ವಿದ್ಯುತ್ ತಂತಿ ಕಿಡಿ ತಗುಲಿ ಸುಟ್ಟು ಕರಕಲಾದ ಗುಡಿಸಲುಗಳು…!
ದಾವಣಗೆರೆ: ಆಕಸ್ಮಿಕವಾಗಿ ವಿದ್ಯುತ್ ತಂತಿಯ ಬೆಂಕಿ ಕಿಡಿ ತಗುಲಿದ ಪರಿಣಾಮ ಎರಡು ಗುಡಿಸಲುಗಳು ಭಸ್ಮವಾದ ಘಟನೆ ಚನ್ನಗಿರಿ ತಾಲ್ಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ.
ಬುಧವಾರ ರಾತ್ರಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಎರಡು ಮನೆಗಳು ಸುಟ್ಟು ಕರಕಲಾಗಿವೆ. ಮಲ್ಲೇಶ್ವರ ಗ್ರಾಮದ ಕುಮಾರ್ ಮತ್ತು ಹನುಮಂತ ಅವರಿಗೆ ಸೇರಿರುವ ಗುಡಿಸಲುಗಳು ಬೆಂಕಿ ಕೆನ್ನಾಲಗಿಗೆ ಆಹುತಿಯಾಗಿವೆ. ವಿದ್ಯುತ್ ಲೈನ್ ಈ ಎರಡು ಗುಡಿಸಲುಗಳಿಗೆ ಜಾಯಿಂಟ್ ಆಗಿ ಇತ್ತು. ರಾತ್ರಿ ಗುಡಿಸಲಿಗೆ ತಂತಿ ತಗುಲಿ ಬೆಂಕಿ ಹತ್ತಿ ಹೊತ್ತಿ ಉರಿದಿದೆ.
ಕುಮಾರ್ ಎಂಬುವವರು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು, ಹನುಮಂತಪ್ಪ ಕೂಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಬೇರೆ ಮನೆಯಲ್ಲಿ ಮಲಗಿದ್ದರಿಂದ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಕುಮಾರ್ ಅವರ 80 ಸಾವಿರ ರೂಪಾಯಿ, ಭಾಗ್ಯಲಕ್ಷ್ಮೀ ಬಾಂಡ್ ಸುಟ್ಟು ಹೋಗಿದೆ. ಹನುಮಂತಪ್ಪ ಅವರಿಗೆ ಸಂಬಂಧಿಸಿದಂತೆ ಎಷ್ಟು ನಷ್ಟವಾಗಿದೆ ಎಂಬುದು ಇನ್ನು ಗೊತ್ತಾಗಬೇಕಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಅಷ್ಟರೊಳಗೆ ಗುಡಿಸಲುಗಳು ಸುಟ್ಟು ಭಸ್ಮವಾದವು.