Uncategorized

Bridge Collapse: ಮಳೆಗೆ ಕೊಚ್ಚಿ ಹೋದ ದಾಂಡೇಲಿಯ ಕವಳೇಶ್ವರ ಸೇತುವೆ

ಕಾರವಾರ : ದಾಂಡೇಲಿಯ ಪುರಾಣ ಪ್ರಸಿದ್ಧ ಕವಳೇಶ್ವರ ಗುಹೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿದ್ದ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಭಕ್ತಾದಿಗಳು ದೇವರ ದರ್ಶನಕ್ಕೆ ಹರಸಾಹಸಪಟ್ಟು ಹಳ್ಳ ದಾಟುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬಿಕಾನಗರ ಬಳಿಯ ಕವಳೇಶ್ವರ ಗುಹೆ ಸಂಪರ್ಕಿಸುವ ಸೇತುವೆ ಕೊಚ್ಚಿಹೋಗಿ ಭಕ್ತರು ತುಂಬಿ ಹರಿಯುವ ಹಳ್ಳದ ಮೇಲೆ ಕಾಲು ಸಂಕದಲ್ಲಿಯೇ ಶಿವನ ಸನ್ನಿದಾನ ತಲುಪುತ್ತಿದ್ದಾರೆ.

ಕವಳೇಶ್ವರ ನೈಸರ್ಗಿಕವಾಗಿ ನಿರ್ಮಾಣವಾಗಿರುವ ಶಿವನ ದೇವಸ್ಥಾನ ಎನ್ನುವ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಅಲ್ಲದೇ ಈ ಹಿಂದೆ ಪಾಂಡವರು ಬಂದು ಪೂಜೆ ಸಲ್ಲಿಸುತ್ತಿದ್ದರು ಎನ್ನುವ ಪ್ರತೀತಿಯೂ ಇದೆ. ಶಿವರಾತ್ರಿ ಸಂದರ್ಭದಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ದಟ್ಟ ಕಾಡಿನಲ್ಲಿ ಐದಾರು ಕಿಲೋ ಮೀಟರ್ ನಡೆದು ದೇವಸ್ಥಾನಕ್ಕೆ ಹೋಗಬೇಕಾಗಿರುವುದರಿಂದ ಪ್ರವಾಸ ಹಾಗೂ ಟ್ರೆಕ್ಕಿಂಗ್ ಮಾಡುವ ಉದ್ದೇಶದಿಂದಲೂ ಪ್ರತಿನಿತ್ಯ ಸಾಕಷ್ಟು ಮಂದಿ ಕವಳೇಶ್ವರ ಗುಹೆ ವೀಕ್ಷಣೆಗೆ ಆಗಮಿಸುತ್ತಾರೆ. ಆದರೆ ಇದೀಗ ಸೇತುವೆ ಕುಸಿದು ಬಿದ್ದಿರುವುದರಿಂದ ಜನರಿಗೆ ಓಡಾಡುವುದು ಸಾಧ್ಯವಿಲ್ಲ.

ಈ ಭಾಗದಲ್ಲಿ ಬೊಮ್ಮನಳ್ಳಿ ಜಲಾಶಯದ ನಿರಾಶ್ರಿತರು ವಾಸವಾಗಿದ್ದು,ಕರ್ನಾಟಕ ಪವರ್ ಕಾರ್ಪೊರೇಷನ್‌ನ ಸಿಎಸ್ಆರ್ ನಿಧಿಯಲ್ಲಿ ಈ ಭಾಗಕ್ಕೆ ಸೇತುವೆ ನಿರ್ಮಿಸಿಕೊಟ್ಟಲ್ಲಿ ಅನುಕೂಲವಾಗಲಿದೆ.

Related Articles

Leave a Reply

Your email address will not be published.

Back to top button