Uncategorized

ಯುವಕನೊಬ್ಬನ ಹೆಸರಲ್ಲಿ ಜಿಎಸ್​​ಟಿ ನೋಂದಣಿ ಮಾಡಿ ವಂಚನೆ; ದೂರು ದಾಖಲು

ತೇಜಸ್ವಿ ಬಿ.ನಾಯ್ಕ

ಕಾರವಾರ : ಯುವಕನೊಬ್ಬನ ಹೆಸರಿನಲ್ಲಿ ಜಿ.ಎಸ್.ಟಿ.ನೋಂದಣಿ ಮಾಡಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿದ್ದಲ್ಲದೇ,ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ

ಸಂಕೇತ ಗಜಾನನ ನಾಯ್ಕ ಎಂಬ ಯುವಕ ತನ್ನ ತಾಯಿ ಮೋಹಿನಿ ಗಜಾನನ ನಾಯ್ಕ ಅವರೊಂದಿಗೆ ಕುಮಟಾ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.ಮೋಹಿನಿ ಅವರ ಪತಿ ಕಳೆದ 15 ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ.ಮೋಹಿನಿ ಅವರ ಪತಿ ಈ ಮೊದಲು ಕುಮಟಾ ಪಟ್ಟಣದಲ್ಲಿ ಎಲ್.ಐ.ಸಿ. ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದರು.ಆದರೆ ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದು,ಈಗ ಇವರ ಪತ್ನಿ ಮೋಹಿನಿ ಅವರು ಎಲ್.ಐ.ಸಿ.ಏಜೆಂಟರಾಗಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರೊಂದಿಗೆ ಇವರ ಮಗ ಸಂಕೇತ ಮಗಳು ನಿಖಿತಾ ವಾಸವಾಗಿದ್ದಾರೆ.ಮಗ ಸಂಕೇತ ಪಿ.ಯು.ಸಿ ವ್ಯಾಸಂಗ ಮಾಡಿದ್ದು,ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದನು.

ಸಂಕೇತ ಸಂಬಂಧಿ ಸುಜಯ್ ಕೆ.ಎಂಬಾತ ಬೆಂಗಳೂರಿನಲ್ಲಿ ಬಿ.ಇ.ವ್ಯಾಸಂಗ ಮಾಡಿ ಅಲ್ಲಿಯೇ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾನೆ.ಈತ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವನಾಗಿದ್ದು,ಅಜ್ಜಿಮನೆ ಅಂದರೆ ತಾಯಿಯ ತಾಯಿ ಮನೆ ಕುಮಟಾ ಪಟ್ಟಣವಾಗಿದೆ.ವರಸೆಯಲ್ಲಿ ಸಂಕೇತನಿಗೆ ಸುಜಯ್ ದೂರದ ಸಂಬಂಧಿಯಾಗಬೇಕು.ಸಂಕೇತ ಮತ್ತು ಸುಜಯ್ ಹೆಚ್ಚು ಕಡಿಮೆ ಒಂದೇ ವಯಸ್ಸಿನವರಾಗಿದ್ದು,ಸಹಜವಾಗಿಯೇ ಇವರಿಬ್ಬರೂ ಆಪ್ತರಾಗಿದ್ದಾರೆ.ಸುಜಯ್ ಕುಮಟಾದ ತನ್ನ ಅಜ್ಜಿಮನೆಗೆ ಬಂದಾಗಲೆಲ್ಲ ಸ್ನೇಹಿತ ಸಂಕೇತ ಜೊತೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ.ಹೀಗಾಗಿ ಇವರಿಬ್ಬರ ನಡುವೆ ಹೆಚ್ಚು ಸಲುಗೆ ಬೆಳೆದಿದೆ.ಕೆಲವು ಸಲ ಬೆಂಗಳೂರಿನಿಂದ ಬಂದವನು ಸಂಕೇತನ ಮನೆಯಲ್ಲಿ ಉಳಿದುಕೊಂಡಿದ್ದು ಇದೆ.ಸುಜಯ್‌ನ ಸ್ನೇಹಿತ ಬೆಂಗಳೂರು ನೆಲಮಂಗಲದ ನಿವಾಸಿ ತಿಲಕರಾಜ್ ಶೆಟ್ಟಿ ಎಂಬಾತನನ್ನು ಕುಮಟಾಕ್ಕೆ ಕರೆತಂದು ಸಂಕೇತನ ಅಮ್ಮ ಮೋಹಿನಿಯವರಿಗೆ ಪರಿಚಯಿಸಿ ಎಲ್.ಐ.ಸಿ.ಪಾಲಸಿ ಒಂದನ್ನು ಕೊಡಿಸಿ ತನ್ನ ಗೆಳೆತನವನ್ನು ಈ ಕುಟುಂಬದೊಂದಿಗೆ ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದಾನೆ.

