Uncategorized

ಭಟ್ಕಳ ತಾಲೂಕಾ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್‌ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

ಕಾರವಾರ : ಭಟ್ಕಳ ತಾಲೂಕಿನ ಪುರಸಭಾ ಮಳಿಗೆ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಉಂಟಾದ ಘರ್ಷಣೆಗೆ ಸಂಬಂಧಪಟ್ಟಂತೆ ದಿನೇಶ ಬಾಬು ಪಾವಸ್ಕರ ಅವರು ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್‌ ಅವರನ್ನು ಒಳಗೊಂಡಂತೆ ಭಟ್ಕಳ ತಾಲೂಕಾ ಸಹಾಯಕ ಆಯುಕ್ತರು,ತಾಲೂಕಾ ತಹಶೀಲ್ದಾರರು ಹಾಗೂ ಪುರಸಭಾ ಮುಖ್ಯಾಧಿಕಾರಿಗಳ ವಿರುದ್ಧ ಜಾತಿ ನಿಂದನೆ (ಆಟ್ರಾಸಿಟಿ) ಪ್ರಕರಣವನ್ನು ದಾಖಲಿಸಿರುವುದು ಬೆಳಕಿಗೆ ಬಂದಿದೆ.

ದಿನಾಂಕ 18/10/2021 ರಂದು ಪುರಸಭಾ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ದಿನೇಶ ಬಾಬು ಪಾವಸ್ಕರ್ ಎಂಬವರು ನೈಜ ಪರಿಶಿಷ್ಟರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ ಪುರಸಭೆಯಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯು ಕಾನೂನು ಬಾಹಿರವಾಗಿ ನಡೆಯುತ್ತಿರುವ ಬಗ್ಗೆ ಆಕ್ಷೇಪ ಎತ್ತಿದ್ದರು.ಈ ಸಂದರ್ಭದಲ್ಲಿ ಉಂಟಾದ ಘರ್ಷಣೆಗೆ ಸಂಬಂಧಪಟ್ಟಂತೆ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್‌ ಅವರನ್ನು ಒಳಗೊಂಡಂತೆ ಸಹಾಯಕ ಆಯುಕ್ತರು, ತಹಶೀಲ್ದಾರ,ಪುರಸಭಾ ಮುಖ್ಯಾಧಿಕಾರಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಅಕ್ಟೋಬರ್ 18 ರಂದು ಪುರಸಭಾ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ದಿನೇಶ ಬಾಬು ಪಾವಸ್ಕರ್ ಅವರು ನೈಜ ಪರಿಶಿಷ್ಠರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ ಪುರಸಭೆಯಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯು ಕಾನೂನು ಬಾಹಿರವಾಗಿ ನಡೆಯುತ್ತಿರುವ ಬಗ್ಗೆ ಧ್ವನಿ ಎತ್ತಿದ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಪರ್ವೇಜ್ ಕಾಶೀಮ್‌ ಕಾನೂನು ಬಾಹಿರವಾಗಿದೆ ಎಂದು ಹೇಳಲು ನೀನು ಯಾರು ? ನೀನೇನು ಸುಪ್ರೀಂಕೋರ್ಟ್‌ ನ್ಯಾಯಾಧೀಶನಾ ? ಎಂದು ಏರು ಧ್ವನಿಯಲ್ಲಿ ಬೈದು ಸಾರ್ವಜನಿಕವಾಗಿ ಕ್ಷಮೆ ಕೇಳು.ಇಲ್ಲದಿದ್ದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲು ಬಿಡುವುದಿಲ್ಲ ಎಂದು ಹೇಳಿರುತ್ತಾರೆ.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಮಮತಾ ದೇವಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನವನ್ನು ನಡೆಸಿದ್ದರು.

ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ದಿನೇಶ ಬಾಬು ಪಾವಸ್ಕರ ಅವರು ನಕಲಿ ಪರಿಶಿಷ್ಠ ಜಾತಿ ಅವರಿಗೆ ಅವಕಾಶ ನೀಡಿದ್ದಾರೆ.ನೈಜ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದೆ.ಪರಿಶಿಷ್ಟ ದಾಖಲೆಗಳ ಪರಿಶೀಲನೆಯ ನಂತರವೇ ಹರಾಜು ಪ್ರಕ್ರಿಯೆ ನಡೆಸಬೇಕಿತ್ತು.ಇದು ಕಾನೂನು ಬಾಹಿರವಾದ ಹರಾಜು ಪ್ರಕ್ರಿಯೆಯಾಗಿದೆ ಎಂದು ಪ್ರತಿಭಟಿಸಿದ್ದರು.ಈ ಸಂದರ್ಭದಲ್ಲಿ ಪುರಸಬಾ ಅಧ್ಯಕ್ಷ ಪರ್ವೇಜ್‌ ಕಾಶೀಮ್‌ ಹಾಗೂ ಇವರ ಮಧ್ಯ ಮಾತಿನ ಚಕಮಕಿ ನಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಈಗ ಹೊಸ ಬೆಳವಣಿಗೆ ಎಂದರೆ ದಿನೇಶ ಬಾಬು ಪಾವಸ್ಕರ ಅವರು ತಾನೊಬ್ಬ ಪರಿಶಿಷ್ಟ ಜಾತಿಯವನೆಂದು ತಿಳಿದಿದ್ದರೂ ಸಹ ಪುರಸಭಾ ಅಧ್ಯಕ್ಷ ಪರ್ವೇಜ್‌ ಕಾಶೀಮ್‌ ಸಾರ್ವಜನಿಕವಾಗಿ ನನ್ನನ್ನು ಅವಮಾನಿಸಿ ಸಾರ್ವಜನಿಕರೆದುರು ನನಗೆ ಅವಮಾನವಾಗುವಂತೆ ವರ್ತಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಾಜರಿದ್ದ ಉಪವಿಭಾಗಾಧಿಕಾರಿ,ತಾಲೂಕಾ ತಹಶೀಲ್ದಾರ, ಪುರಸಭಾ ಮುಖ್ಯಾಧಿಕಾರಿಗಳು ಒಬ್ಬ ಪರಿಶಿಷ್ಟ ಜಾತಿ ಅವನಿಗೆ ಅವಮಾನವಾಗುತ್ತಿದ್ದರೂ ಸಹ ಮೂಕ ಪ್ರೇಕ್ಷಕರಂತೆ ಕುಳಿತಿದ್ದು,ಕರ್ತವ್ಯ ಲೋಪವೆಸಗಿರುತ್ತಾರೆ.ಈ ರೀತಿ ಸುಳ್ಳು ಜಾತಿ ಪ್ರಮಾಣ ಪತ್ರ ಹೊಂದಿರುವವರಿಗೆ ಮಳಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಿ ಒಬ್ಬ ಪರಿಶಿಷ್ಟ ಜಾತಿಯವನು ಮಾಡಬಹುದಾದ ವ್ಯಾಪಾರ ವ್ಯವಹಾರಕ್ಕೆ ಅಡ್ಡಿಪಡಿಸಿ ದೌರ್ಜನ್ಯ ಎಸೆಗಿರುತ್ತಾರೆ. ಕಾರಣ ಎಸ್‌.ಸಿ.,ಎಸ್‌.ಟಿ. ಪ್ರಿವೆನ್ಸೆನ್‌ ಆಫ್‌ ಆಟ್ರಾಸಿಟಿ ಅಮೈನ್ಡಮೆಂಟ್‌ ಆಕ್ಟ್‌ 2015 ರ ಅಡಿಯಲ್ಲಿ ವಿವಿಧ ಪ್ರಕರಣವನ್ನು ದಾಖಲಿಸಿದ್ದಾರೆ.

ಒಟ್ಟಾರೆ ಭಟ್ಕಳ ತಾಲೂಕಿನ ಇತಿಹಾಸದಲ್ಲಿ ಸಹಾಯಕ ಆಯುಕ್ತರನ್ನೊಳಗೊಂಡಂತೆ ತಹಶೀಲ್ದಾರ ಹಾಗೂ ಪುರಸಭಾ ಅಧ್ಯಕ್ಷರು ಹಾಗೂ ಪುರಸಭಾ ಮುಖ್ಯಾಧಿಕಾರಿಗಳ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿರುವುದು ಇದೇ ಮೊದಲಾಗಿರುತ್ತದೆ.

Related Articles

Leave a Reply

Your email address will not be published.

Back to top button