Uncategorized

ಲಾವಂಚ ಉದ್ಯಮದಲ್ಲಿ ಸಾಧನೆ ಮಾಡಿದ ಎಂ.ಬಿ.ಮ್ಯಾಥ್ಯೂ

ತೇಜಸ್ವಿ ಬಿ.ನಾಯ್ಕ

ಕಾರವಾರ : ಮೂರನೇ ತರಗತಿ ಓದಿದ ವ್ಯಕ್ತಿಯೊಬ್ಬರು ನೂರು ಮಂದಿಗೆ ಉದ್ಯೋಗ ನೀಡಿದ್ದಾರೆಂದರೆ ನೀವು ನಂಬುತ್ತೀರಾ ? ನಂಬಲೇಬೇಕಾದ ಸಂಗತಿಯಿದು. ಇವರ ಹೆಸರು ಎಂ.ಬಿ.ಮ್ಯಾಥ್ಯೂ. ಮೂಲತಃ ಕೇರಳದವರು. ಇವರ ಪೂರ್ವಜರು ಮೊದಲು ಉಡುಪಿ ಜಿಲ್ಲೆಯ ಕೊಲ್ಲೂರಿಗೆ ಬಂದು ನೆಲೆಸಿದ್ದರು. ಅಲ್ಲಿಂದ ಇವರು ಕಳೆದ 30 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಂಗಾರಮಕ್ಕಿಗೆ ಬಂದು ಜಮೀನು ಖರೀದಿಸಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ. ಕೃಷಿಯಲ್ಲಿ ವಿಶೇಷವಾದ ಆಸಕ್ತಿ ಹೊಂದಿರುವ ಮ್ಯಾಥ್ಯೂ ಅವರು ಲಾವಂಚ ಕೃಷಿಯಲ್ಲಿ ತೊಡಗಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.

ಲಾವಂಚ ಎಂಬ ಗಿಡದ ಬೇರನ್ನು ದಿನನಿತ್ಯದ ಹಲವು ಜೀವನಾವಶ್ಯಕ ವಸ್ತುಗಳಿಗೆ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ಮೊಟ್ಟ ಮೊದಲಿಗೆ ದೇಶಕ್ಕೆ ಪರಿಚಯಿಸಿದವರು ಎಮ್.ಬಿ. ಮ್ಯಾಥ್ಯೂ ಅವರು. 1994 ರ ಗಾಂಧಿ ಜಯಂತಿಯಂದು ಮ್ಯಾಥ್ಯೂ ಅವರು”ಉಸಿರಾ ಇಂಡಸ್ಟ್ರೀ”ಎಂಬ ಹೆಸರಿನ ಲಾವಂಚ ಬೇರಿನ ಬಹುಪಯೋಗಿ ಉದ್ಯಮವನ್ನು ಆರಂಭಿಸಿದ್ದಾರೆ. ಉಡುಪಿ ಮತ್ತು ಮಂಗಳೂರು ಜಿಲ್ಲೆಯ ರೈತರಿಗೆ ಲಾವಂಚ ಕೃಷಿ ಮಾಡಲು ವಿಶೇಷವಾದ ತರಬೇತಿಯನ್ನು ನೀಡಿ ಅವರನ್ನೆಲ್ಲ ಆ ಕೆಲಸಕ್ಕೆ ಅಣಿಗೊಳಿಸಿ ಅವರು ಬೆಳೆದ ಲಾವಂಚವನ್ನು ತಾವೇ ಸ್ವತಃ ಖರೀದಿಸಿ ತಮ್ಮ ಉದ್ಯಮವನ್ನು ನಡೆಸುತ್ತಿದ್ದಾರೆ.