ಗುನ್ನಾ ಇಟ್ಟ ಗೆಳೆಯ

ಹೀಗೆ ಸಂಕೇತ ಕುಟುಂಬದೊಂದಿಗೆ ಆಪ್ತನಾಗಿದ್ದ ಸುಜಯ್ ಗೆಳೆಯ ತಿಲಕರಾಜ್ ಶೆಟ್ಟಿ ಸಹಾಯದಿಂದ ಸಂಕೇತನಿಗೆ ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವುದಾಗಿ ಮೋಹಿನಿ ಅವರನ್ನು ನಂಬಿಸಿದ್ದಾನೆ.ಮಾತ್ರವಲ್ಲ,ಸಂಕೇತನಿಂದ ಆಧಾರಕಾರ್ಡ್ ಮತ್ತು ಪಾನ್‌ಕಾರ್ಡ್ ಪಡೆದುಕೊಂಡಿದ್ದಾನೆ.ವಿಶ್ವಾಸದ ಅಮಲಿನಲ್ಲಿ ತೇಲುತ್ತಿದ್ದ ಸಂಕೇತ ಕುಟುಂಬ ಸುಜಯ್‌ನ ಮಾತನ್ನು ನಂಬಿ ಹಳ್ಳಕ್ಕೆ ಬಿದ್ದಿದ್ದಾರೆ.ಸಂಕೇತನ ಆಧಾರ ಮತ್ತು ಪಾನ್‌ಕಾರ್ಡ ಪಡೆದುಕೊಂಡಿದ್ದ ಸುಜಯ್ ನೇರವಾಗಿ ತನ್ನ ಗೆಳೆಯ ತಿಲಕರಾಜ್ ಶೆಟ್ಟಿ ಅವನಿಗೆ ನೀಡಿದ್ದಾನೆ.ಈತ ಮೊದಲೇ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ.ಈತ ತಡಮಾಡದೇ ಸಂಕೇತನ ಆಧಾರ ಕಾರ್ಡ್ ಮತ್ತು ಪಾನ್‌ಕಾರ್ಡ್ ಆಧಾರದ ಮೇಲೆ ತನ್ನದೇ ಮೊಬೈಲ್ ಸಂಖ್ಯೆ,ಮೇಲ್ ಐಡಿ ನೀಡಿ “ಸಂಕೇತ ಎಂಟರ್‌ಪ್ರೈಸಸ್”ಎಂಬ ಹೆಸರಿನಲ್ಲಿ ಫರ್ಮ್ ಒಂದನ್ನು ಹುಟ್ಟು ಹಾಕಿದ್ದಾನೆ.ಈ ಸಂಸ್ಥೆಯ ಅಡಿಯಲ್ಲಿ 1,35,74,713 ರೂಪಾಯಿಯ ಹಣಕಾಸು ವ್ಯವಹಾರ ನಡೆಸಿದ್ದಾನೆ.ಈ ಮೂಲಕ ಸರಕಾರದ ಬೊಕ್ಕಸಕ್ಕೆ ಬರೋಬ್ಬರಿ 32 ಲಕ್ಷ ರೂಪಾಯಿ ತೆರಿಗೆ ವಂಚಿಸಿದ್ದಾನೆ.ಅಸಲಿಗೆ ಇದ್ಯಾವ ವಿಚಾರವೂ ಸಂಕೇತ ಕುಟುಂಬಕ್ಕೆ ತಿಳಿದಿರಲಿಲ್ಲ.ಯಾವಾಗ ಜಿ.ಎಸ್.ಟಿ. ಅಧಿಕಾರಿಗಳು ಕುಮಟಾದ ಸಂಕೇತನ ಮನೆ ಬಾಗಿಲಿಗೆ ಬಂದು ತೆರಿಗೆ ತುಂಬುವಂತೆ ಒತ್ತಾಯಿಸಿದರೋ ಆಗಲೇ ಈ ಭಯಾನಕ ಹೂರಣ ಬಯಲಾಗಿದೆ.ಜಿ.ಎಸ್.ಟಿ. ನೋಂದಣಿಯಲ್ಲಿ ಸಂಕೇತನ ದಾಖಲೆಗಳು ಇದ್ದು,ಸಂಕೇತ ಎಂಟರ್‌ಪ್ರೈಸಸ್ ಈತನ ಹೆಸರಿನಲ್ಲಿಯೇ ಹುಟ್ಟು ಹಾಕಿರುವುದರಿಂದ ಸಹಜವಾಗಿಯೇ ತೆರಿಗೆ ಅಧಿಕಾರಿಗಳು ಹಣ ತುಂಬುವಂತೆ ಸಂಕೇತ ಕುಟುಂಬವನ್ನು ಒತ್ತಾಯಿಸುತ್ತಿದ್ದಾರೆ. ಇದೀಗ 32 ಲಕ್ಷ ರೂಪಾಯಿ ತೆರಿಗೆ ಬಡ್ಡಿ ಎಲ್ಲಾ ಸೇರಿ ಬರೋಬ್ಬರಿ 42 ಲಕ್ಷ ರೂ.