ಮತ್ತೆ ಕೋವಿಡ್ ಹೊಸ ಅಲೆ ಭೀತಿ; ಹಲವು ದೇಶಗಳಿಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ಡೆನ್ಮಾರ್ಕ್: ಯುರೋಪ್ ಮತ್ತು ಕೇಂದ್ರ ಏಷ್ಯಾದ 50ಕ್ಕೂ ಹೆಚ್ಚು ದೇಶಗಳಲ್ಲಿ ಕೋವಿಡ್ ಹೊಸ ಅಲೆ ವ್ಯಾಪಿಸುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೆಲ ದೇಶಗಳು ಡೆಲ್ಟಾ ಪ್ರಬೇಧದ ವಿರುದ್ಧ ಹೋರಾಟ ನಡೆಸುತ್ತಿವೆ. ದಾಖಲೆಯ ಮಟ್ಟ ತಲುಪಲು ಆರಂಭಿಸಿವೆ. ಯುರೋಪ್ ಈಗ ಒಂದು ವರ್ಷದ ಹಿಂದೆ ಇದ್ದ ಪರಿಸ್ಥಿತಿಗೆ ಮತ್ತೆ ತಲುಪಿದ್ದು, ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಮುಖ್ಯಸ್ಥ ಹನ್ಸ್ ಕ್ಲೂಗ್ ತಿಳಿಸಿದ್ದಾರೆ.
ಯುರೋಪ್ ರಾಷ್ಟ್ರದಲ್ಲಿ ಕಳೆದ ಏಳು ದಿನಗಳಲ್ಲಿ 18ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಸಂಭಾವ್ಯ ಅಲೆಯನ್ನು ತಡೆಯಲು ಕಠಿಣವಾದ ನಿಯಮಗಳನ್ನು ಕಾರ್ಯಗತಗೊಳಿಸಬೇಕಾಗಿದೆ. ಕೋವಿಡ್ ನಿರ್ವಹಣೆಗೆ ಆರೋಗ್ಯ ಕ್ಷೇತ್ರದಲ್ಲಿ ಈಗ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು, ತಜ್ಞರ ಶ್ರಮ ಹಾಗೂ ಸಾಧನಗಳ ಬಳಕೆಯ ಬಗ್ಗೆ ತಿಳಿದಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಲಸಿಕಾ ಪ್ರಮಾಣ ಏರಿಕೆಯಿರುವ ದೇಶಗಳಲ್ಲಿ ನಿರ್ವಹಣಾ ನಿಯಮ ಸಡಿಲಿಕೆ ಮಾಡಲಾಗಿದೆ. ಆದರೆ ಹೊಸ ಅಲೆ ನಿಯಂತ್ರಣಕ್ಕೆ ಎಲ್ಲಾ ರಾಷ್ಟ್ರಗಳೂ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.