Uncategorized

ಕಲುಷಿತ ನದಿಗಳ ಟಾಪ್ 17 ಪಟ್ಟಿಯಲ್ಲಿ ಅರ್ಕಾವತಿ ನದಿ: ಶುದ್ದೀಕರಣಕ್ಕೆ 20 ಕೋಟಿ ಪ್ರಾಜೆಕ್ಟ್ – ಗುತ್ತಿಗೆದಾರರೆ ನಾಪತ್ತೆ

ರಾಮನಗರ: ಒಂದು ಕಾಲದಲ್ಲಿ ಜಿಲ್ಲೆಯ ಜೀವನಾಡಿಯಾಗಿದ್ದ ಅರ್ಕಾವತಿ ನದಿ ಇದೀಗ ಗಬ್ಬೆದು ನಾರುತ್ತಿದೆ. ಅನೇಕ ವರ್ಷಗಳಿಂದಲೂ ನದಿ ಶುದ್ದೀಕರಣ ನೆಪದಲ್ಲಿ ಬಿಟ್ಟಿ ಮತಗಳನ್ನು ಪಡೆಯುತ್ತಿದ್ದ ಜನಪ್ರತಿನಿಗಳು ಕೇವಲ ಭರವಸೆಗಳನ್ನಷ್ಟೆ ನೀಡುತ್ತಿದ್ದಾರೆ.

ಆದರೀಗ, ನದಿ ಶುದ್ಧಿಕರಣಕ್ಕೆ 20 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ದಗೊಂಡಿದ್ದು, ಇನ್ನಾದರೂ ಜನರ ಜೀವನಾಡಿ ಶುದ್ಧಗೊಳ್ಳಲಿ ಎಂಬ ಆಶಯ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಅರ್ಕಾವತಿ ನದಿಯಲ್ಲಿ ಕಲುಷಿತ ನೀರು ಸೇರುವುದನ್ನು ತಪ್ಪಿಸಿ ನದಿ ಪಾತ್ರವನ್ನು ಮಲಿನ ಮುಕ್ತಗೊಳಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 20.50 ಕೋಟಿ ರೂ.ಗಳ ವೆಚ್ಚದ ಯೋಜನೆ ಸಿದ್ಧಪಡಿಸಿದೆ.

ಆದರೆ, ನಗರದಲ್ಲಿ ಉತ್ಪತ್ತಿಯಾಗುವ ಕಲುಷಿತ ನೀರು ಅರ್ಕಾವತಿ ನದಿ ಸೇರದಂತೆ ತಡೆಯುವುದು ಯೋಜನೆ ಮುಖ್ಯ ಉದ್ದೇಶ. ಆದರೆ, ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯಾವ ಗುತ್ತಿಗೆದಾರರು ಧೈರ್ಯ ಮಾಡಿ ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ.

17 ನದಿಗಳ ಪಟ್ಟಿಯಲ್ಲೊಂದು…!

ರಾಜ್ಯದಲ್ಲಿ ಅತ್ಯಂತ ಕಲುಷಿತ ಎಂದು ಗುರುತಿಸಲ್ಪಟ್ಟ 17 ನದಿಗಳ ಪಟ್ಟಿಯಲ್ಲಿ ಅರ್ಕಾವತಿ ನದಿಯೂ ಒಂದು. ಕಲುಷಿತ ನೀರು ನದಿಯಲ್ಲಿ ಹರಿಯದಂತೆ ರಾಷ್ಟ್ರೀಯ ಹಸಿರು ನ್ಯಾಯಾಶೀಕರಣ ನೀಡಿದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಯಾರಿಸಿದೆ. ಕೇಂದ್ರ ಸರಕಾರದಿಂದ 20.50 ಕೋಟಿ ರೂ.ಗೆ ಅನುಮೋದನೆ ದೊರಕಿದ್ದು, ಮೀಸಲಿಡಲಾಗಿದೆ.

ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಐದು ವರ್ಷ ನಿರ್ವಹಣೆಯಂತಹ ಕಠಿಣ ನಿಬಂಧನೆಗಳಿರುವ ಕಾರಣ ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದು, ಈಗಾಗಲೇ ಆರು ನಗರಗಳು ಹಾಗೂ ಎರಡು ನಗರಗಳನ್ನು ಸೇರಿಸಿ ಕರೆದಿದ್ದ ಪ್ರತ್ಯೇಕ ಟೆಂಡರ್ ಗಳು ರದ್ದುಗೊಂಡಿವೆ. ಈಗ ರಾಮನಗರಕ್ಕೆ ಪ್ರತ್ಯೇಕವಾಗಿ ಕರೆದಿರುವ ಟೆಂಡರ್ ನಲ್ಲಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಯೋಜನೆಗೆ ಚಾಲನೆ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

ಏನಿದು ಯೋಜನೆ..

ಈ ಯೋಜನೆಯಲ್ಲಿ ನಗರದಲ್ಲಿನ ನಾಲ್ಕು ವೆಟ್ ವೆಲ್‌ಗಳು ಮತ್ತು ಎಸ್‌ಟಿಪಿ (ಸಿವೇಜ್ ಟ್ರೀಟ್ ಮೆಂಟ್ ಪ್ಲಾಂಟ್ )ಗೆ ಹೊಸ ಮೋಟಾರ್ ಪಂಪ್ ಸೆಟ್ ಅಳವಡಿಕೆ ಹಾಗೂ ಮ್ಯಾನ್ ಹೋಲ್, ಯುಜಿಡಿ ಲೈನ್ ಕಡಿತಗೊಂಡಿದ್ದರೆ ದುರಸ್ಥಿ ಪಡಿಸಿ ನಿರ್ವಹಣೆ ಮಾಡಲಾಗುತ್ತದೆ.

ನದಿಯ ಪರಿಸ್ಥಿತಿ ಏನಾಗಿದೆ ? :

ನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಸುಮಾರು 5 ಕಿ.ಮೀ. ಉದ್ದದ ನದಿ ಪಾತ್ರ ಗಬ್ಬೆದ್ದು ಹೋಗಿದೆ. ಒಳಚರಂಡಿ ನೀರು, ಫಿಲೇಚರ್‌ಗಳಲ್ಲಿ ಬಳಕೆಯಾದ ನೀರು ನದಿ ಪಾತ್ರ ಸೇರಿ ನದಿಯನ್ನು ಕಲುಷಿತವನ್ನಾಗಿಸಿದೆ. ನಗರದ ಶೇ 60 ರಷ್ಟು ಭಾಗದ ಕೊಳಚೆ ನೀರು ಅರ್ಕಾವತಿ ನದಿ ಪಾತ್ರಕ್ಕೆ ಹರಿಯ ಬಿಡಲಾಗುತ್ತಿದೆ.

ನಗರದ ಶಾಸಕರ ಕಚೇರಿ ಪಕ್ಕದಲ್ಲಿ, ಬೆಂಗಳೂರು-ಮೆಸೂರು ಹೆದ್ದಾರಿಯ ಮಗ್ಗುಲಲ್ಲಿಯೇ ಇರುವ ರಾಜಕಾಲುವೆಯಿಂದ ಐಜೂರು ಬಡಾವಣೆ ಭಾಗದ ಸಂಪೂರ್ಣ ಒಳಚರಂಡಿ ನೀರು ನದಿಗೆ ಹರಿಯುತ್ತಿದೆ. ದೊಡ್ಡ ಪೈಪ್ ಮೂಲಕ ರಭಸದಿಂದ ಹರಿದು ಬರುವ ಕೊಳಕು ನೀರನ್ನು ರಾಜಕಾಲುವೆಗೆ ಸಂಪರ್ಕ ಕೊಡಲಾಗಿದೆ. ದಿನದ 24 ಗಂಟೆಯೂ ಬೃಹತ್ ಪ್ರಮಾಣದಲ್ಲಿ ಕಲುಷಿತ ನೀರು ಹರಿದು ಸದ್ದಿಲ್ಲದೆ ಅರ್ಕಾವತಿ ನದಿಯ ಒಡಲು ಸೇರುತ್ತಿದೆ.