ನಷ್ಟಾಗಿದೆ.ಸಂಕೇತ ಕುಟುಂಬ ಈ ಪ್ರಕರಣದಿಂದ ಕಂಗಾಲಾಗಿದ್ದು,ನ್ಯಾಯ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ವಂಚನೆ ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಸಂಕೇತ ಕುಟುಂಬ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.ಕೂಡಲೇ ಕಾರ್ಯ ಪ್ರವೃತ್ತರಾದ ಕುಮಟಾ ಪೊಲೀಸರು ಆರೋಪಿತರಾದ ಸುಜಯ್ ಮತ್ತು ತಿಲಕರಾಜ್ ಶೆಟ್ಟಿ ಎಂಬಿಬ್ಬರನ್ನು ಬೆಂಗಳೂರಿನಿಂದ ಕುಮಟಾಕ್ಕೆ ಕರೆತಂದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದ್ದಾರೆ.ಯಾರದೋ ಆಧಾರಕಾರ್ಡ್ ಮತ್ತು ಪಾನ್‌ಕಾರ್ಡ್ ದುರುಪಯೋಗ ಪಡಿಸಿಕೊಂಡು ತಿಲಕರಾಜ್ ಶೆಟ್ಟಿ ಒಟ್ಟು ಏಳು ಸಂಸ್ಥೆಯನ್ನು ಹುಟ್ಟು ಹಾಕಿರುವುದಾಗಿ ಸಂಕೇತ ಕುಟುಂಬದ ಎದುರು ಆರೋಪಿತರು ಬಾಯಿ ಬಿಟ್ಟಿದ್ದಾರೆ.ಇಷ್ಟೊತ್ತಿಗಾಗಲೇ ಕುಮಟಾ ಪೊಲೀಸರು ಅಮೇಧ್ಯ ತಿಂದು ಆರೋಪಿತರ ಪರವಾಗಿ ನಿಂತು ಬಿಟ್ಟಿದ್ದಾರೆ.ಹಿಡಿದು ತಂದ ಇಬ್ಬರು ಆರೋಪಿತರ ಮೇಲೆ ದೂರು ದಾಖಲಿಸಿದ್ದರೂ ಎಫ್.ಐ.ಆರ್. ದಾಖಲಿಸದೇ ಪೊಲೀಸ್ ಗೌರವ ನೀಡಿ ಬಿಟ್ಟು ಕಳುಹಿಸಿದ್ದಾರೆ.ಸಂಕೇತ ಕುಟುಂಬಕ್ಕೆ ಮಣಿದ ಪೊಲೀಸರು ಕೊನೆಗಳಿಗೆಯಲ್ಲಿ ನಾಮಕಾವಾಸ್ತೆ ಎಫ್.ಐ.ಆರ್. ದಾಖಲಿಸಿ ಇಬ್ಬರು ಆರೋಪಿತರಿಗೆ ಜಾಮೀನು ದೊರಕುವಲ್ಲಿ ನೆರವಾಗಿದ್ದಾರೆ.ಈಗ ಸಂಕೇತ ಕುಟುಂಬ ಮುಂದೇನಾಗುತ್ತೋ ಎಂಬ ಆತಂಕದಿಂದ ದಿನ ದೂಡುವಂತಾಗಿದೆ.

Related Articles

Leave a Reply

Your email address will not be published.

Back to top button