Uncategorized

ಉತ್ತರ ಕನ್ನಡ: ಮೂವರು ಶಾಸಕರ ಮೇಲೆ ಅಸಮಾಧಾನ : ಬಿಜೆಪಿ ಆಂತರಿಕ ಸಮಿಕ್ಷೆಯಲ್ಲಿ ಬಹಿರಂಗ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮೂವರು ಶಾಸಕರಾದ ಸುನೀಲ್ ನಾಯ್ಕ, ದಿನಕರ ಶೆಟ್ಟಿ ಮತ್ತು ರೂಪಾಲಿ ನಾಯ್ಕ ಅವರ ಬಗ್ಗೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಸ್ಪೋಟಕ ಮಾಹಿತಿ ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಬಹಿರಂಗವಾಗಿರುವುದು ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸಲಾಗಿರುವ ಸಮೀಕ್ಷೆಯ ಇಂಚಿಂಚು ಮಾಹಿತಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ ಅವರಿಗೆ ಸಲ್ಲಿಕೆಯಾಗುತ್ತಿದೆ. ಈ ಬೆಳವಣಿಗೆ ಮೇಲೆ ನೇರವಾಗಿ ಬಿ.ಎಲ್‌.ಸಂತೋಷ ಅವರು ನಿಗಾ ಇರಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿ ಆಯ್ಕೆಗೆ ನಿರ್ಣಾಯಕವಾಗಿರುವ ಈ ಸರ್ವೆಯನ್ನು ಥರ್ಡ್‌ ಪಾರ್ಟಿ ಮಾದರಿಯಲ್ಲಿ ನಡೆಸಲಾಗುತ್ತಿದ್ದು,ಹೊರ ಜಿಲ್ಲೆಯ ಬಿಜೆಪಿ ಹಾಗೂ ಆರ್‌.ಎಸ್‌.ಎಸ್‌ ಮತ್ತು ಇತರ ಅಂಗಸಂಸ್ಥೆಗಳ ಪಧಾಧಿಕಾರಿಗಳ ಮೂಲಕ ನಡೆಸಲಾಗುತ್ತಿದೆ. ಟಿ.ವಿ.ಸುದ್ದಿ ಮಾಧ್ಯಮಗಳು ಚುನಾವಣಾ ಸಂದರ್ಭದಲ್ಲಿ ನಡೆಸುವ ಮಾದರಿಯಲ್ಲಿ ಈ ಸಮೀಕ್ಷೆ ನಡೆಸಲಾಗುತ್ತಿರುವ ಮಾಹಿತಿ ಲಭ್ಯವಾಗಿದೆ.

ಜನ ಸಾಮಾನ್ಯರ ಬಳಿ, ಬಿಜೆಪಿ ಅಭಿಮಾನಿಗಳಾದ ದೇವಸ್ಥಾನ ಟ್ರಸ್ಟಿ, ವೈದ್ಯರು, ಉಪನ್ಯಾಸಕರ ಬಳಿ ತೆರಳಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದ್ದರೆ. ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳಿಂದ ಫೋನ್‌ ಮೂಲಕ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಈ ಸರ್ವೆ ಕಾರ್ಯ ಸದ್ಯ ಮುಂದುವರೆಯಲಿದೆ. ಇ-ಮೇಲ್‌ ಮೂಲಕವೂ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ನಮ್ಮ ಜಿಲ್ಲೆಯ ಈ ಮೂವರು ಶಾಸಕರ ಮೇಲೆ ಕಾರ್ಯಕರ್ತರಿಗೇಕೆ ಅಸಮಾಧಾನ ಎಂಬುದನ್ನು ಹುಡುಕುತ್ತಾ ಹೋದಾಗ ಈ ಶಾಸಕರುಗಳು ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಸಂಘಪರಿವಾರದವರನ್ನು ಸಂಪೂರ್ಣ ನಿರ್ಲ್ಯಕ್ಷ್ಯ ಮಾಡಿರುವ ಜೊತೆಗೆ ಪಕ್ಷ ಸಂಘಟನೆಯ ಬಗ್ಗೆ ಆಸಕ್ತಿ ನೀಡದೆ ಇರುವುದು, ಮೂಲ ಕಾರ್ಯಕರ್ತರ ಕಡೆಗಣನೆ ಬಗ್ಗೆ ಶಾಸಕರ ವಿರುದ್ಧ ಸರ್ವೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಪಕ್ಷ ಸಂಘಟನೆಗೆ ಅತ್ಯಂತ ಪ್ರಮುಖ ಆದ್ಯತೆ ನೀಡುವ ಬಿಜೆಪಿಯಲ್ಲಿ ಪಕ್ಷ ಸಂಘಟನೆಯನ್ನೇ ಮರೆತು ತಮ್ಮದೇ ಗುಂಪನ್ನೊಂದು ಕಟ್ಟಿಕೊಂಡು ಆ ಗುಂಪಿಗೆ ಪ್ರಾದಾನ್ಯತೆ ನೀಡುವ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಮೂಲ ಬಿಜೆಪಿ ಕಾರ್ಯಕರ್ತರ ಕಡೆಗಣನೆ ಈ ಶಾಸಕರಿಗೆ ಸರ್ವೆಯಲ್ಲಿ ನೆಗೆಟಿವ್‌ ಅಂಕವನ್ನು ನೀಡಿದೆ ಎಂದು ತಿಳಿದು ಬಂದಿದೆ. ನಿಷ್ಠಾವಂತ ಮೂಲ ಕಾರ್ಯಕರ್ತರ ಕಡೆಗಣನೆ ಈ ಮೂವರು ಶಾಸಕರಾದ ಸುನೀಲ್‌ ನಾಯ್ಕ, ದಿನಕರ ಶೆಟ್ಟಿ ಹಾಗೂ ರೂಪಾಲಿ ನಾಯ್ಕ ಅವರಿಂದ ಆಗುತ್ತಿದೆ ಎಂಬ ಅಭಿಪ್ರಾಯ ಸರ್ವೆಯಲ್ಲಿ ವ್ಯಕ್ತವಾಗಿದೆ.

