ಹೈದರಾಬಾದ್ ಮೂಲದ ಉದ್ಯಮಿಗಳಿಂದ ಕೃಷ್ಣಮೃಗ ಬೇಟೆ: ಐವರ ಬಂಧನ
ಕಲಬುರ್ಗಿ: ವನ್ಯಜೀವಿ ಕೃಷ್ಣಮೃಗವನ್ನು ಬೇಟೆಯಾಡಿ ಮಾಂಸವನ್ನು ಸಾಗಿಸುತ್ತಿದ್ದ ಹೈದರಾಬಾದ್ ಮೂಲದ ಉದ್ಯಮಿಗಳನ್ನು ಬಂಧಿಸುವಲ್ಲಿ ಸೇಡಂ ತಾಲೂಕಿನ ಮುಧೋಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೈದರಾಬಾದ್ ಮೂಲದ 3 ಜನ ಹಾಗೂ ಚಂದಾಪೂರ ಗ್ರಾಮದ ಇಬ್ಬರು ಸೇರಿ ಬಂದೂಕಿನಿಂದ ಕೃಷ್ಣಮೃಗ ಬೇಟೆಯಾಡಿದ್ರು. ಅಲ್ಲದೆ, ಮಾಂಸ ಸಾಗಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಅರಿತ ಮುಧೋಳ ಪಿಎಸ್ಐ ಚಿದಾನಂದ ಕಾಶಪ್ಪಗೋಳ, ಟ್ರೈನಿ ಪಿಎಸ್ಐ ದೇವಿಂದರರೆಡ್ಡಿ ಹಾಗೂ ಸಂತೋಷ ಸಿಬ್ಬಂದಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಐದು ಜನ ಆರೋಪಿಗಳ ಪೈಕಿ ಓರ್ವ ಹೈದರಾಬಾದ್ನ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಯ ಪತಿ ಎನ್ನಲಾಗಿದೆ.
ವಾಸಿಫ್ ಹಸನ್ (53), ಪೀರ ಅಹ್ಮದ ಖಾಸಿಂ ಅಲಿ (21), ಅಲಿ ಹುಸೇನ ಮಹ್ಮದ ಹುಸೇನ (42) ಹಾಗೂ ತಾಲೂಕಿನ ಚಂದಾಪೂರ ಗ್ರಾಮದ ಹಣಮಂತ ಹೇಳವರ (45), ವೆಂಕಟೇಶ ಹೇಳವರ (32) ಬಂಧಿತ ಆರೋಪಿಗಳು. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ ಚಿತ್ತಾಪೂರ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಮುಧೋಳ ಪೊಲೀಸರು ಅರಣ್ಯ ವಲಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಬೊಲೆರೋ ಜೀಪ್, ರೈಫಲ್, ಕೃಷ್ಣಮೃಗದ ಮಾಂಸ ಹಾಗೂ ಚಾಕು, ಚೂರಿಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.