ಸಿದ್ದರಾಮಯ್ಯರಿಂದ ಹಿಂದೂ ಧರ್ಮದ ಅವಹೇಳನ : ಬಿಜೆಪಿ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಜಾತಿವಿಭಜಕ ಎಂದು ಉಲ್ಲೇಖಿಸಿ ಸೋಮವಾರ ಸರದಿ ಟ್ವಿಟ್ ಮಾಡಿದ್ದ ಬಿಜೆಪಿ ಮಂಗಳವಾರವೂ ಸಿದ್ದರಾಮಯ್ಯ ವಿರುದ್ಧದ ತನ್ನ ದಾಳಿಯನ್ನು ಮುಂದುವರಿಸಿದ್ದು, ಲಿಂಗಾಯುತ ವಿರೋಧಿ ಸಿದ್ದರಾಮಯ್ಯ ಟ್ಯಾಗ್ ಲೈನ್ ಹಾಕಿ ವಾಗ್ಪ್ರಹಾರ ನಡೆಸಿದೆ.
ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಸಂದರ್ಭದಲ್ಲಿ ತಮ್ಮ ವಿರುದ್ಧ ಬಿಜೆಪಿ ನಡೆಸಿರುವ ಟೀಕಾ ಪ್ರಹಾರದ ವಿರುದ್ಧ ಸಿದ್ದರಾಮಯ್ಯ ಸಹ ಟ್ವಿಟ್ ಮೂಲಕವೇ ಸಮರ್ಥ ಉತ್ತರ ನೀಡುತ್ತಾ ಬಂದಿದ್ದಾರೆ. ಬಿಜೆಪಿ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ಪದಾಧಿಕಾರಿಗಳು ಒಂದೇ ಜಾತಿ ಸೇರಿದವರಾಗಿದ್ದಾರೆ ಏಕೆ? ಬಿಜೆಪಿ ಮುಖಂಡರೆಲ್ಲಾ ಇತರೆ ಜಾತಿಯವರೂ ಇರುವುದೇಕೆ? ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಬಿಜೆಪಿ ಉತ್ತರಿಸುವ ಗೋಜಿಗೆ ಹೋಗಿಲ್ಲ.
ಮಂಗಳವಾರ ಸರಣಿ ಟ್ವಿಟ್ ಮಾಡಿರುವ ಬಿಜೆಪಿ, ಜಾತಿ ರಹಿತ, ವರ್ಗ ರಹಿತ ಸಮಾಜ ಸ್ಥಾಪನೆಯೇ ಬಿಜೆಪಿಯ ಉದ್ದೇಶ. ಆದರೆ ಹಾಲಿನಂಥ ಸಮಾಜವನ್ನು ಒಡೆಯುವುದು ಜಾತಿವಾದಿ ಸಿದ್ದರಾಮಯ್ಯ ಅವರ ಗುರಿ ಎಂದು ನೇರ ವಾಗ್ದಾಳಿ ನಡೆಸಿದೆ. ಮುಂದುವರಿದು ಗಡಿಗೆಯಲ್ಲಿ ತುಂಬಿರುವ ಹಾಲನ್ನು ಕೆಡಿಸುವುದಕ್ಕೆ ಒಂದು ಹನಿ ಹುಳಿ ಸಾಕಲ್ಲವೇ ? ಹಾಗೆಯೇ ಸಮಾಜ ವಿಭಜನೆಗೆ ಸಿದ್ದರಾಮಯ್ಯ ಅವರ ದ್ವೇಷದ ನುಡಿ ಎಂದಿದೆ.
ರಾಜಕೀಯ ಏಳಿಗೆಗಾಗಿ ಸಿದ್ದರಾಮಯ್ಯ ಹಿಂದೂ ಧರ್ಮ ಒಡೆಯುವ ಪ್ರಯತ್ನ ನಡೆಸಿದರು. ಲಿಂಗಾಯತ ಪ್ರತ್ಯೇಕ ಧರ್ಮದ ಅಸ್ತ್ರ ಪ್ರಯೋಗಿಸಿ ಎಂ.ಬಿ.ಪಾಟೀಲರನ್ನು ಬಲಿಪಶುವಾಗಿಸಿದರು. ಸಿದ್ದರಾಮಯ್ಯನವರೇ, ವೀರಶೈವ- ಲಿಂಗಾಯಿತ ಸಮುದಾಯ ಬಿಜೆಪಿ ಜೊತೆ ನಿಲ್ಲುವುದನ್ನು ತಡೆಯುವುದಕ್ಕಾಗಿ ಧರ್ಮ ವಿಭಜನೆಗೆ ಮುಂದಾಗಿದ್ದಲ್ಲವೇ ? ಎಂದು ಪ್ರಶ್ನಿಸಿದೆ.
ವೀರಶೈವ- ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಎಂದಾದರೂ ಗೌರವ ವ್ಯಕ್ತಪಡಿಸಿದ ಉದಾಹರಣೆ ಇದೆಯೇ? ಧರ್ಮ ವಿಭಜನೆಯ ಪ್ರಯತ್ನ ಮಾಡುವಾಗ “ಲಿಂಗಾಯತ ಸ್ವಾಮೀಜಿಗಳು ನೀಡಿದ ಮನವಿ” ಪ್ರಕಾರ ಪ್ರತ್ಯೇಕ ಧರ್ಮದ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿದ್ದೆ ಎಂದು ಜಾರಿಕೊಂಡಿದ್ದು ನೆನಪಿಲ್ಲವೇ? ಎಂದು ಬಿಜೆಪಿ ಕಿಡಿಕಾರಿದೆ.
ಸಿದ್ದರಾಮಯ್ಯ ಅವರೇ, ವೀರಶೈವ – ಲಿಂಗಾಯತ ಸಮುದಾಯದ ಮೇಲೆ ನಿಮಗೇಕೆ ದ್ವೇಷ? ಹಿಂದೆ ಧರ್ಮ ಒಡೆಯಲು ಹೋಗಿ ಆ ಸಮುದಾಯದ ಭಾವನೆ ಕೆರಳಿಸಿದಿರಿ. ಈಗ ಬೊಮ್ಮಾಯಿ ಜಾತಿಯವರು ಕಂಬಳಿ ನೇಯುತ್ತಾರಾ ಎಂದು ಪ್ರಶ್ನಿಸುವ ಮೂಲಕ ಕಾಯಕ ಧರ್ಮವನ್ನು ಅಪಮಾನ ಮಾಡುತ್ತಿದ್ದೀರಿ ಎಂದೂ ಬಿಜೆಪಿ ಟ್ವಿಟ್ ಮಾಡಿದೆ.
ಸಮಾಜವಾದದ ಹೆಸರಿನಲ್ಲಿ ಜಾತಿವಾದ ನಡೆಸುತ್ತಿರುವ ಅವರಿಗೆ ಈಗ ರಾಜ್ಯದ ಯಾವ ಕ್ಷೇತ್ರದಲ್ಲೂ ನೆಲೆಯಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಚಾಮರಾಜಪೇಟೆಗೆ ವಲಸೆ ಹೋಗಲು ಸಿದ್ದತೆ ನಡೆಸಿರುವ ಸಿದ್ದರಾಮಯ್ಯ ಈಗ ಒಂದು ವರ್ಗದ ಓಲೈಕೆಗಾಗಿ ಹಿಂದೂ ಧರ್ಮದ ಅವಹೇಳನಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.