Latest

ಭಗತ್ ಸಿಂಗ್ ಪುಸ್ತಕ ಓದಿದರೆ ದೇಶದ್ರೋಹವಾಗುತ್ತದೆಯೇ ಎಂದು ವಿಠ್ಠಲ ಮಲೆಕುಡಿಯ ಪ್ರಶ್ನೆ

ಮಂಗಳೂರು: ಬಲವಂತವಾಗಿ ಒಕ್ಕಲೆಬ್ಬಿಸಲು ಬಂದವರು ಬಲವಾದ ಕಾರಣಗಳಿಲ್ಲದೆ ಜನರ ಮೇಲೆ ದೌರ್ಜನ್ಯ ಎಸಗುತ್ತಾ ಬಂದಿದ್ದರು ಎಂದು ನಕ್ಸಲ್ ನಂಟಿನ ನಿರ್ದೋಷಿ ಕುತ್ಲೂರು ಗ್ರಾಮದ ವಿಠ್ಠಲ ಮಲೆಕುಡಿಯ ಆರೊಪಿಸಿದ್ದಾರೆ.

ಭಗತ್ ಸಿಂಗ್ ಪುಸ್ತಕ ಓದುವುದು ತಪ್ಪೇನಲ್ಲ. ದೇಶದ್ರೋಹವಾಗುವುದಿಲ್ಲ ಓದಬಹುದು. ವಿಚಾರಣೆ ವೇಳೆ ತನಿಖಾಧಿಕಾರಿಗಳು ಕೂಡ ಭಗತ್ ಸಿಂಗ್ ಪುಸ್ತಕ ಓದುವುದು ಅಥವಾ ಇಟ್ಟುಕೊಳ್ಳುವುದು ತಪ್ಪಲ್ಲ ಎಂದಿದ್ದರು. ಆದರೆ ಇಂತಹ ಕಾರಣಗಳಿಂದಲೇ ನನ್ನಂತಹವರ ವಿರುದ್ಧ ಪ್ರಹಾರ ನಡೆಸುವುದು ಎಷ್ಟರಮಟ್ಟಿಗೆ ನ್ಯಾಯ ಎಂದು ವಿಠಲ ಮಲೆಕುಡಿಯ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದಾರೆ.

ಕುತ್ಲೂರು ಗ್ರಾಮವು ಪೊಲೀಸ್ ಪೀಡಿತ ಪ್ರದೇಶವಾಗಿತ್ತು. ನಮ್ಮನ್ನು ಒಕ್ಕಲೆಬ್ಬಿಸುವ ಸಲುವಾಗಿ ಪೊಲೀಸ್ ಹಾಗೂ ಜಿಲ್ಲಾಡಳಿತ ದೌರ್ಜನ್ಯ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಯಾರಿಗೂ ಉತ್ತಮ ಪರಿಸ್ಥಿತಿಯಲ್ಲಿ ಬದುಕಲು ಸಾಧ್ಯವಿರಲಿಲ್ಲ. ಕಳೆದ 2012ರ ಮಾರ್ಚ್ 3ರಂದು ನನ್ನನ್ನು ಮತ್ತು ತಂದೆಯನ್ನು ಎಎನ್ಎಫ್ ತಂಡ ಮನೆಯಿಂದ ಬಂಧಿಸಿತ್ತು. ಆ ಪ್ರಕರಣದ ತೀರ್ಪು ಬಂದಿದೆ. ನಮ್ಮನ್ನು ನಿರ್ದೋಷಿಗಳೆಂದು ಘೋಷಿಸಲಾಗಿದೆ ಎಂದರು.

ಅರಣ್ಯ ಪ್ರದೇಶದಿಂದ ಅಲ್ಲಿನ ಬುಡಕಟ್ಟು ಸಮುದಾಯದವರನ್ನು ಒಕ್ಕಲೆಬ್ಬಿಸಿ ಕಳುಹಿಸುವುದು ಆಗಿನ ರಾಜ್ಯ ಸರ್ಕಾರದ ಷಡ್ಯಂತ್ರವಾಗಿತ್ತು. ಕುದುರೇಮುಖ ರಾಷ್ಟ್ರೀಯ ಉದ್ಯಾನದ ಹೆಸರಲ್ಲಿ ನಮ್ಮನ್ನು ಒಕ್ಕಲೆಬ್ಬಿಸುವ ತಂತ್ರ ನಡೆದಿತ್ತು. 10 ಲಕ್ಷ ರೂ.ಗಳಿಗೆ ನಾವು ಭೂಮಿಯನ್ನು ಕಳೆದುಕೊಳ್ಳಲು ತಯಾರಿರಲಿಲ್ಲ. ಭೂಮಿಯನ್ನು ವ್ಯಾಪಾರದ ದೃಷ್ಟಿಯಿಂದ ನೋಡಿರಲಿಲ್ಲ. ಅರಣ್ಯದಲ್ಲಿದ್ದರೂ ಹೊರಬರಲು ನಾವು ತಯಾರಿರಲಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯು ಜನರಿಗೆ ಕಿರುಕುಳ ನೀಡಲು ಪ್ರಾರಂಭಿಸಿತು. ನಮ್ಮ ಮೇಲೆ ಹಲವು ಒತ್ತಡಗಳನ್ನು ಹೇರತೊಡಗಿತು. ಇದನ್ನು ಪ್ರತಿಭಟಿಸಿದ್ದೇ ಸರ್ಕಾರಕ್ಕೆ ಮುಜುಗರವಾಯಿತು. ಗ್ರಾಮದಲ್ಲಿ ನಾನು ಸ್ನಾತಕೋತ್ತರ ಪದವಿ ಪಡೆದಿದ್ದವನು ನಾನೊಬ್ಬನೇ ಆಗಿದ್ದೆ. ನನ್ನನ್ನು ಮಟ್ಟ ಹಾಕಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಇಲಾಖೆ ಆಲೋಚಿಸಿತ್ತೇನೋ ಎಂದು ಅನುಮಾನ ವ್ಯಕ್ತಪಡಿಸಿದರು.

ಮೂರು ತಿಂಗಳು ಜೈಲಿನಲ್ಲಿ ಇಡಲಾಗಿತ್ತು. ಕೈಕೋಳ ತೊಡಿಸಿಯೇ ಮಂಗಳೂರು ವಿವಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಿದ್ದರು. ಈಗ ಪ್ರಕರಣ ಸುಖಾಂತ್ಯಗೊಂಡಿದೆ. 9 ವರ್ಷಗಳ ದೀರ್ಘಾವಧಿ ನಂತರ ನ್ಯಾಯ ಸಿಕ್ಕಿದಂತಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನಾತ್ಮಕವಾಗಿ ನಡೆಸಿದ ಹೋರಾಟಕ್ಕೆ ಸಂದ ಜಯವಾಗಿದೆ. ಡಿವೈಎಫ್ಐ, ಸಿಪಿಎಂ, ಎಸ್ಎಫ್ಐ, ದಲಿತ ಸಂಘಟನೆ, ನ್ಯಾಯವಾದಿಗಳು, ಹಲವು ಬಂಧುಗಳು ನಮಗೆ ಧ್ವನಿಯಾಗಿ ನಿಂತು ನ್ಯಾಯಸಮ್ಮತ ಹೋರಾಟಕ್ಕೆ ಸಹಕರಿಸಿದ್ದಾರೆ ಎಂದು ಶ್ಲಾಘಿಷಿದರು.

Related Articles

Leave a Reply

Your email address will not be published. Required fields are marked *

Back to top button