ಜಿಲ್ಲಾ ಕೇಂದ್ರದಲ್ಲಿ 31 ವಾರ್ಡುಗಳಿದ್ದು, ಬಹುತೇಕ ಕಡೆ ಒಳಚರಂಡಿ (ಯುಜಿಡಿ ಸಂಪರ್ಕ) ವ್ಯವಸ್ಥೆ ಇದೆ. ಆದರೆ, ಅದು ಅವೈಜ್ಞಾನಿಕವಾಗಿದೆ. ಚರಂಡಿ ನೀರನ್ನು ಹಲವೆಡೆ ನೇರವಾಗಿ ನದಿ ಪಾತ್ರಕ್ಕೆ ಹರಿಯ ಬಿಡಲಾಗಿದೆ. ನಗರದ ಹೊರವಲಯದಲ್ಲಿರುವ ಯುಜಿಡಿ ನೀರು ಶುದ್ಧೀಕರಣ ಘಟಕಕ್ಕೆ ಒಳಚರಂಡಿ ನೀರು ತಲುಪುತ್ತಿಲ್ಲ. 5 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಜಾಗಗಳಲ್ಲಿ ಒಳಚರಂಡಿ ನೀರು ನದಿ ಸೇರುತ್ತಿದೆ.

ಸಂಗಮದಲ್ಲಿ ಕಾವೇರಿ ನದಿ ಸೇರುವ ತನಕ ರಾಮನಗರ ನಗರ ಸೇರಿದಂತೆ ನದಿ ಪಾತ್ರದ ಎರಡೂ ಬದಿಯ ಗ್ರಾಮಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆಲ್ಲ ಕಲ್ಮಷ ನೀರು ನದಿಯ ಒಡಲಿಗೆ ಸೇರುತ್ತಿದೆ. ಇದರಿಂದಾಗಿ ಅರ್ಕಾವತಿ ನದಿ ಅಕ್ಷರಶಃ ಮಲೀನವಾಗಿದೆ. ಬೆಂಗಳೂರಿನಲ್ಲಿ ವೃಷಭಾವತಿ ನದಿಗಾದ ಗತಿಯೇ ರಾಮನಗರದಲ್ಲಿ ಅರ್ಕಾವತಿ ನದಿಗೂ ಆಗಿದೆ. ಈ ರೀತಿಯ ಆಕ್ರಮಣದಿಂದ ಅರ್ಕಾವತಿ ನದಿಯು ತನ್ನ ಮೂಲ ಸ್ವರೂಪವನ್ನೆ ಕಳೆದುಕೊಂಡಿದೆ.

ನಗರ ವ್ಯಾಪ್ತಿಯಲ್ಲಿ ಕಲುಷಿತ ನೀರು ಅರ್ಕಾವತಿ ನದಿ ಸೇರುವುದನ್ನು ತಪ್ಪಿಸಲು 20.50 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದೆ. ಈಗಾಗಲೇ ಎರಡು ಬಾರಿ ಕರೆದಿದ್ದ ಟೆಂಡರ್ ಗಳಲ್ಲಿ ಗುತ್ತಿಗೆದಾರರು ಭಾಗಿಯಾಗಲಿಲ್ಲ. ಈಗ ಮೂರನೇ ಬಾರಿಗೆ ಕರೆದಿರುವ ಟೆಂಡರ್ ನಲ್ಲಿ ಇಬ್ಬರು ಗುತ್ತಿಗೆದಾರರು ಪಾಲ್ಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

  • ಗಂಗಾಧರ್ , ಎಇಇ,
    ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

Related Articles

Leave a Reply

Your email address will not be published. Required fields are marked *

Back to top button