ಇತರ ಕ್ರೀಡೆ

Kabaddi Player Vinod Naik: ಗುಡಿಸಲಿನಲ್ಲಿ ಅರಳಿದ ಕಬಡ್ಡಿ ಪ್ರತಿಭೆ ವಿನೋದ ನಾಯ್ಕ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಗ್ರಾಮೀಣ ಕ್ರೀಡೆ ಎಂದು ಕರೆಯಿಸಿಕೊಳ್ಳುವ ಕಬಡ್ಡಿ ಆಟದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ತಂಡದಲ್ಲಿ ಪ್ರತಿನಿಧಿಸಿದ ಅನೇಕ ಯುವಕರು ಇಲ್ಲಿದ್ದಾರೆ. ಅಂತೆಯೇ ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊನ್ನೆಮಡಿಯ ವಿನೋದ ಲಚ್ಮಯ್ಯ ನಾಯ್ಕ ಎಂಬ ಬಡ ಮನೆತನದ ಯುವಕನೊಬ್ಬ ರಾಜ್ಯ ಮಟ್ಟದ ಬೆಂಗಳೂರು ಬುಲ್ಸ್‌ ಕಬಡ್ಡಿ ತಂಡಕ್ಕೆ ಆಯ್ಕೆ ಆಗುವುದರ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಈ ಮೂಲಕ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಎಂಬುದನ್ನು ವಿನೋದ ನಾಯ್ಕ ಸಾಬೀತು ಮಾಡಿದ್ದಾರೆ.

ಸದ್ಯ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಬಿ.ಎಸ್.ಡಬ್ಲ್ಯೂ ಎರಡನೇ ವರ್ಷ ಓದುತ್ತಿರುವ ವಿನೋದ ನಾಯ್ಕ ಕುಟುಂಬ ಬಡತನದ ಬೇಗೆಯಲ್ಲಿ ಬೇಯುತ್ತಿದೆ. ಒಂದು ದಿನ ಕಳೆದರೆ ಸದ್ಯ ಬದುಕಿದೆವು ಎನ್ನುವಂತಹ ಪರಿಸ್ಥಿತಿಯಲ್ಲಿ ಈ ಕುಟುಂಬ ದಿನ ದೂಡುತ್ತಿದೆ. ಕಿತ್ತು ತಿನ್ನುವ ಬಡತನವಿದ್ದರೂ ತಾನು ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಈ ಯುವಕನಲ್ಲಿ ಸದಾ ಪುಟಿದೇಳುತ್ತಿತ್ತು. ಇದಕ್ಕೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದ್ದೆ ಆತನಲ್ಲಿರುವ ಕಬಡ್ಡಿ ಪ್ರತಿಭೆ.

ಇಂದು ಕಿತ್ತು ತಿನ್ನುತ್ತಿರುವ ಬಡತನದಲ್ಲೂ ಕೂಡ ತನ್ನಲ್ಲಿರುವ ಕಬಡ್ಡಿ ಎಂಬ ದೈತ್ಯ ಪ್ರತಿಭೆಯ ಕಾರಣ ರಾಜ್ಯ ಮಟ್ಟದ ತಂಡವಾದ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಗ್ರಾಮೀಣ ಪ್ರತಿಭೆ ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊನ್ನೆಮಡಿಯ ಲಚ್ಮಯ್ಯ ನಾಯ್ಕ ಹಾಗೂ ನಾಗವೇಣಿ ನಾಯ್ಕ ಎಂಬ ದಂಪತಿಗಳ ಒಬ್ಬನೇ ಪುತ್ರನಾಗಿದ್ದು, ತಂದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಗುಡಿಸಲಿನಲ್ಲಿಯೇ ಇವರ ವಾಸ್ತವ್ಯ. ಮನೆಯ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಷ್ಟೋ ಬಾರಿ ಸಂಕಷ್ಟದ ಪರಿಸ್ಥಿತಿಯನ್ನು ಬಾಲ್ಯದಿಂದಲೇ ಎದುರಿಸಿಕೊಂಡು ಬಂದಿರುವ ಯುವಕ ವಿನೋದ ನಾಯ್ಕ.