ಮ್ಯಾಥ್ಯೂ ಅವರು ಆರಂಭಿಸಿರುವ ಈ ಉದ್ಯಮದಲ್ಲಿ ನೂರಕ್ಕೂ ಅಧಿಕ ಯುವಕ, ಯುವತಿಯರು ಮತ್ತು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಲಾವಂಚ ಬೇರಿನಿಂದ ಗಣೇಶ, ಶ್ರೀಕೃಷ್ಣ, ಅಯ್ಯಪ್ಪಸ್ವಾಮಿ ವಿಗ್ರಹವನ್ನು, ಟೊಪ್ಪಿಗೆ, ಮ್ಯಾಟು, ಬೀಸಣಿಕೆ, ಗೀಜಗನ ಗೂಡು, ಕರ್ಟನ್, ಜ್ಯೂವೆಲರಿ ಬ್ಯಾಕ್ಸ್, ಸೂರ್ಯ, ಪ್ಲಾವರ್ ಪೊಟ್, ಕಥಕ್ಕಳಿ, ಜ್ಯೂಸ್, ಸಾಬೂನು ಹೀಗೆ ಲಾವಂಚದಿಂದ 1500 ಕ್ಕೂ ಅಧಿಕ ಉತ್ಪನ್ನಗಳನ್ನು ಇವರು ತಯಾರಿಸುತ್ತಿದ್ದಾರೆ.

ಎಂ.ಬಿ.ಮ್ಯಾಥ್ಯೂ

ಲಾವಂಚದ ಉತ್ಪನ್ನಗಳು ದೇಶವ್ಯಾಪಿ ರಪ್ತಾಗುತ್ತಿದೆ. ತಮಿಳುನಾಡಿನ ಚೆನ್ನೈ, ಕಡಲೂರು, ತಿರುಪೂರು, ಮಹಾರಾಷ್ಟ್ರದ ಮುಂಬೈ, ಪೂನಾ, ರತ್ನಾಗಿರಿ, ಕೇರಳ, ಕರ್ನಾಟಕದ ಪ್ರವಾಸಿ ತಾಣಗಳಾದ ಮೈಸೂರು, ಕೊಲ್ಲೂರು, ಧರ್ಮಸ್ಥಳ, ಗೋಕರ್ಣ, ಮಡಿಕೇರಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇವರ ಉತ್ಪನ್ನಗಳಿಗೆ ಬಾರೀ ಬೇಡಿಕೆ ಇದೆ.

ಬಂಗಾರಮಕ್ಕಿಯ ಆಸುಪಾಸಿನ ಯುವತಿಯರು ಮತ್ತು ಮಹಿಳೆಯರಿಗೆ ಯಥೇಚ್ಚವಾಗಿ ಉದ್ಯೋಗವನ್ನು ಕಲ್ಪಿಸಿರುವ ಮ್ಯಾಥ್ಯೂ ಅವರು ಲಾವಂಚದಿಂದ ಜ್ಯೂಸ್ ಮತ್ತು ಸಾಬೂನನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇವರು ತಯಾರಿಸಿದ ಲಾವಂಚ ಜ್ಯೂಸ್ ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ ಎಂದು ಮ್ಯಾಥ್ಯೂ ಹೇಳುತ್ತಾರೆ. ಅಡಿಕೆ ಹಾಳೆಯಿಂದ ಇವರು ತಯಾರಿಸುವ ದೇವರ ವಿಗ್ರಹಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇದೆ. ಇವರ ಇಡೀ ಕುಟುಂಬ ಲಾವಂಚದ ಉತ್ಪನ್ನಗಳನ್ನು ತಯಾರಿಸುವಲ್ಲಿ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ. ಕೃಷಿಯಲ್ಲಿ ಯುವಕರು ನಿರಾಸಕ್ತಿ ತೋರುತ್ತಿರುವ ಇಂತಹ ಸಂದರ್ಭದಲ್ಲಿ ಮ್ಯಾಥ್ಯೂ ಅವರು ಯುವಕರಿಗೆ ಕೃಷಿಯಲ್ಲಿ ಮಾರ್ಗದರ್ಶನ ನೀಡುತ್ತಾ ಲಾವಂಚ ಉದ್ಯಮವನ್ನು ವಿಸ್ತರಿಸಿಕೊಳ್ಳುವಲ್ಲಿ ವಿಶೇಷವಾದ ಪರಿಶ್ರಮವನ್ನು ತೋರುತ್ತಿದ್ದಾರೆ. ಎಂ.ಬಿ.ಮ್ಯಾಥ್ಯೂ ಅವರು ಒಂದು ಸರಕಾರ ಮಾಡಬೇಕಾದ ಕೆಲಸವನ್ನು ತಾವು ಮಾಡಿ ಸಮಾಜದ ಅಭಿನಂದನೆಗೆ ಪಾತ್ರರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button