Uncategorized

ಬಾಬಾ-ದತ್ತ ಪ್ರಕರಣದ ಹೈಕೋರ್ಟ್ ಆದೇಶದ ವ್ಯಾಖ್ಯಾನವನ್ನು ಸರ್ಕಾರದಿಂದ ತಿರುಚುವ ಪ್ರಯತ್ನ; ಶಿವಸುಂದರ್ ಆರೋಪ

ಚಿಕ್ಕಮಗಳೂರು: ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ವಿಷಯಕ್ಕೆ ಸಂಬಂಧಿಸಿ ಸೆ.28ರಂದು ಹೈಕೋರ್ಟ್ ಹೊರಡಿಸಿರುವ ಆದೇಶದ ವ್ಯಾಖ್ಯಾನವನ್ನು ಸರ್ಕಾರ ತಿರುಚಲು ಪ್ರಯತ್ನಿಸುತ್ತಿದೆ ಎಂದು ಚಿಂತಕ, ಸಾಮಾಜಿಕ ಹೋರಾಟಗಾರ ಶಿವಸುಂದರ್ ಆರೋಪಿಸಿದ್ದಾರೆ.

ಅರ್ಚಕರನ್ನು ನೇಮಕ ಮಾಡಬೇಕೆಂಬುದರ ಬಗ್ಗೆಯಾಗಲೀ, ಮುಜಾವರ್ ಅವರನ್ನು ಗರ್ಭಗುಡಿಯಿಂದ ಹೊರಗೆ ಹಾಕಬೇಕು ಎಂಬುದಾಗಲೀ ಅಥವಾ ಬಾಬಾ ಬುಡನ್ ದರ್ಗಾದ ಪರಿಸರದಲ್ಲಿರುವ ಗೋರಿಗಳನ್ನು ಹೊರಗಡೆ ಕಿತ್ತು ಎಸೆಯಬೇಕೆಂಬುದಾಗಲೀ ಯಾವುದೂ ಕೂಡ ಹೈಕೋರ್ಟ್ ಆದೇಶದಲ್ಲಿಲ್ಲ. ಆದರೆ ಮಂತ್ರಿಯ ಸ್ಥಾನದಲ್ಲಿರುವ ಸುನೀಲ್ ಕುಮಾರ್ ಹಾಗೂ ಕರ್ನಾಟಕ ಸರ್ಕಾರ ತನಗೆ ಬೇಕಾದಂತೆ ತಿರುಚಿ, ಕೋರ್ಟ್ ನ ವ್ಯಾಖ್ಯಾನವನ್ನು ತಿರುಚುತ್ತಾ, ಸುಳ್ಳುಗಳನ್ನೇ ಸತ್ಯವಾಗಿಸುವ ಪ್ರಯತ್ನವಷ್ಟೇ ಎಂದು ಶಿವಸುಂದರ್ ಹೇಳಿದ್ದಾರೆ.

ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಹೂಡಿದ್ದ ದಾವೆಯ ಕುರಿತಾಗಿ 2021ರ ಸೆ.28ರಂದು ಕರ್ನಾಟಕ ಹೈಕೋರ್ಟ್ ಜಸ್ಟೀಸ್ ಪಿ ಎಸ್ ದಿನೇಶ್ ಕುಮಾರ್ ಅವರು ಹೊರಡಿಸಿರುವ ಆದೇಶದಲ್ಲಿ ಹೀಗಿದೆ:

“ಸರ್ಕಾರ 2018ರಲ್ಲಿ ಮಾಡಿರುವ ಆದೇಶವನ್ನು ರದ್ದುಗೊಳಿಸಲಾಗಿದೆ. ಈ ಪ್ರಕರಣವನ್ನು ಮತ್ತೆ ನಾವು ರಾಜ್ಯ ಸರ್ಕಾರಕ್ಕೆ ವಾಪಸ್ ಕೊಡುತ್ತಿದ್ದೇವೆ”
“ಹೈಲೆವೆಲ್ ಕಮಿಟಿ ವರದಿಯನ್ನು ಬದಿಗೆ ಸರಿಸಿ ಮತ್ತೊಮ್ಮೆ ಹೊಸದಾಗಿ ಕಾನೂನಿನ ಪ್ರಕಾರ ಪರಿಶೀಲಿಸಬೇಕು”

ಹೀಗೆ ಹೈಕೋರ್ಟ್ ನಿರ್ದೇಶನ ನೀಡಿದೆಯೇ ಹೊರತು. ಯಾವುದೇ ಆಚರಣೆಯ ಬದಲಾವಣೆ ಮಾಡಬೇಕೆಂಬ ಸೂಚನೆಯಿಲ್ಲ. ಒಂದೇ ಒಂದು ವಿಷಯವೇನೆಂದರೆ, ಹೈಲೆವೆಲ್ ಕಮಿಟಿ ಕೊಟ್ಟಂತಹ ತೀರ್ಮಾನ ಮತ್ತು ಹಿಂದಿನ ಸರ್ಕಾರದ ತೀರ್ಮಾನವನ್ನು ರದ್ದುಪಡಿಸಲಾಗಿದೆ. ಸರ್ಕಾರ ಹೊಸದಾಗಿ ಈ ಪ್ರಕರಣವನ್ನು ಪರಿಶೀಲಿಸಬೇಕು ಎಂಬುದಾಗಿದೆ.

