Uncategorized

ಚನ್ನಪಟ್ಟಣ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ತೀವ್ರಗೊಂಡ ಕಸರತ್ತು

ರಾಜೇಶ್ ಕೊಂಡಾಪುರ

ರಾಮನಗರ: ಚನ್ನಪಟ್ಟಣ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಕಡೆಗೂ ಮುಹೂರ್ತ ಕೂಡಿಬಂದಿದ್ದು, ನ.9ಕ್ಕೆ ಚುನಾವಣೆ ನಿಗದಿಯಾಗಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲೆ, ಆಕಾಂಕ್ಷಿಗಳು ಚುರುಕಾಗಿದ್ದು, ತೆರೆಮೆರೆಯಲ್ಲೇ ಕಸರತ್ತು ಆರಂಭಿಸಿದ್ದಾರೆ.

ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಏಪ್ರಿಲ್ 27ರಂದೇ ನಗರಸಭೆಗೆ ಚುನಾವಣೆ ನಡೆದಿತ್ತಾದರೂ ಕೊರೋನಾ ಕಾರಣದಿಂದಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಲಾಗಿತ್ತು. ಚುನಾವಣೆ ನಡೆದ ಏಳು ತಿಂಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆಕಾಲ ಕೂಡಿ ಬಂದಿದ್ದು, ಎಲ್ಲರ ಚಿತ್ತ ನಗರಸಭೆಯತ್ತ ನೆಟ್ಟಿದೆ.

ಕೊರೋನಾ ಪ್ರಕರಣಗಳೂ ಏರುಗತಿಯಲ್ಲಿದ್ದ ಏಪ್ರಿಲ್ ತಿಂಗಳಿನಲ್ಲಿ ನಗರಸಭೆಗೆ ಚುನಾವಣೆನಡೆದಿತ್ತು. ಬಹುತೇಕ ವಾರ್ಡ್ಗಳಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟಿದ್ದು, ಆ ಚುನಾವಣೆಯಲ್ಲಿ ಹೆಚ್ಚಿನ ವಾರ್ಡುಗಳಲ್ಲಿ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಗೆಲುವಿನನಗೆ ಬೀರಿತ್ತು. 31 ಸದಸ್ಯ ಬಲದ ನಗರಸಭೆಯಲ್ಲಿ 16 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ 7 ಸ್ಥಾನಗಳಲ್ಲಿಗೆಲುವು ಸಾಧಿಸಿದ್ದರೆ, ಪಕ್ಷೇತರರಾಗಿ ಒಬ್ಬರು ಗೆಲುವು ಸಾಧಿಸಿದ್ದರು.

ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ದಂಡು:

ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಅಧ್ಯಕ್ಷ ಗಾದಿಗಾಗಿ ಜೆಡಿಎಸ್‌ನಲ್ಲಿ ಹಲವರು ಪೈಪೋಟಿ ನಡೆಸುತ್ತಿದ್ದಾರೆ. 14ನೇ ವಾರ್ಡ್ನಿಂದ ಗೆಲುವು ಸಾಧಿಸಿರುವ ಶ್ರೀನಿವಾಸ್‌ಮೂರ್ತಿ, 26ನೇ ವಾರ್ಡ್ನಿಂದ ಗೆಲುವು ಸಾಧಿಸಿರುವ ಪ್ರಶಾಂತ್, 12ನೇ ವಾರ್ಡ್ನ ನ ಲೋಕೇಶ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್ನಿಂದ ಗೆಲುವು ಸಾಧಿಸಿರುವ ಸತೀಶ್ ಬಾಬು ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಲಕ್ಷಮ್ಮ ಮತ್ತು ರಿಫೀಕ್‌ರವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದ್ದು, ಎಲ್ಲಾ ಅಭ್ಯರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯತಂತ್ರಗಳನ್ನು ನಡೆಸಿದ್ದು, ವರಿಷ್ಟರ ಮನಗೆಲ್ಲವು ಕಸರತ್ತು ನಡೆಸುತ್ತಿದ್ದಾರೆ.

