Uncategorized

ಭಟ್ಕಳ : ಸಾಮಾಜಿಕ ಕಾರ್ಯಕರ್ತ ನಾಗೇಶ ನಾಯ್ಕ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು

ಕಾರವಾರ : ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕೆಲವು ದಿನಗಳ ಹಿಂದೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಕೇಳಿ ಬಂದಿತ್ತು.ಈ ಬಗ್ಗೆ ಮಾಧ್ಯಮಗಳಲ್ಲೂ ಕೂಡಾ ವರದಿ ಬಿತ್ತರವಾಗಿದ್ದು, ಈಗ ಹೆಬ್ಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹೊಸ ಬೆಳವಣಿಗೆ ನಡೆದಿದೆ. ಪಂಚಾಯತ್‌ ನಲ್ಲಿ ನಡೆಯುತ್ತಿರುವ ಭಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತರ ಮೇಲೆ ಫ್ರಿವೆನ್ಸನ್‌ ಆಫ್‌ ಅಟ್ರಾಸಿಟಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ತಾಲೂಕಿನಲ್ಲಿ ಈಗೀಗ ಭ್ರಷ್ಟಾಚಾರದ ಬಗ್ಗೆ ಯಾರೂ ಧ್ವನಿ ಎತ್ತುವಂತಿಲ್ಲ. ಯಾವುದೇ ಮಾಧ್ಯಮವಾಗಲಿ,ಸಾಮಾಜಿಕ ಕಾರ್ಯಕರ್ತರಾಗಲಿ, ಧ್ವನಿ ಎತ್ತಿದ್ದೇ ಹೌದಾದರೆ ಆ ಧ್ವನಿಯನ್ನು ಅಡಗಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದರೆ ಆ ವ್ಯಕ್ತಿಯ ಮೇಲೆ ದಬ್ಬಾಳಿಕೆಯನ್ನು ನಡೆಸುವುದು, ದಾಳಿಯನ್ನು ಮಾಡುವುದು ಅಥವಾ ಸುಳ್ಳು ಜಾತಿನಿಂದನಾ ಪ್ರಕರಣವನ್ನು ದಾಖಲಿಸುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ ಎನ್ನುವುದು ಸಾರ್ವಜನಿಕರ ಆಕ್ರೋಶದ ಮಾತಾಗಿದೆ.

ಕಳೆದೆರಡು ದಿನಗಳ ಹಿಂದೆ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಪಂಚಾಯತ್‌ ನಿಧಿ ಹಣ ದುರುಪಯೋಗ ಆಗಿದೆ.ಪಂಚಾಯತ್ ಅಧ್ಯಕ್ಷರು ‌ ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್‌ ನಿಧಿಯನ್ನು ದುರುಪಯೋಗವನ್ನು ಮಾಡಿ ಅವ್ಯವಹಾರ ನಡೆಸಿದ್ದಾರೆ ಎಂದು ಮಾದೇವ ನಾಯ್ಕ ತೆಂಗಿನಗುಂಡಿ ಹಾಗೂ ನಾಗೇಶ ನಾಯ್ಕ ಹೊನ್ನೆಗದ್ದೆ ಇವರು ಆರೋಪಿಸಿದ್ದರು. ಅಲ್ಲದೆ ಮಾಹಿತಿ ಹಕ್ಕಿನ ಮೂಲಕ ಕೆಲವೊಂದು ದಾಖಲೆಯನ್ನು ಸಹ ಕೇಳಿದ್ದರು.

ಈ ಹಿಂದೆ ನಡೆದ ಸಾಮಾನ್ಯ ಸಭೆಯನ್ನು ಕೂಡಾ ಬಹಿಷ್ಕರಿಸಿದ್ದರು. ಅಲ್ಲದೆ ಮುಂದಿನ ದಿನಗಳಲ್ಲಿ ಅಧ್ಯಕ್ಷರು ಹಾಗೂ ಅಭಿವೃದ್ದಿ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅವ್ಯವಹಾರ ಖಂಡಿಸಿ ತನಿಖೆಗೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಕೂಡಾ ತಿಳಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು.

