ಕೇವಲ 15 ರೂ.ಗೆ ಭರ್ತಿ 120 ಕಿಮೀ ಮೈಲೇಜ್..!: ಸ್ನೇಹಿತರಿಬ್ಬರ ಹೊಸ ಬೈಕ್ ಆವಿಷ್ಕಾರ
ಬಾಗಲಕೋಟೆ: ಕೊರೊನಾ ಲಾಕ್ ಡೌನ್ ಅದೆಷ್ಟೋ ಜನರ ಜೀವನ ಕಸಿದುಕೊಂಡಿದೆ. ಲಾಕ್ ಡೌನ್ ಸಮಯದಲ್ಲಿ ಉದ್ಯೋಗ ಇಲ್ಲದೇ ಜನರ ಜೇಬು ಖಾಲಿ ಆಗಿತ್ತು. ಈ ಮಧ್ಯೆ ಪೆಟ್ರೋಲ್ ದರ ಕೂಡ ಗಗನಕ್ಕೆ ಏರಿದೆ. ಆದರೆ, ಇದೇ ಲಾಕ್ ಡೌನ್ ಸಮಯದಲ್ಲಿ ಖಾಲಿ ಕುಳಿತಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಇಬ್ಬರು ಸ್ನೇಹಿತರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.
ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್ ಹಾಗೂ ಮಂಜುನಾಥ ಜಲಗೇರಿ ಎಂಬುವರು ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿದ್ದಾರೆ. ಹೀಗೆ ವಿಶೇಷವಾಗಿ ತಯಾರಾಗಿರುವ ಬೈಕ್ ಗೆ ಯಾವುದೇ ಇಂಧನದ ಅವಶ್ಯಕತೆ ಇಲ್ಲ. ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್ ಹಾಗೂ ಮಂಜುನಾಥ ಜಲಗೇರಿ ರೂವಾರಿಯ ವಿಶೇಷ ಬೈಕ್ ಕೇವಲ ಬ್ಯಾಟರಿ ಅಷ್ಟೇ ಸಾಕು. ಅದು ಕೇವಲ ಮೂರು ಗಂಟೆಗಳ ಕಾಲ ಚಾರ್ಜ್ ಮಾಡಿದ್ರೆ ಸಾಕು 120 ಕಿ.ಮೀ ವರೆಗೆ ಸಂಚಾರ ಮಾಡುತ್ತದೆ. ಹಾಗಾಗಿ 15 ರೂಪಾಯಿ ಖರ್ಚಿನಲ್ಲಿ 120 ಕಿ.ಮೀ ಸಂಚರಿಸಬಹುದಾಗಿದೆ.
ಇನ್ನು ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್ ಎಲೆಕ್ಟ್ರಿಕ್ ಅಂಗಡಿ ಹೊಂದಿದ್ದಾರೆ. ಮಂಜುನಾಥ ಜಲಗೇರಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾರೆ. ಲಾಕ್ ಡೌನ್ ವೇಳೆ ಇಬ್ಬರ ಅಂಗಡಿಗಳು ಗ್ರಾಹಕರಿಲ್ಲದೇ ಬಂದ್ ಆಗಿದ್ದವು. ಈ ವೇಳೆ ಇಬ್ಬರೂ ಸೇರಿ ಎಲೆಕ್ಟ್ರಿಕ್ ಬೈಕ್ ತಯಾರಿಸುವ ಫ್ಲ್ಯಾನ್ ಮಾಡ್ತಾರೆ. ಹಾಗೆ ಸುಮಾರು 3-4 ತಿಂಗಳ ಕಾಲ ಸಮಯ ತೆಗೆದುಕೊಂಡು ಕೊನೆಗೂ ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿದ್ದಾರೆ. ಈ ಬೈಕ್ ಗೆ ಒಟ್ಟು ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ.
ಇದೇ ಬ್ಯಾಟರಿಗಳ ಮೂಲಕ ಬೈಕ್ ಸಂಚಾರ ಮಾಡುತ್ತದೆ. ಈ ಬೈಕ್ ಕೇವಲ ಸಿಟಿಯಲ್ಲಿ ಓಡಾಟಕ್ಕೆ ಬಳಸಬಹುದಾಗಿದೆ.ಅಂಗಡಿ, ಮನೆ, ಮಾರುಕಟ್ಟೆ ಸೇರಿ ಸ್ಥಳೀಯ ಓಡಾಟಕ್ಕೆ ಹೆಚ್ಚು ಅನುಕೂಲಕರವಾಗಿದೆ. ಒಟ್ಟು 40-50 ಸಾವಿರ ರೂಪಾಯಿ ಖರ್ಚಿನಲ್ಲಿ ಈ ಬೈಕ್ ರೂಪಗೊಂಡಿದೆ. ಈ ಬೈಕ್ ಪರಿಸರ ಸ್ನೇಹಿಯಾಗಿದೆ. ವೇಗಮಿತಿ 30 ಕಿ.ಮೀ ಇರುವುದರಿಂದ ಬೈಕ್ ಗೆ ಯಾವುದೇ ನೋಂದಣಿ ಅಥವಾ ಪರವಾನಗಿ ಬೇಕಾಗಿಲ್ಲ.
ಒಟ್ಟಿನಲ್ಲಿ ಲಾಕ್ ಡೌನ್ ಸಮಯದಲ್ಲಿ ಖಾಲಿ ಕುಳಿತ ಇಬ್ಬರೂ ಸ್ನೇಹಿತರು ಸೇರಿ ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸ್ನೇಹಿತರ ಎಲೆಕ್ಟ್ರಿಕ್ ಬೈಕ್ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.