ಇತರ ಕ್ರೀಡೆ

Shyamala shetty: ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ಗೆ ಕರ್ನಾಟಕದ ಶ್ಯಾಮಲಾ ಶೆಟ್ಟಿ

ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ಗೆ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಉಪಾಧ್ಯಕ್ಷರಾಗುವುದು ಸಾಮಾನ್ಯ ಸುದ್ದಿ. ಆದರೆ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್, ಏಷ್ಯಾದ ಶ್ರೇಷ್ಠ ಕೋಚ್ ಶ್ಯಾಮಲಾ ಶೆಟ್ಟಿಯವರು ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ನ ಪದಾಧಿಕಾರಿಯಾಗಿರುವುದು ವಿಶೇಷವೆನಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದ ಬೇಲಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿ, ವೇಟ್ ಲೀಫ್ಟಿಂಗ್ ನಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, 31 ಬಾರಿ ರಾಷ್ಟ್ರೀಯ ದಾಖಲೆ ಬರೆದು, ಬದುಕಿನ 36 ವರ್ಷಗಳನ್ನು ಕ್ರೀಡಾ ಕ್ಷೇತ್ರಕ್ಕಾಗಿಯೇ ಮುಡುಪಾಗಿಟ್ಟು, ಗುರುವಾಗಿ ನೂರಾರು ಪ್ರತಿಭೆಗಳಿಗೆ ಬದುಕು ನೀಡಿದ, ಉಕ್ಕಿನ ಮಹಿಳೆ ಶ್ಯಾಮಲಾ ಶೆಟ್ಟಿಯವರು ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಏಕೆಂದರೆ ಭಾರತದ ಕ್ರೀಡಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ವೇಟ್ ಲಿಫ್ಟರ್ ಗೆ ಜಂಟಿಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಇದು ಕನ್ನಡಿಗರ ಹೆಮ್ಮೆ ಕೂಡ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಿಸ್ಕಸ್ ಎಸೆತದಲ್ಲಿ ಪದಕ ಗೆದ್ದು, ನಂತರ ವೇಟ್ ಲಿಫ್ಟಿಂಗ್ ನಲ್ಲಿ 31 ಬಾರಿ ನೂತನ ದಾಖಲೆಗಳನ್ನು ಬರೆದು, ಹಲವು ಬಾರಿ ದೇಶದ ಶ್ರೇಷ್ಠ ಭಾರ ಎತ್ತುವ ಮಹಿಳೆ ಎಂದೆನಿಸಿ, ಆರು ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದು, ನ್ಯಾಷನಲ್ ಗೇಮ್ಸ್ ನಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದು, ವಿಶ್ವ ಚಾಂಪಿಯನ್ಷಿನ್ ನಲ್ಲಿ ಬೆಳ್ಳಿ ಪದ, ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ಬೆಳ್ಳಿ ಪದಕ, 25 ವರ್ಷಗಳ ಕಾಲ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕೋಚ್, ಹಲವಾರು ಅಂತಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರೆಫರಿ ಹಾಗೂ ವಿವಿಧ ತಾಂತ್ರಿಕ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ……ಇಂಥ ಸಾಧಕಿಯನ್ನು ದೇಶದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯು ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಅವರ ಸಾಧನೆಗೆ ನೀಡಿದ ಗೌರವ.

ಏಷ್ಯಾದ ಬೆಸ್ಟ್ ವೇಟ್ ಲಿಫ್ಟಿಂಗ್ ಕೋಚ್ ಎಂದು ಏಷ್ಯನ್ ವೇಟ್ ಲಿಫ್ಟಿಂಗ್ ಫೆಡರೇಷನ್ ನ ಗೌರವಕ್ಕೆ ಪಾತ್ರರಾಗಿರುವ ಶ್ಯಾಮಲಾ ಶೆಟ್ಟಿ ಅವರು ತರಬೇತಿ ನೀಡಿದ ವೇಟ್ ಲಿಫ್ಟಿಂಗ್ ಪಟುಗಳು ವಿವಿಧ ವಿಭಾಗಗಳಲ್ಲಿ ನೂರಾರು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾ ಬಾಯಿ ಚಾನು ಅವರಿಗೂ ತರಬೇತಿ ನೀಡಿ, ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಅವರನ್ನು ಸಜ್ಜುಗೊಳಿಸಿದ ಕೀರ್ತಿ ಶ್ಯಾಮಲಾ ಶೆಟ್ಟಿ ಅವರಿಗೆ ಸಲ್ಲುತ್ತದೆ.

ಮೂರು ದಶಕಗಳ ಕಾಲ ವೇಟ್ ಲಿಫ್ಟಿಂಗ್ ನಲ್ಲಿ ಅಪಾರ ಸಾಧನೆಯನ್ನು ಮಾಡಿರುವುದನ್ನು ಗಮನಿಸಿರುವ ಕರ್ನಾಟಕ ಸರಕಾರ ಕ್ರೀಡಾ ಇಲಾಖೆ, 2011ರಲ್ಲಿ ಜೀವನಶ್ರೇಷ್ಠ ಸಾಧನೆ ನೀಡಿ ಗೌರವಿಸಿದೆ. ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕರ್ನಾಟಕ ವೇಟ್ ಲಿಫ್ಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹಾಗೂ ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿಯಾಗಿರುವ ಎಚ್.ಎಸ್. ಆನಂದೇ ಗೌಡ ಕರ್ನಾಟಕ ಸರಕಾರವನ್ನು ವಿನಂತಿಸಿದ್ದಾರೆ.

ದೇಶಕ್ಕೆ ಕೀರ್ತಿ ತಂದ ಅಕ್ಕತಂಗಿಯರು

ಶ್ಯಾಮಲ ಶೆಟ್ಟಿಯವರು ವೇಟ್ ಲಿಫ್ಟಿಂಗ್ ನಲ್ಲಿ ಯಾವ ರೀತಿಯ ಸಾಧನೆ ಮಡಿದ್ದಾರೊ ಅದೇ ರೀತಿಯಲ್ಲಿ ಅಕ್ಕ ಸರಳಾ ಶೆಟ್ಟಿ ಪವರ್ ಲಿಫ್ಟಿಂಗ್ ನಲ್ಲಿ ದೇಶಕ್ಕೆ ಕೀರ್ತಿ ತಂದದಿದ್ದಾರೆ, ಹಿರಿಯ ಸಹೋದರಿ ವಿಜಯಲಕ್ಷ್ಮೀ ಕೂಡ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್. ವಿಜಯಲಕ್ಷ್ಮೀ ಅಖಲಿ ಭಾರತ ವಿವಿ ಮಟ್ಟದ ಕ್ರೀಡಾಕೂಟದಲ್ಲಿ ಶಾಟ್ ಪುಟ್ ನಲ್ಲಿ ಚಿನ್ನಗೆದ್ದು ಸಾಧನೆ ಮಾಡಿದ್ದರು, ನಂತರ ವೇಟ್ ಲಿಫ್ಟಿಂಗ್ ನಲ್ಲಿ ತೊಡಗಿಕೊಂಡರು.

Related Articles

Leave a Reply

Your email address will not be published.

Back to top button