Uncategorized

ಉತ್ತರ ಕನ್ನಡ: ಕ್ಯಾಸಿನೋ ಪ್ರಾರಂಭಕ್ಕೆ ಪ್ರಸ್ತಾವನೆ?

ಕಾರವಾರ : ಗೋವಾ ಎಂದಾಕ್ಷಣ ಅಲ್ಲಿನ ಕಡಲ ತೀರಗಳು,ರಾತ್ರಿ ವೇಳೆ ಝಗಮಗಿಸುವ ವಿದ್ಯುತ್​ ಅಲಂಕಾರದೊಂದಿಗೆ ಹೊಳೆಯುವ ಕ್ಯಾಸಿನೋ ಕ್ರೂಝ್ ಶಿಫ್‌ಗಳು ಹಾಗೂ ತಂಡೋಪತಂಡವಾಗಿ ಎಂಜಾಯ್ ಮಾಡುವ ಪ್ರವಾಸಿಗರು ಕಣ್ಮುಂದೆ ಬರುತ್ತಾರೆ.

ಗೋವಾಕ್ಕೆ ಹೋಲಿಸಿದರೆ ನೆರೆಯ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಅಲ್ಲಿನಷ್ಷೇ ವಿಸ್ತೀರ್ಣವನ್ನು ಹೊಂದಿದ್ದು,ಗೋವಾ ರಾಜ್ಯಕ್ಕಿಂತಲೂ ಹೆಚ್ಚಿನ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ.ಆದರೆ ಪ್ರವಾಸೋದ್ಯಮಕ್ಕೆ ಗೋವಾ ನೀಡುವಷ್ಟು ಉತ್ತೇಜನ ಇಲ್ಲಿ ಸಿಗುತ್ತಿಲ್ಲ.ಕಾರಣ ಪ್ರವಾಸಿಗರನ್ನ ಸೆಳೆಯುವಲ್ಲಿ ಇಲ್ಲಿನ ಪ್ರವಾಸಿ ತಾಣಗಳು ವಿಫಲವಾಗುತ್ತಿವೆ.ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಚಿಂತನೆ ನಡೆಸಿದ್ದಾರೆ.

ನೆರೆಯ ಗೋವಾಕ್ಕೆ ಹೆಚ್ಚಿನ ಪ್ರವಾಸಿಗರು ಕಡಲ ತೀರಗಳಿಗೆ ಭೇಟಿ ನೀಡಿದ್ರೆ,ಇನ್ನೂ ಹಲವರು ಅಲ್ಲಿರುವ ಕ್ಯಾಸಿನೋಗಳಿಗಾಗಿಯೇ ಆಗಮಿಸುತ್ತಾರೆ.ಅಲ್ಲಿನ ಕ್ಯಾಸಿನೋಗಳಿಂದಾಗಿಯೇ ಗೋವಾ ರಾಜ್ಯಕ್ಕೆ ಪ್ರತಿವರ್ಷ ಸುಮಾರು 696 ಕೋಟಿ ರೂ.ತೆರಿಗೆ ಸಂಗ್ರಹವಾಗುತ್ತಿದ್ದು,ಮೂರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗವನ್ನು ಒದಗಿಸಿವೆ.ಅಲ್ಲದೇ ಕ್ಯಾಸಿನೋಗಳಿಂದಾಗಿ ಅಲ್ಲಿನ ಟ್ಯಾಕ್ಸಿ, ಹೋಟೆಲ್,ಲಾಡ್ಜ್‌ಗಳಿಗೂ ಪ್ರವಾಸಿಗರ ಆಗಮನವಾಗುತ್ತಿರುವುದರಿಂದ ಸಾಕಷ್ಟು ಲಾಭದಾಯಕವಾಗಿ ಪರಿಣಮಿಸಿದೆ.

ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಗೋವಾ ಮಾದರಿಯಂತೆ ಉತ್ತರ ಕನ್ನಡದಲ್ಲೂ ಇಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಚಿಂತನೆಯನ್ನು ನಡೆಸಲಾಗುತ್ತಿದೆ.ಇದರಿಂದ ಪ್ರವಾಸಿ ತಾಣಗಳು ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವುದರೊಂದಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಹೆಚ್ಚುವುದಲ್ಲದೇ ಜಿಲ್ಲೆಯ ಆದಾಯಕ್ಕೂ ಲಾಭದಾಯಕವಾಗಲಿದೆ.ಈ ನಿಟ್ಟಿನಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವೈಶಿಷ್ಟ್ಯತೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು,ಒಂದೆಡೆ ವಿಶಾಲವಾದ ಕಡಲ ತೀರಗಳಿವೆ.ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿಯನ್ನು ಹೊಂದಿದೆ.ಹೀಗಾಗಿ ಬೀಚ್‌ಗಳೊಂದಿಗೆ ಕಾಳಿ ನದಿ ತೀರದಲ್ಲಿ ಹೋಂ ಸ್ಟೇ,ರೆಸಾರ್ಟ್‌ಗಳು ಇರುವುದರಿಂದ ವಿಭಿನ್ನ ರೀತಿಯಲ್ಲಿ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ.

ಮಾಲ್ಡೀವ್ಸ್ ಚಿಕ್ಕ ರಾಷ್ಟ್ರವಾಗಿದ್ದರೂ ಸಹ ತನ್ನಲ್ಲಿನ ಕಡಲ ತೀರಗಳನ್ನೇ ಬಳಸಿಕೊಂಡು ಪ್ರವಾಸೋದ್ಯಮದ ಮೂಲಕವೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದೆ.ಉತ್ತರ ಕನ್ನಡ ಜಿಲ್ಲೆಯಲ್ಲೂ ಅಲ್ಲಿನಷ್ಟೇ ಬೀಚ್‌ಗಳು ಇದ್ದು, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪೂರಕ ವಾತಾವರಣವನ್ನ ನಿರ್ಮಿಸಬೇಕಾದ ಅವಶ್ಯಕತೆ ಇದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಕಾರವಾರದಲ್ಲಿ ಕ್ಯಾಸಿನೋ ಪ್ರಾರಂಭಿಸುವ ಪ್ರಸ್ತಾವನೆ ಬಂದಿತ್ತಾದರೂ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯ ಜನರ ಅಭಿಪ್ರಾಯ ಪಡೆದು ಯೋಜನೆಗಳನ್ನು ಜಾರಿಗೊಳಿಸುವಂತಾಗಬೇಕು ಎನ್ನುತ್ತಾರೆ ಸಾರ್ವಜನಿಕರು.

Related Articles

Leave a Reply

Your email address will not be published. Required fields are marked *

Back to top button