ವಿನೋದ ನಾಯ್ಕ ಕುಟುಂಬ

ಈ ಕಾರಣದಿಂದಲೇ ಈತನಲ್ಲಿ ಬೆಳೆಯಬೇಕೆಂಬ ಹಂಬಲ ಹೆಚ್ಚಾಯಿತು. ಆಗಲೇ ಈತನ ಬೆಂಬಲಕ್ಕೆ ನಿಂತವರು ಭಟ್ಕಳದ ಕಟ್ಟೆವೀರ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಧರ ನಾಯ್ಕ.ಇವರು ಈತನಲ್ಲಿರುವ ಕಬಡ್ಡಿ ಪ್ರತಿಭೆಯನ್ನು ಗುರುತಿಸಿ ಈತನಿಗೆ ವಿವಿಧ ತರಬೇತುದಾರರಲ್ಲಿ ತರಬೇತಿಯನ್ನು ಕೊಡಿಸಿ ರಾಜ್ಯಮಟ್ಟದ ತಂಡವಾದ ಬೆಂಗಳೂರು ಬುಲ್ಸ್ ಪ್ರತಿಷ್ಠಿತ ಕಬಡ್ಡಿ ತಂಡಕ್ಕೆ ಆಯ್ಕೆ ಆಗಲು ಮಹತ್ವಪೂರ್ಣವಾದ ಪಾತ್ರವನ್ನು ವಹಿಸಿದ್ದಾರೆ.

ಕಬಡ್ಡಿ ತಂಡಕ್ಕೆ ಆಯ್ಕೆಯಾದ ವಿನೋದ ನಾಯ್ಕ ಮಾತನಾಡಿ, ನಾನು ರಾಜ್ಯ ಮಟ್ಟದ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿರುವುದು ತುಂಬಾ ಸಂತಸವನ್ನು ತಂದಿದೆ. ನನ್ನ ಆಯ್ಕೆಯಲ್ಲಿ ಪ್ರಮುಖವಾಗಿ ಮೂಡಬಿದರೆಯ ಆಳ್ವಾಸ್‌ ಕಾಲೇಜು ಪ್ರತಿಷ್ಠಾನ, ಕೋಚ್ ಗಳಾದ ಸತೀಶ್‌, ಕಟ್ಟೆವೀರ ಸ್ಪೋರ್ಟ್ಸ್ ಕ್ಲಬ್ಬಿನ ಆಡಳಿತ ಮಂಡಳಿ ಹಾಗೂ ಅದರ ಅಧ್ಯಕ್ಷ ಶ್ರೀಧರ್‌ ನಾಯ್ಕ ಅವರು ಕಾರಣರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.

ಈ ಸಂದರ್ಭದಲ್ಲಿ ವಿನೋದ ನಾಯ್ಕ ತಂದೆ ಲಚ್ಮಯ್ಯ ನಾಯ್ಕ ಮಾತನಾಡಿ,ನನ್ನ ಮಗ ವಿನೋದ ರಾಜ್ಯ ತಂಡಕ್ಕೆ ಆಯ್ಕೆಯಾಗುವುದರ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ.ಮುಂದಿನ ದಿನಗಳಲ್ಲಿ ನನ್ನ ಮಗ ರಾಷ್ಟ್ರ ಮಟ್ಟದ ತಂಡಕ್ಕೆ ಆಯ್ಕೆಯಾಗುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

ಒಟ್ಟಾರೆ ತಾಲೂಕಿನ ಬಡ ಗ್ರಾಮಿಣ ಪ್ರತಿಭೆಯಾದ ವಿನೋದ್‌ ನಾಯ್ಕ ಕಡು ಬಡತನದಲ್ಲೂ ಕೂಡ ತನ್ನ ಅವಿರತ ಪ್ರಯತ್ನದ ಫಲವಾಗಿ ಇಂದು ರಾಜ್ಯಮಟ್ಟದ ಕಬಡ್ಡಿ ತಂಡ ಬೆಂಗಳೂರು ಬುಲ್ಸ್ ಗೆ ಆಯ್ಕೆಯಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

Related Articles

Leave a Reply

Your email address will not be published.

Back to top button