ಮೈಸೂರಿನಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ
ಮೈಸೂರು : ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಮಗಾದ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಗ್ರಾಮದ ಮುಖಂಡರು ಗ್ರಾಮ ಪಂಚಾಯ್ತಿ ಸದಸ್ಯೆಯ ಕುಟುಂಬ ಸೇರಿ 12 ಕುಟುಂಬಗಳಿಗೆ ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದಾರೆ.
ಬಹಿಷ್ಕಾರಕ್ಕೊಳಗಾಗಿರುವ ಕುಟುಂಬ ಸದಸ್ಯರನ್ನು ಯಾರು ಮಾತನಾಡಿಸುವಂತಿಲ್ಲ. ಶುಭ ಸಮಾರಂಭಗಳಿಗೆ ಆಹ್ವಾನಿಸುವಂತಿಲ್ಲ, ನೆರವು ನೀಡುವಂತಿಲ್ಲ. ನ್ಯಾಯ ಕೇಳಿದ್ದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ 25ಸಾವಿರ ರೂ. ದಂಡ ಹಾಕಿದ್ದಾರೆ.
ಸಾಮಾಜಿಕವಾಗಿ ಬಹಿಷ್ಕಾರಕ್ಕೊಳಗಾದ ಕುಟುಂಬವೊಂದು ವಿವಾಹವೊಂದರಲ್ಲಿ ಭಾಗಿಯಾಗಿದ್ದಕ್ಕಾಗಿ 25 ಸಾವಿರ ರೂ. ದಂಡ ಹಾಕಲಾಗಿದೆ. ಈ ಕುರಿತು ಬಹಿಷ್ಕಾರಕ್ಕೊಳಗಾಗಿರುವ ರಾಘವೇಂದ್ರ ಸೇರಿದಂತೆ ಇತರರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಠಾಣೆಗೆ ದೂರು ನೀಡಿದ್ದೇವೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇಷ್ಟಾದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ನಮಗೆ ನ್ಯಾಯಕೊಡಿ, ನಮ್ಮನ್ನ ಬಹಿಷ್ಕಾರದಿಂದ ಮುಕ್ತಗೊಳಿಸಿ ಎಂಬುದು ಅವರ ಅಳಲಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಈ ಅನಿಷ್ಠ ಪದ್ದತಿ ಜಾರಿಯಲ್ಲಿರುವುದು ನಿಜಕ್ಕೂ ದುರಂತ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಬಹಿಷ್ಕಾರ ಹಾಕಿದವರಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ.