Uncategorized

ಜಮೀನು ಕಬಳಿಕೆಗಾಗಿ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ದೌರ್ಜನ್ಯ; ಆರೋಪ

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಬಡ ದಲಿತ ಕುಟುಂಬವೊಂದರ ಜಮೀನನ್ನು ಕಬಳಿಸುವ ಉದ್ದೇಶದಿಂದ ಸವರ್ಣೀಯರು ಕಿರುಕುಳ ನೀಡುತ್ತಿರುವುದಲ್ಲದೆ, ಕುಟುಂಬದ ಬುದ್ಧಿಮಾಂಧ್ಯ ಯುವತಿಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಮನೆಗೆ ಪೆಟ್ರೋಲ್ ಸುರಿದು ದಹಿಸಿ ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕೊಪ್ಪ ಠಾಣೆಗೆ ದೂರು ನೀಡಿದ್ದರೂ ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದೌರ್ಜನ್ಯ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಸಂಘಟನೆಯ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಕೆರೆ ಗ್ರಾಮದ ಲೀಲಾ, ನಾಗೇಶ್ ದಂಪತಿ ಪರಿಶಿಷ್ಟ ಸಮುದಾಯದವರಾಗಿದ್ದು, ಮುಕ್ಕಾಲು ಎಕರೆ ಜಮೀನು ಹೊಂದಿರುತ್ತಾರೆ. ಸಕ್ರಮಾತಿಗಾಗಿ ಫಾರ್ಮ್ ನಂ.57ರಲ್ಲಿ ಅರ್ಜಿ ಸಲ್ಲಿಸಿದ್ದು, ಹಕ್ಕುಪತ್ರ ಸಿಕ್ಕಿಲ್ಲ. ಇವರ ಇಬ್ಬರು ಹೆಣ್ಣುಮಕ್ಕಳ ಪೈಕಿ ಓರ್ವಳು ಬುದ್ಧಿಮಾಂದ್ಯೆಯಾಗಿದ್ದು, ದಂಪತಿ ಕೂಲಿ ಕೆಲಸ ಮಾಡಿಕೊಂಡು ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ. ಪಕ್ಕದಲ್ಲಿ ವಾಸವಾಗಿರುವ ಮೇಲ್ವರ್ಗದ ಸವರ್ಣೀಯರು ಈ ಜಮೀನನ್ನು ಕಬಳಿಸುವ ಉದ್ದೇಶದಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಬಡಕುಟುಂಬವನ್ನು ಗ್ರಾಮದಿಂದ ಓಡಿಸಲು ಯತ್ನಿಸಿದ್ದಾರೆ ಆರೋಪಿಸಿದರು.

ಮೇಲ್ವರ್ಗದವರಾದ ರವೀಂದ್ರ, ಅನಿಲ, ಸುಶೀಲ, ನಾಗೇಶ, ಶ್ರೀನಿವಾಸ್, ದಿನೇಶ್ ಎಂಬವರು ಕಳೆದ ಅ.3ರಂದು ಇದೇ ಜಾಗದ ವಿಷಯದಲ್ಲಿ ವಿನಾಕಾರಣ ದಲಿತ ಮಹಿಳೆ ಲೀಲಾ ಅವರ ಮನೆಗೆ ನುಗ್ಗಿ ದಾಂಧಲೆ, ಹಲ್ಲೆ ಮಾಡಿದ್ದಾರೆ. ಸುಶೀಲಾ ಎಂಬವರು ಲೀಲಾ ಅವರ ಬುದ್ಧಿಮಾಂದ್ಯ ಮಗಳ ತಲೆಗೆ ಕತ್ತಿಯಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಹಲ್ಲೆ ಮಾಡಿದ್ದಲ್ಲದೆ ಕೊಪ್ಪ ಪೊಲೀಸರಿಗೆ ದೂರು ನೀಡಿ ಸುಳ್ಳು ಆರೋಪ ಹೊರಿಸಿದ್ದಾರೆ. ಠಾಣೆಗೆ ಕರೆಸಿದ ಪೊಲೀಸರು ಒಪ್ಪಂದ ಮಾಡಿ ಕಳುಹಿಸಿದ್ದಾರೆ. ಆದರೆ ಮರುದಿನ ಸಂಜೆ ಮೇಲ್ವರ್ಗದವರು ಮತ್ತ ಲೀಲಾ ಮನೆಗೆ ಕಲ್ಲು ಹೊಡೆದು ದಾಳಿ ಮಾಡಿದ್ದಾರೆ ಎಂದು ದೂರಿದರು.

ರಸ್ತೆಯಲ್ಲಿ ತಿರುಗಾಡಿದರೆ ಕೊಚ್ಚಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆ ಹಿನ್ನೆಲೆಯಲ್ಲಿ ಜೀವಭಯದಿಂದ ದಲಿತ ಕುಟುಂಬ ಕೊಪ್ಪ ಠಾಣೆ ಪೊಲೀಸರಿಗೆ ದೂರು ನೀಡಿ ಅಟ್ರಾಸಿಟಿ ದೂರು ದಾಖಲಿಸಿದ್ದಾರೆ. ದೂರು ನೀಡಿ ತಿಂಗಳಾಗಿದ್ದರೂ ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸರು ಸೇರಿದಂತೆ ಯಾವ ಇಲಾಖೆಯವರೂ ಸ್ಥಳಕ್ಕೆ ಭೇಟಿನೀಡಿ ನೊಂದ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸಲು ಮುಂದಾಗಿಲ್ಲ ಎಂದು ಆರೋಪಿಸಿದರು.

ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲವಾದಲ್ಲಿ ಅ.28ರಂದು ಚಿಕ್ಕಮಗಳೂರು ನಗರದಲ್ಲಿ ನ್ಯಾಯಕ್ಕಾಗಿ ಧರಣಿ ನಡೆಸಲಾಗುವುದು ಎಂದರು. ಈ ವೇಳೆ ಕಲ್ಕೆರೆ ಗ್ರಾಮದ ದಲಿತ ಕುಟುಂಬಸ್ಥರ ಸಹಿತ ದಲಿತ ಮುಖಂಡರಾದ ಪುಟ್ಟಸ್ವಾಮಿ, ದಿವಾಕರ್, ಗಣೇಶ್, ಹಾದಿಹಳ್ಳಿ ಅಶೋಕ್, ಪೂವಯ್ಯ ಇದ್ದರು.

Related Articles

Leave a Reply

Your email address will not be published. Required fields are marked *

Back to top button