Latest

ಅನೈತಿಕ ಪೊಲೀಸ್ ಗಿರಿ ಬೆಂಬಲಿಸಿದ ಸಿಎಂ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಸಂವಿಧಾನಕ್ಕೆ ಬದ್ಧರಾಗಿ ರಾಜ್ಯದ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ನೋಡುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿಯನ್ನು ಬೆಂಬಲಿಸಿ ಒಂದು ವರ್ಗದ ಜನರನ್ನು ಓಲೈಕೆ ಮಾಡುತ್ತಿರುವ ಧೋರಣೆ ವಿರುದ್ಧ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಮುಂಭಾಗ ಪ್ರತಿಭಟಿಸಿದರು.

ಕೆಪಿವೈಸಿಸಿ ಅಧ್ಯಕ್ಷ ರಕ್ಞಾ ರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೋಮುವಾದಿ ಸಂಘಟನೆಗಳಿಂದ ನಡೆಯುತ್ತಿರುವ ಅನೈತಿಕ ಪೋಲಿಸ್ ಗಿರಿಯನ್ನು ಬೆಂಬಲಿಸಿದ ಬಸವರಾಜ ಬೊಮ್ಮಾಯಿ ಅವರ ಧೋರಣೆ ಖಂಡಿಸಿ ಮುಖ್ಯಮಂತ್ರಿ ಅವರ ಪ್ರತಿಕೃತಿ ದಹಿಸಿ ಯುವ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಗೃಹ ಸಚಿವರಾಗಿದ್ದ ಬೊಮ್ಮಾಯಿ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲರನ್ನು ರಕ್ಷಣೆ ಮಾಡುವುದು ಅವರ ಜವಾಬ್ದಾರಿ. ಆದರೆ ಸಂಘ ಪರಿವಾರದವರು ನಡೆಸುವ ಕಾನೂನು ಬಾಹಿರ, ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ನಡಾವಳಿಕೆಯನ್ನು ಬಹಿರಂಗವಾಗಿ ಬೆಂಬಲಿಸಿ ತಾವು ಕೋಮುವಾದಿಗಳ ಪರ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದರು.

ರಾಜ್ಯದಲ್ಲಿ ಬಿಜೆಪಿ ಗೂಂಡಾರಾಜ್ಯ ಸೃಷ್ಟಿಸುತ್ತಿದ್ದು ಸಮಾಜದ ಶಾಂತಿ ಮತ್ತು ಸಹಬಾಳ್ವೆಗೆ ಧಕ್ಕೆ ತರುತ್ತಿದೆ. ಕೋಮುವಾದಿ ಸಂಘಟನೆಗಳಿಂದ ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು, ಮಹಿಳೆಯರು, ಯುವ ಜನರ ಮೇಲೆ ನಡೆಯುತ್ತಿರುವ ಅನೈತಿಕ ಪೋಲಿಸ್ ಗಿರಿಯನ್ನು ಬಸವರಾಜ ಬೊಮ್ಮಾಯಿ , ಮಂಗಳೂರಿನಲ್ಲಿ ಸಮರ್ಥಿಸಿದ ಬೆನ್ನೆಲ್ಲಾ ಇದರಿಂದ ಹುರುಪುಗೊಂಡ ಹಿಂದೂ ಮಹಾಸಭಾ, ಆಯುಧಪೂಜೆ ನೆಪವಿಟ್ಟುಕೊಂಡು ಶಸ್ತ್ರಾಸ್ತ್ರಗಳನ್ನು ಹಂಚಿದೆ. ಈ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತಿರುವುದೇ ಇದಕ್ಕೆಲ್ಲ ಮುಖ್ಯ ಕಾರಣ. ಆದ್ದರಿಂದ ಸಮಾಜಘಾತುಕ ಸಂಘಟನೆಗಳ ಕೃತ್ಯವನ್ನು ಸಮರ್ಥಿಸಿದ ಮೊಮ್ಮಾಯಿ ಅವರ ಧೋರಣೆ ಖಂಡನೀಯ ಎಂದು ಯುವ ಕಾರ್ಯಕರ್ತರು ಘೋಷಣೆ ಕೂಗಿದರು.

Related Articles

Leave a Reply

Your email address will not be published.

Back to top button