ಇನ್ನು ಭಟ್ಕಳ ಶಾಸಕರಾದ ಸುನೀಲ್‌ ನಾಯ್ಕ ಅವರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಆರೋಪ ಸರ್ವೆ ಸಂದರ್ಭದಲ್ಲಿ ಕಾರ್ಯಕರ್ತರಿಂದ ಕೇಳಿ ಬಂದಿದೆ. ಹಿಂದೂತ್ವದ ಬಲದಿಂದ ಗೆದ್ದು ಬಂದ ಶಾಸಕ ಸುನೀಲ್‌ ನಾಯ್ಕ ಅವರು ಹಿಂದೂತ್ವದಿಂದ ದೂರ ಸರಿಯುತ್ತಿದ್ದಾರೆ. ಕಾಮಗಾರಿಗಳ ಗುತ್ತಿಗೆ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದಾರೆ ಎಂದು ಕೂಡಾ ಕಾರ್ಯಕರ್ತರು ಸರ್ವೆ ಸಂದರ್ಭದಲ್ಲಿ ದೂರಿರುವುದಾಗಿ ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಈ ಮೂವರು ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಲೇ ಇತರರ ಹೆಸರು ಮುನ್ನೆಲೆಗೆ ಬಂದಿದ್ದು, ಪರ್ಯಾಯ ಅಭ್ಯರ್ಥಿಗಳ ಹುಡುಕಾಟವು ಆರಂಭವಾಗಿದೆ.ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷಕ್ಕೆ ಸದಾ ದುಡಿಯುತ್ತಿರುವವರು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕಾರವಾರದಲ್ಲಿ ಕಾರ್ಯಕರ್ತರಿಗೆ ಸ್ಪಂದನೆ, ಪಕ್ಷ ಸಂಘಟನೆಯಲ್ಲಿ ಸಕ್ರೀಯ ಪಾತ್ರ,ಹಿಂದೂ ಸಂಘಟನೆಯಲ್ಲಿ ಜಿಲ್ಲೆಯಲ್ಲಿ ಹಣ ಪಡೆಯದೇ ವಾದ ಮಾಡುತ್ತಿರುವುದು, ವಾಕ್‌ ಚಾತುರ್ಯ, ಪರಿಸರ ಚಟುವಟಿಕೆ ಜನಸಾಮಾನ್ಯರ ಬಳಿ ಬೆರೆಯುವಿಕೆ, ಪಹರೆ ವೇದಿಕೆ, ಯಕ್ಷಗಾನದಂತ ಕಲಾ ಚಟುವಟಿಕೆ, ಈ ಅಂಶಗಳು ವಕೀಲ ನಾಗರಾಜ ನಾಯಕ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕುಮಟಾ ಮತ್ತು ಭಟ್ಕಳ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಳಿಗಾಗಿ ಇನ್ನೂ ಹುಡುಕಾಟದಲ್ಲಿ ಇರುವ ಮಾಹಿತಿ ಲಭ್ಯವಾಗಿದೆ.

ಇನ್ನು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ಕ್ಷೇತ್ರದ ಕಾರ್ಯಕರ್ತರಲ್ಲಿ ಯಾವುದೇ ಅಸಮಾಧಾನ ಇರುವುದಿಲ್ಲ. ವಲಸೆ ಬಂದ ಶಾಸಕರಿಗೆ ಹಾಗೂ ಅವರ ಬೆಂಬಲಿಗರಿಗೆ ಹೆಚ್ಚಿನ ಸ್ಥಾನಮಾನ ದೊರೆತ ಬಗ್ಗೆ ಬೆಂಗಳೂರು ಮಟ್ಟದಲ್ಲಿ ಕಾರ್ಯರ್ತರಿಗೆ ಅಸಮಾಧಾನ ಇದ್ದರೂ ಜಿಲ್ಲೆಯ ಮಟ್ಟಿಗೆ ಶಿವರಾಮ್ ಹೆಬ್ಬಾರ್ ಅವರ ಬಗ್ಗೆ ಸರ್ವೆಯಲ್ಲಿ ಯಾವುದೇ ಅಸಮಾಧಾನ ವ್ಯಕ್ತವಾಗಿಲ್ಲ ಎಂದು ತಿಳಿದು ಬಂದಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ತನ್ನ ಸಮರ್ಥ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಈಗಲೇ ಸರ್ವೆ ಕಾರ್ಯಕ್ಕೆ ಇಳಿದಿದ್ದು, ಇದು ಮೊದಲ ಹಂತದ ಸರ್ವೆಯಾಗಿದೆ. ಕೊನೆಯ ಕ್ಷಣದಲ್ಲಿ ಈ ಸರ್ವೆಯ ಸಂಪೂರ್ಣ ಚಿತ್ರಣವೇ ಬದಲಾಗಬಹುದು ಎಂಬುದು ಕೂಡ ಜಿಲ್ಲೆಯ ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

Related Articles

Leave a Reply

Your email address will not be published.

Back to top button