Uncategorized

ಕಾರವಾರದಲ್ಲಿ ಗಲಾಟೆ; 27 ಜನರ ಬಂಧನ

ಕಾರವಾರ : ಕಂಪನಿ ಪ್ರವೇಶಿಸುವ ಮುನ್ನ ತಪಾಸಣೆ ನಡೆಸಿದ ಸ್ಥಳೀಯ ಸೆಕ್ಯೂರಿಟಿ ಗಾರ್ಡ್ ಹಾಗೂ ಹೊರ ರಾಜ್ಯದ ಕಾರ್ಮಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಮಾರಾಮಾರಿಯಲ್ಲಿ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 27 ಜನರನ್ನು ಬಂಧಿಸಿರುವ ಘಟನೆ ಕಾರವಾರ ತಾಲೂಕಿನ ಮುದಗಾ ಗ್ರಾಮದಲ್ಲಿ ನಡೆದಿದೆ.

ಮುದಗಾ ಬಳಿ ಕದಂಬ ನೌಕಾನೆಲೆಯ ವಸತಿ ಗೃಹ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಎನ್‌ಸಿಸಿ ಕಂಪನಿಯಲ್ಲಿ ಸ್ಥಳೀಯರು ಸೇರಿದಂತೆ ಒಡಿಶಾ ಹಾಗೂ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಆದರೆ ಕಂಪನಿ ಗೇಟ್ ಪ್ರವೇಶಿಸುವ ಮುನ್ನ ಸ್ಥಳೀಯ ಸೆಕ್ಯೂರಿಟಿ ಗಾರ್ಡ್​ಗಳು ಹೊರ ರಾಜ್ಯದ ಕಾರ್ಮಿಕರನ್ನು ತಪಾಸಣೆ ನಡೆಸುತ್ತಿದ್ದರು.ನಿತ್ಯ ಬರುವವರನ್ನು ತಪಾಸಣೆ ನಡೆಸುತ್ತಿರುವುದಕ್ಕೆ ಕೆಲವರು ತಗಾದೆ ತೆಗೆದಿದ್ದು,ಗಲಾಟೆಯಾದ ಬಳಿಕ ಅಲ್ಲೆ ಇದ್ದ ಸ್ಥಳೀಯರು ಬಿಡಿಸಿ ತಣ್ಣಗಾಗಿಸಿದ್ದಾರೆ.

ಕಂಪನಿ ಒಳಗೆ ತೆರಳಿದ ಒಡಿಶಾ ಮೂಲದ ಕಾರ್ಮಿಕರು ಗುಂಪು ಕಟ್ಟಿಕೊಂಡು ಬಂದು ಕರ್ತವ್ಯ ನಿರತ ಸಿಬ್ಬಂದಿ ಅಭಿಷೇಕ್ ಹರಿಕಂತ್ರ,ರಂಜನ್ ದುರ್ಗೇಕರ್ ಹಾಗೂ ಇನ್ನೋರ್ವ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು,ಮೂವರು ಗಂಭೀರ ಗಾಯಗೊಂಡಿದ್ದರು.

ಇದನ್ನು ಗಮನಿಸಿದ ಅಲ್ಲಿಯೇ ಕೆಲಸ ಮಾಡುತ್ತಿದ್ದ ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.ಬಳಿಕ ಕೆಲಸವನ್ನು ಸ್ಥಗಿತಗೊಳಿಸಿದ ಸಿಬ್ಬಂದಿ ಕಂಪನಿ ಗೇಟ್ ಎದುರು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳೀಯರೊಂದಿಗೆ ನೌಕಾನೆಲೆ,ಕಂಪನಿ ಅಧಿಕಾರಿ ಮತ್ತು ಪೊಲೀಸರು ಮಾತುಕತೆ ನಡೆಸಿದರು.ಈ ವೇಳೆ ಸ್ಥಳೀಯರು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಟಿವಿ ಪರಿಶೀಲಿಸಿದ ಬಳಿಕ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ ಸುಮಾರು 40 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕಂಪನಿಯಲ್ಲಿ ಹೊರ ರಾಜ್ಯದ ಕಾರ್ಮಿಕರಿಂದ ಪದೆ ಪದೇ ಇಂತಹ ಗಲಾಟೆಗಳು ನಡೆಯುತ್ತಿದ್ದು,ಈ ಬಗ್ಗೆ ಕಂಪನಿಯವರಿಗೆ ದೂರು ಸಹ ನೀಡಲಾಗಿದೆ.ಆದರೆ ಯಾರೊಬ್ಬರು ಕ್ರಮ ಕೈಗೊಳ್ಳುತ್ತಿಲ್ಲ.

ಪ್ರಕರಣವನ್ನು ಕೇವಲ ಬಂಧನ ಮಾಡಿ ಬಿಡದೆ ಹೊರ ರಾಜ್ಯದಿಂದ ಬಂದು ಸ್ಥಳೀಯರ ಮೇಲೆ ದಬ್ಬಾಳಿಕೆ ಮಾಡುವುದನ್ನು ತಡೆಯಬೇಕಿದೆ.ಇಲ್ಲವೇ ಎಲ್ಲರನ್ನೂ ಹೊರಗೆ ಹಾಕಿ ಸ್ಥಳೀಯರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಸೇರಿದಂತೆ ಕಾರ್ಮಿಕರು ಆಗ್ರಹಿಸಿದ್ದಾರೆ.

ಚರ್ಚೆ ಬಳಿಕ ಈ ಕುರಿತು ಕಾರ್ಮಿಕ ಅಧಿಕಾರಿಗಳು ಕಂಪನಿಯವರ ಸಮ್ಮುಖದಲ್ಲಿ ಅ. 25 ರಂದು ಸಭೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ತೇರ್ಮಾನ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸದ್ಯ ಕಾರವಾರ ಗ್ರಾಮೀಣ ಠಾಣೆ ಪೊಲೀಸರು 27 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Related Articles

Leave a Reply

Your email address will not be published.

Back to top button