ಕೌಟುಂಬಿಕ ಕಲಹ ಹಿನ್ನಲೆ ಮಗಳೊಂದಿಗೆ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಗೃಹಣಿ
ಕಲಬುರಗಿ: ನನಗೆ ನನ್ನ ಮಗಳಿಗೆ ಮೋಸ ಮಾಡಿದ್ದಿಯಾ ಅಂತ ಗಂಡನ ಹೆಸರು ಬರೆದು ವಾಟ್ಸಪ್ ಸ್ಟೇಟಸ್ ಇಟ್ಟು ಮಗುವಿನೊಂದಿಗೆ ಗೃಹಣಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಹಬಾದ್ ಹೊರವಲಯದ ಕಾಗಿಣಾ ನದಿಯಲ್ಲಿ ನಡೆದಿದೆ.
ಶಹಬಾದ್ ಪಟ್ಟಣದ ನಿವಾಸಿ ಶಾಂತಾಕುಮಾರಿ (32) ಹಾಗೂ ಆರು ತಿಂಗಳ ಆಕೆಯ ಮಗು ಗಂಗಾ ಮೃತ ದುರ್ದೈವಿಗಳು. ನೀನು ನನಗೆ ಚೀಟ್ ಮಾಡಿದ್ದೀಯಾ, ನನ್ನ, ನನ್ನ ಮಗಳ ಲೈಫ್ ಹಾಳು ಮಾಡಿದ್ದಿ ಅಂತ ಸಿದ್ದಲಿಂಗ ಹೆಸರು ಬರೆದು, ಸಾಯುವ ಮುನ್ನ ಶಾಂತಕುಮಾರಿ ತನ್ನ ವಾಟ್ಸಪ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾಳೆ.
ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಶಾಂತಾಕುಮಾರಿಯನ್ನು ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಗ್ರಾಮದ ಸಿದ್ದಲಿಂಗ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಬಳಿಕ ಗಂಡ ಹೆಂಡತಿಯ ಮಧ್ಯೆ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ತವರು ಮನೆಗೆ ಬಂದಿದ್ದ ಶಾಂತಕುಮಾರಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸ್ಥಳಕ್ಕೆ ಶಹಬಾದ್ ಠಾಣೆ ಪೋಲೀಸರು ಭೇಟಿನೀಡಿ ಪರಿಶೀಲನೆ ಮಾಡಿದ್ದಾರೆ. ಎನ್ ಡಿ ಆರ್ ಆಫ್ ತಂಡ, ಅಗ್ನಿ ಶಾಮಕ ದಳ, ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಶವದ ಶೋಧ ಕಾರ್ಯ ಮಾಡುತ್ತಿದ್ದು, ಈಗಾಗಲೇ ತಾಯಿ ಶಾಂತಕುಮಾರಿ ಶವ ಪತ್ತೆಯಾಗಿದೆ. ಮಗುವಿನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.