ರೈತರ ಹತ್ಯೆ: ಆರೋಪಿಯನ್ನು ಗಲ್ಲಿಗೇರಿಸುವಂತೆ ಕಾಂಗ್ರೆಸ್ ಆಗ್ರಹ
ಚಿಕ್ಕಮಗಳೂರು: ಸರ್ಕಾರದ ರೈತವಿರೋಧಿ ಧೋರಣೆಯನ್ನು ಖಂಡಿಸಿ ಉತ್ತರ ಪ್ರದೇಶದ ಲಖೀಂಪುರದಲ್ಲಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ವಾಹನ ಚಲಾಯಿಸಿ ಹತ್ಯೆಗೆ ಕಾರಣವಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮೂಲಕ ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಆಡಳಿತ ವೈಫಲ್ಯದ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿ ಎಂದು ಒತ್ತಾಯಿಸಿದರು.
ರೈತರ ಮೇಲೆ ದಾಳಿ ಮತ್ತು ಮಾರಣಹೋಮ ನಡೆಸಿರುವುದು ಅತ್ಯಂತ ಖಂಡನೀಯ. ಕೇಂದ್ರ ಗೃಹ ಖಾತೆ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ವಾಹನ ಹರಿಸಿ ರೈತರನ್ನು ಹತ್ಯೆಗೈದಿದ್ದಾರೆ. ಇಂತಹ ದುಷ್ಕೃತ್ಯ ಹಿಂದೆಂದೂ ನಡೆದಿರಲಿಲ್ಲ. ಈ ಕೃತ್ಯಕ್ಕೆ ಕಾರಣರಾದ ಸಚಿವರು ಮತ್ತು ಅವರ ಬೆಂಗಾವಲು ಪಡೆ ಮೇಲೆ ಯುಪಿ ಸರ್ಕಾರ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.