ಈ ಇಬ್ಬರು ವ್ಯಕ್ತಿಗಳ ಮೇಲೆ ಜಾತಿನಿಂದನಾ ಪ್ರಕರಣಗಳು ದಾಖಲಾಗಿರುತ್ತದೆ. ತೆಂಗಿನಗುಂಡಿ ಗೊಂಡರ ಕೇರಿಯ ಕುಪ್ಪಯ್ಯ ನಾಗಯ್ಯ ಗೊಂಡ ಎಂಬ ವ್ಯಕ್ತಿಯೋರ್ವರು ತಾನು ಪರಿಶಿಷ್ಠ ಪಂಗಡದ ಗೊಂಡ ಜಾತಿಗೆ ಸೇರಿದವನಿದ್ದು, ತಾನು ವಾಟ್ಸಾಪ್‌ ಮೂಲಕ ಸಂದೇಶ ಹಾಕಿದ ವಿಚಾರಕ್ಕೆ ಮಾದೇವ ನಾಗಪ್ಪ ನಾಯ್ಕ ಮತ್ತು ನಾಗೇಶ ನಾರಾಯಣ ನಾಯ್ಕ ಇವರು ಹೆಬ್ಳೆ ಸಿದ್ದಿವಿನಾಯಕ ಕ್ರಾಸ್‌ ಹತ್ತಿರ ರಾಜು ನಾಯ್ಕ ಹೋಟೆಲ್‌ ಮುಂಭಾಗದಲ್ಲಿ ಅವಾಚ್ಯ ಶಬ್ಧಗಳಿಂದ ಬೈದು ಕೆನ್ನೆಗೆ ಹೊಡೆದು, ಕಾಲಿನಿಂದ ಒದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಫ್ರಿವೆನ್ಸ್‌ ಆಫ್‌ ಅಟ್ರಾಸಿಟಿ ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ತಾಲೂಕಿನಲ್ಲಿ ಈ ಜಾತಿನಿಂದನಾ ಪ್ರಕರಣದ ಬಗ್ಗೆ ಹಲವಾರು ಊಹಾಪೋಹಗಳು ಕೇಳಿಬರುತ್ತಿದ್ದು, ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂಬ ಮಾತು ಕೇಳಿಬರುತ್ತಿದೆ. ಜನಪ್ರತಿನಿಧಿ ಒಬ್ಬರು ಈ ಪ್ರಕರಣವನ್ನು ದಾಖಲಿಸುವಂತೆ ಇಲಾಖೆಯ ಮೇಲೆ ಒತ್ತಡವನ್ನು ತಂದಿರುತ್ತಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗೊಂಡ ಸಮಾಜದ ಸಿಂಧುತ್ವ ಪ್ರಮಾಣದ ಬಗ್ಗೆ ಈಗಾಗಲೇ ಪರಿಶಿಷ್ಟ ಜಾತಿಯವರಾದ ಕಿರಣ ಶಿರೂರ ಹಾಗೂ ಇತರರು ಧ್ವನಿ ಎತ್ತಿದ್ದು,ಗೊಂಡ ಸಮಾಜದವರು ಪರಿಶಿಷ್ಟ ಪಂಗಡದವರಲ್ಲ. ನಿಜವಾಗಿಯೂ ಗೋಂಡ್‌ ಎಂಬ ಸಮುದಾಯದವರು ನಿಜವಾದ ಪರಿಶಿಷ್ಠರಾಗುತ್ತಾರೆ. ನಮ್ಮ ಇಡೀ ಉತ್ತರ ಕನ್ನಡದಲ್ಲಿ ಗೋಂಡ್‌ ಸಮಾಜದವರು ಇರುವ ಯಾವುದೇ ದಾಖಲೆಗಳಿರುವುದಿಲ್ಲ. ಆದ್ದರಿಂದ ತಾಲೂಕಿನಲ್ಲಿರುವ ಗೊಂಡ ಸಮುದಾಯವು ಪರಿಶಿಷ್ಠ ಪಂಗಡಕ್ಕೆ ಸೇರಿದವರೇ ಅಲ್ಲ ಎಂಬ ವಾದವನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಈ ಹಿನ್ನೆಲೆಯಲ್ಲಿ ಇಡೀ ಗೊಂಡ ಸಮುದಾಯಕ್ಕೆ ಜಾತಿ ಸಿಂಧುತ್ವದ ಬಗ್ಗೆ ಪ್ರಶ್ನೆಗಳೇರ್ಪಟ್ಟು ಗೊಂಡ ಸಮುದಾಯದವರು ಜಾತಿ ಸಿಂಧುತ್ವದ ಸಂಕಷ್ಟದಲ್ಲಿದ್ದರು. ಈ ಸಂದರ್ಭದಲ್ಲಿಯೇ ಈ ಅಟ್ರಾಸಿಟಿ ಪ್ರಕರಣ ದಾಖಲಿಸುವ ಅವಶ್ಯಕತೆ ಇತ್ತೇ ಎನ್ನುವುದು ಅವರದೇ ಸಮಾಜದ ಪ್ರಶ್ನೆಯಾಗಿದೆ.

ಏನೇ ಆಗಲಿ ಹೆಬ್ಳೆ ಗ್ರಾಮ ಪಂಚಾಯತ್‌ ಭ್ರಷ್ಟಾಚಾರ ನಡೆಸಿರುವ ಆರೋಪ ಈಗ ಜಾತಿನಿಂದನಾ ಪ್ರಕರಣದ ತಿರುವು ಪಡೆದುಕೊಂಡಿದೆ ಎನ್ನುವುದು ತಾಲೂಕಾ ಸಾರ್ವಜನಿಕರ ಮಾತಾಗಿದೆ. ಸತ್ಯಾ ಸತ್ಯತೆಗಳು ಪೊಲೀಸ್‌ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

Related Articles

Leave a Reply

Your email address will not be published.

Back to top button