ಕಳೆದ 2015ರ ಸೆ.3ರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಸರ್ಕಾರವೂ ಕೂಡ ಎಂಡೊಮೆಂಟ್ ಕಮೀಷನರ್ ಕೊಟ್ಟ ತೀರ್ಪಿನ ವಿರೋಧ ಮತ್ತು ಪರ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ಅಹವಾಲುದಾರರ ಎಲ್ಲರ ಅಭಿಪ್ರಾಯಗಳನ್ನು ಈ ಸರ್ಕಾರವೂ ಪರಿಶೀಲಿಸಿ, ಆನಂತರವೇ ಒಂದು ತೀರ್ಮಾನಕ್ಕೆ ಬರಬೇಕು. ದಿಢೀರ್ ಎಂದು ಅರ್ಚಕರನ್ನು ನೇಮಿಸುವುದಾಗಲೀ, ಗೋರಿಗಳನ್ನು ಕಿತ್ತುಹಾಕುವುದಾಗಲೀ, ಮುಜಾವರ್ ಅವರನ್ನು ಅಲ್ಲಿಂದ ತೆಗೆಯುವುದಾಗಲೀ ಮಾಡುವಂತಿಲ್ಲ. ಈ ವಿಷಯಗಳು ಕೂಡ ಪ್ರಕರಣದಲ್ಲಿ ವಿಚಾರಣೆಯ ವಸ್ತುವೇ ಆಗಿರಲಿಲ್ಲ. ಉದ್ದಕ್ಕೂ ವಾದವಿರುವುದೇನೆಂದರೆ, ಮುಜಾವರ್ ಜೊತೆಗೆ ಅಲ್ಲಿ ಹಿಂದೂ ಆಗಮ ಪದ್ಧತಿಯಲ್ಲಿ ಓರ್ವ ಅರ್ಚಕರೂ ಇರಬೇಕು ಎಂದೇ ಹೊರತು, ಮುಜಾವರ್ ತೆಗೆಯಬೇಕೆಂದು, ಗೋರಿಗಳನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಅಲ್ಲವೇ ಅಲ್ಲ.

ಸುನೀಲ್ ಕುಮಾರ್ ಹೇಳುತ್ತಾರೆ; ನಾಗೇನಹಳ್ಳಿಯಲ್ಲಿ ದರ್ಗಾ ಇರೋದು, ದತ್ತಾತ್ರೇಯ ಪೀಠದಲ್ಲಲ್ಲ, ಮುಸ್ಲಿಮರೆಲ್ಲ ತಮ್ಮ ಗೋರಿಗಳನ್ನು ತೆಗೆದುಕೊಂಡು ಹೋಗಿ ನಾಗೇನಹಳ್ಳಿಗೆ ಹೋಗಿಬಿಡಿ ಎಂದು ಹೇಳಿದ್ದಾರೆ. ಇದು ಇವರು ಕಳೆದ 20 ವರ್ಷಗಳಿಂದ ಹೇಳಿಕೊಂಡು ಬಂದಿರುವ ಸುಳ್ಳು.

ಶಿವಸುಂದರ್

ಎಲ್ಲಾ ಪುರಾವೆಗಳಲ್ಲೂ ಅನೂಚಾನವಾಗಿ ಇದು ಬಾಬಾ ಬುಡನ್ ದರ್ಗಾ ಆಗಿತ್ತು. ಟಿಪ್ಪು ಸುಲ್ತಾನ್ ಕಾಲದಲ್ಲಿ, ಪೂರ್ಣಯ್ಯ ಕಾಲದಲ್ಲಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕೊಟ್ಟಿರುವ ಎಲ್ಲಾ ದತ್ತಿಗಳೂ ಕೂಡ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಖರ್ಚುಗಳ ನಿಭಾಯಿಸಲು ಮೂರು ಹಳ್ಳಿಗಳನ್ನು ಇನಾಂ ಆಗಿ ಕೊಡುತ್ತಾರೆ. ಒಂದು ಹಳ್ಳಿ ಹೆಸರು ಇನಾಂ ದತ್ತಾತ್ರೇಯ ಪೀಠ, ಇನ್ನೊಂದು ಸುರಗುಪ್ಪೆ, ಮೂರನೇ ಹಳ್ಳೀ ಹೆಸರು ನಾಗೇನಹಳ್ಳಿ ಈ ಮೂರು ಹಳ್ಳಿಗಳು ಬಾಬಾ ಬುಡನ್ ದರ್ಗಾಕ್ಕೆ ಇನಾಂ ಎಂದು ಕೊಡಲಾಗಿದೆಯೇ ಹೊರತು ನಾಗೇನಹಳ್ಳಿಯಲ್ಲೇ ಬಾಬಾ ಬುಡನ್ ದರ್ಗಾ ಇದೆ ಎಂದು ಹೇಳಿಲ್ಲ. ಇವೆಲ್ಲ ಶುದ್ಧ ಸುಳ್ಳು. ಅದೇ ಸುಳ್ಳುಗಳನ್ನು ಇಂದು ಅಧಿಕಾರದಲ್ಲಿ ಇರುವುದರಿಂದ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದ ಹೊರತುಪಡಿಸಿ ಮಿಕ್ಕೆಲ್ಲಾ ವಿವಾದಗಳಿಗೆ ಸಂಬಂಧಿಸಿದಂತೆ 1991ರಲ್ಲಿ ಪಾರ್ಲಿಮೆಂಟ್ ಆಕ್ಟ್ ಪಾಸ್ ಮಾಡಲಾಗಿತ್ತು. ಅದೇನೆಂದರೆ, ಸ್ವಾತಂತ್ರ್ಯಾನಂತರ ದೇಶದಲ್ಲಿ ಯಾವೆಲ್ಲಾ ಶ್ರದ್ಧಾಕೇಂದ್ರಗಳು, ಯಾವ್ಯಾವ ಧಾರ್ಮಿಕ ಸ್ವರೂಪದಲ್ಲಿತ್ತೋ, ಅವೇ ಧಾರ್ಮಿಕ ಸ್ವರೂಪದಲ್ಲಿ ಮುಂದುವರಿಸಿಕೊಂಡು ಹೋಗಬೇಕೇ ಹೊರತು, ಆನಂತರ ಯಾವ ಬದಲಾವಣೆಗಳಿಗೂ ಅವಕಾಶ ಕೊಡದಂತೆ ಎಲ್ಲಾ ದಾವೆಗಳೂ ಇತ್ಯರ್ಥವಾಗಬೇಕು ಎಂದು ಪಾರ್ಲಿಮೆಂಟ್ ಆಕ್ಟ್ ಪಾಸ್ ಆಗಿರುತ್ತದೆ. ಹೀಗಿರುವಾಗ 2003ರಲ್ಲಿ ಹೂಡಲಾದ ದಾವೆಗೂ 1991ರ ಆಕ್ಟ್ ನೇರವಾಗಿ ಅನ್ವಯಿಸುತ್ತದೆ.

1991ರ ಆಕ್ಟ್ ಪ್ರಕಾರ ಇಲ್ಲಿ 1947ರ ಆಗಸ್ಟ್ 15ಕ್ಕೆ ದರ್ಗಾ ರೂಪದಲ್ಲಿ ಇದ್ದಿದ್ದರಿಂದ ಇದನ್ನು ದರ್ಗಾ ರೂಪದಲ್ಲೇ ಉಳಿಸಿಕೊಂಡು ಹೋಗಬೇಕಾಗಿದೆ. ಇದು ಆಕ್ಟ್ ಪ್ರಕಾರ ಆಗಬೇಕಾಗಿದೆ.

ಹೈಕೋರ್ಟ್ ಆದೇಶದಂತೆ ಸರ್ಕಾರ ಮತ್ತೊಮ್ಮೆ ಇದರ ಪರ ಮತ್ತು ವಿರೋಧ ಎಲ್ಲರ ಅಭಿಪ್ರಾಯಗಳನ್ನು, ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಒಂದು ತೀರ್ಮಾನಕ್ಕೆ ಬರಬೇಕು. ಏನೇ ತೀರ್ಮಾನಕ್ಕೆ ಬಂದರೂ ಸಹ ಆ ತೀರ್ಮಾನವನ್ನು ಮತ್ತೆ ಕೋರ್ಟ್ ನಲ್ಲಿ ಪ್ರಶ್ನಿಸಿ ಇದು ಅಂತಿಮವಾಗಿ ಸುಪ್ರೀಂ ಕೋರ್ಟ್ ತನಕ ಹೋಗುತ್ತದೆ. ನಿಷ್ಪಕ್ಷವಾದ ಪರಿಣಿತರ ತಂಡವನ್ನು ರಚಿಸಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು. ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿದಲ್ಲಿ ಅದು ಕೋರ್ಟ್ ಆದೇಶದ ಉಲ್ಲಂಘನೆಯಾಗುವುದಲ್ಲದೆ, ಸಮಾಜದ ಶಾಂತಿಯನ್ನು ಕದಡುವುದಾಗುತ್ತದೆ. ಅಂತಹ ಸನ್ನಿವೇಶಗಳಿಗೆ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published.

Back to top button