿಡಿ ಮೈದಾನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ದಿವಂಗತ ಅಪ್ಪು ನಟನೆಯ ಯುವರತ್ನ ಚಿತ್ರ ಚಿತ್ರೀಕರಣವಾಗಿತ್ತು. ಈಗ ಪುನೀತ್ ರಾಜ್ಕುಮಾರ್ ನಿಧನದಿಂದ ಕಾಲೇಜು ಆವರಣದಲ್ಲಿ ಮೌನ ಆವರಿಸಿದೆ. ಪರಿಸರ ಸ್ನೇಹಿತ ಕಲಾವಿದ ಮಂಜುನಾಥ ಹಿರೇಮಠರವರು ತಯಾರಿಸಿದ್ದ ಪುನೀತ್ ಮೂರ್ತಿಯನ್ನು ತಂದಿಟ್ಟು, ಕಾಲೇಜು ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಗಲಿದ ನಟನ ಆತ್ಮಕ್ಕೆ ಶಾಂತಿ ಕೋರಲಾಯಿತು.
ಪರಿಸರ ಸ್ನೇಹಿ ಖ್ಯಾತಿಯ ಧಾರವಾಡದ ಕೆಲಗೇರಿ ಗಾಯತ್ರಿಪುರ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಪುನೀತ್ ನಿಧನದ ಬಳಿಕ, ಐದು ಗಂಟೆಗಳ ಕಲಾಸೇವೆಯೊಂದಿಗೆ ಪುನೀತ್ ರಾಜಕುಮಾರ ಮೂರ್ತಿ ತಯಾರಿಸಿದ್ದು, ಅದೇ ಮೂರ್ತಿಯನ್ನು ತಂದು ಶ್ರದ್ಧಾಂಜಲಿ ಸಭೆ ನಡೆಸಿ, ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ, ನಂತರ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಪೂರ್ವಕ ನಮನ ಸಲ್ಲಿಸಲಾಯಿತು.
ಪುನೀತ್ ಅವರ ಯುವರತ್ನ ಚಿತ್ರ ಧಾರವಾಡದ ಕೆಸಿಡಿ ಹಾಗೂ ಕೆಯುಡಿ ಸೇರಿದಂತೆ, ಚಿತ್ರದ ಬಹುತೇಕ ಭಾಗವು ಧಾರವಾಡದಲ್ಲಿ ಚಿತ್ರೀಕರಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು, ಕಲಾವಿದ ಮಂಜುನಾಥ ಹಿರೇಮಠ ಹಾಗೂ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಮಾಡುವ ಮೂಲಕ ಪುನೀತ್ ಕುಟುಂಬಸ್ಥರಿಗೆ, ರಾಜ ಫ್ಯಾಮಿಲಿ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.