ಇನ್ನು ನಗರಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಚುಟುವಟಿಕೆಗಳು ಗರಿಗೆದರಿದ್ದು, ಕಾಂಗ್ರೆಸ್ ನಗರಸಭೆ ಸದಸ್ಯರ ತಂಡವೊಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿದೆ ಎನ್ನಲಾಗಿದೆ. ಕಾಂಗ್ರೆಸ್ ಸದಸ್ಯರ ಭೇಟಿ ಹಿಂದೆಯೇ ಹೊಸ ರಾಜಕೀಯ ಲೆಕ್ಕಾಚಾರಗಳು ಹುಟ್ಟಿಕೊಂಡಿದ್ದು, ಈ ಪ್ರಯತ್ನವೇನಾದರೂ ಸಫಲವಾದರೆ ನಗರಸಭೆ ಅಖಾಡ ರಂಗೇರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್‌ಗೆ ಶಾಕ್ ಕೋಡಲು ಯತ್ನ:

ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಬೇಕಾದ ಸ್ಪಷ್ಟ ಬಹುಮತ ಜೆಡಿಎಸ್‌ಗೆ ಇದೆಯಾದರೂ ರಾಜಕೀಯದಲ್ಲಿ ಕಡೇ ಕ್ಷಣದಲ್ಲಿ ಏನಾದರೂ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಜೆಡಿಎಸ್‌ಗೆ ಅಧಿಕಾರ ತಪ್ಪಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರನ್ನು ಒಗ್ಗೂಡಿಸಿಕೊಂಡು ಅಧಿಕಾರ ಹಿಡಿಯುವ ಕುರಿತು ಪ್ರಯತ್ನಗಳು ಸದ್ದಿಲ್ಲದೇ ನಡೆಯುತ್ತದೆ ಎನ್ನಲಾಗಿದೆ.

ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ತಲಾ ೭ ಸ್ಥಾನಗಳಲ್ಲಿ ಜಯಗಳಿಸಿದ್ದು, ಇವರ ಜತೆ ೩೦ವಾರ್ಡ್ನ ಪಕ್ಷೇತರ ಸದಸ್ಯೆಯನ್ನು ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಮಾತುಗಳು ಕೇಳಿಬರುತ್ತಿವೆ. ನಗರಸಭೆ ಚುನಾವಣೆಯಲ್ಲಿ ಸದಸ್ಯರ ಜತೆ ಕ್ಷೇತ್ರದ ಶಾಸಕರು, ಸಂಸದರು ಮತದಾನದ ಹಕ್ಕು ಹೊಂದಿದ್ದಾರೆ. ಇದರೊಂದಿಗೆ ವಿಧಾನಪರಿಷತ್ ಸದಸ್ಯರು ಸಹ ಯಾವುದಾರೂ ಒಂದು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆಯಬಹುದಾಗಿರುತ್ತದೆ. ಈ ಕಾಂಗ್ರೆಸ್-ಬಿಜೆಪಿ ಪಕ್ಷೇತರ ಅಭ್ಯರ್ಥಿ ಜತೆಗೆ ವಿಧಾನಪರಿಷತ್ ಸದಸ್ಯರಾದ ಯೋಗೇಶ್ವರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಮತಗಳನ್ನು ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ದಳಪತಿ ಅಂಗಳದಲ್ಲಿ ಚೆಂಡು:

ನಗರಸಭೆಯಲ್ಲಿ ಜೆಡಿಎಸ್ 16ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿದ್ದು, ಈ ಬಾರಿ ಜೆಡಿಎಸ್ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪಕ್ಕಾ ಎನ್ನುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜೆಡಿಎಸ್‌ಗೆ ಸ್ಪಷ್ಟ ಬಹುಮತ ಇರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಗಾದಿಗಾಗಿ ತಮ್ಮದೇ ಆದ ರೀತಿಯಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಯಾರೂ ಏನೇ ಹೇಳಿದರೂ ಮಾಜಿ ಮುಖ್ಯಮಂತ್ರಿಗಳು ಮತ್ತು ಕ್ಷೇತ್ರದ ಶಾಸಕರು ಆದ ಎಚ್.ಡಿ. ಕುಮಾರಸ್ವಾಮಿಯವರ ತೀರ್ಮಾನವೇ ಅಂತಿಮವಾಗಿದ್ದು, ಎಚ್‌ಡಿಕೆ ಕೃಪಾಕಟಾಕ್ಷ ಯಾರಿಗೆ ಒಲಿಯದೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published.

Back to top button