ಚೆಕ್ ಕಳವು ಮಾಡಿ 1.60 ಲಕ್ಷ ರೂ ವಂಚನೆ; ಬ್ಯಾಂಕ್ ಸಿಬ್ಬಂದಿ ಸಹಿತ ನಾಲ್ವರ ವಿರುದ್ಧ ಕೇಸ್
ಚಿಕ್ಕಮಗಳೂರು: ಚೆಕ್ ಕಳವು ಮಾಡಿ ನಕಲಿ ಸಹಿ ಹಾಕಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೆನರಾ ಬ್ಯಾಂಕ್ ಸಿಬ್ಬಂದಿ ಸಹಿತ ನಾಲ್ವರ ವಿರುದ್ಧ ನಗರದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ತಿಗುಂಡಿ ಮಸೂದ್ ಅಹಮ್ಮದ್ ಎಂಬವರ ಚೆಕ್ಕನ್ನು ಕಳವು ಮಾಡಿರುವ ಆರೋಪಿಗಳಾದ ಮೊಹಮ್ಮದ್ ಯೂಸುಫ್, ಶಕೀಲ್ ಅಹಮದ್, ಹಾಗೂ ಇಕ್ಬಾಲ್ ನಕಲಿ ಸಹಿ ಮಾಡಿ ರೂ.1.60ಲಕ್ಷ ರೂ.ಗಳನ್ನು ಡ್ರಾ ಮಾಡಿ ವಂಚಿಸಿರುವುದಾಗಿ ಪ್ರಕರಣ ದಾಖಲುಗೊಂಡಿದೆ.
2.50 ಲಕ್ಷ. ಮೊತ್ತದ ಇನ್ನೊಂದು ಚೆಕ್ಕನ್ನು ಆರೋಪಿಗಳು ಖಾಸಗಿ ಹಣಕಾಸು ಸಂಸ್ಥೆಗೆ ನೀಡಿದ್ದು, ಬ್ಯಾಂಕಿಗೆ ನಗದೀಕರಣ ಮಾಡಲು ಹೋದಾಗ ಅದು ಹಣವಿಲ್ಲದೆ ತಿರಸ್ಕೃತಗೊಂಡಿದೆ. ಚೆಕ್ ಪ್ರಕಟಗೊಂಡ ಹಿನ್ನೆಲೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಯವರು ಚೆಕ್ ಮೂಲಕ ವಾರಸುದಾರ ಮಸೂದ್ ಅಹ್ಮದ್ ಗೆ ನೊಟೀಸ್ ಕೊಟ್ಟಿದ್ದಾರೆ ಇದರಿಂದ ವಿಷಯ ಬೆಳಕಿಗೆ ಬಂದಿದೆ.
ಕೆನರಾ ಬ್ಯಾಂಕ್ ಬಸವನಹಳ್ಳಿ ಶಾಖೆಗೆ ಹೋಗಿ ಪರಿಶೀಲಿಸಿದಾಗ 1.60 ಲಕ್ಷ ರೂ. ಪಡೆದು ವಂಚಿಸಿರುವುದು ಖಚಿತಪಟ್ಟಿದ್ದು, ಇದರಲ್ಲಿ ಬ್ಯಾಂಕ್ ನವರು ಶಾಮೀಲಾಗಿದ್ದಾರೆ ಎಂದು ಶಂಕಿಸಿ ಅವರ ವಿರುದ್ಧವೂ ದೂರು ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೆಲವರು ಮಧ್ಯಪ್ರವೇಶಿಸಿ ರಾಜಿ ಸಂಧಾನಕ್ಕೆ ಯತ್ನಿಸಿದ್ದರೂ ಫಲಪ್ರದವಾಗದೆ ಪ್ರಕರಣ ಠಾಣೆ ಮೆಟ್ಟಿಲೇರಿದೆ